ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಕನ್ನಡ ಸಿನಿಮಾ ನಟಿಯರು ಸಿಸಿಬಿ ಕಚೇರಿ ಹೊರತುಪಡಿಸಿ ಬೇರೆಡೆ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ಕನ್ನಡ ಸಿನಿಮಾ ನಟಿಯರು ಭಾಗಿಯಾದ ಆರೋಪದ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆ ನಡೆಸಲು ಸಿಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ, ಆ ನಟಿಯರು ಸಿಸಿಬಿ ಕಚೇರಿ ಬೇಡ, ಬೇರೆ ಕಡೆ ವಿಚಾರಣೆ ನಡೆಸಲು ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ.
ಈ ಪ್ರಕರಣದಲ್ಲಿ ನಮ್ಮ ಪಾತ್ರ ಇಲ್ಲ. ಇದರಿಂದಾಗಿ ನಮಗಿರುವ ಜನಪ್ರಿಯತೆ ಕುಗ್ಗುತ್ತದೆ. ನಮ್ಮ ಹೆಸರಿಗೆ ಧಕ್ಕೆ ಉಂಟಾಗುತ್ತದೆ. ಹಾಗಾಗಿ ಬೇರೆಡೆ ವಿಚಾರಣೆ ನಡೆಸುವಂತೆ ಹಿರಿಯ ಅಧಿಕಾರಿಗಳಿಗೆ ರಾಜಕೀಯ ನಾಯಕರ ಕಡೆಯಿಂದ ಒತ್ತಡ ಹಾಕಿಸುತ್ತಿದ್ದಾರೆ ಎಂದು ಸಿಸಿಬಿಯ ಉನ್ನತ ಮೂಲಗಳು ತಿಳಿಸಿವೆ.
ಈ ಹಿನ್ನೆಲೆ ಸಿಐಡಿ ಕಚೇರಿ ಅಥವಾ ಬೇರೆ ಸ್ಥಳದಲ್ಲಿ ವಿಚಾರಣೆ ನಡೆಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.