ಬೆಂಗಳೂರು : ತುಟಿಗೆ ತುಪ್ಪ ಸವರುವ ರೀತಿಯ ಯೋಜನೆಗಳನ್ನು ಬಿಜೆಪಿ ಸರ್ಕಾರ ಯೋಚಿಸುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ತರಬೇತಿ ಕಾರ್ಯಾಗಾರಕ್ಕೆ ತೆರಳುವ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿವಿಧ ಘೋಷಣೆಗಳ ಮೂಲಕ ಹೈದ್ರಾಬಾದ್ ಕರ್ನಾಟಕದಲ್ಲಿ ಮಲತಾಯಿ ಧೋರಣೆ ಮಾಡಲು ಸರ್ಕಾರ ಮುಂದಾಗಿದೆ. ಬಿಜೆಪಿ ಕೋಮುವಾದಿ ಪಕ್ಷ ಅಂತಾ ಜಗತ್ ಜಾಹೀರಾಗಿದೆ. ಗೋಹತ್ಯೆ ನಿಷೇಧ ಮಾಡುತ್ತೇವೆ ಎಂಬ ವಿಚಾರ ಕೂಡ ಇದರಲ್ಲಿ ಒಂದು ಎಂದರು.
ಬಸವ ಕಲ್ಯಾಣ ಮುಖ್ಯವಾದ ಕ್ಷೇತ್ರ. ನನ್ನ ಕ್ಷೇತ್ರಕ್ಕೆ ತುಂಬಾ ಹತ್ತಿರವಾಗಿದೆ. ನನ್ನ ನೇತೃತ್ವದಲ್ಲಿ ಅಭ್ಯರ್ಥಿ ಆಯ್ಕೆ ಮಾಡುವುದಕ್ಕೆ ಸಮಿತಿ ಮಾಡಿದೆ. ಗೆಲ್ಲುವ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹೋದರಿಗೂ ಅರ್ಹತೆ ಇದೆ. ಕೆಲ ಕಾರ್ಯಕರ್ತರು ಅವರಿಗೆ ಟಿಕೆಟ್ ಕೊಡಿ ಎಂದು ಕೇಳಿದ್ದಾರೆ. ಚರ್ಚೆ ಮಾಡಿ ಯಾರು ಅರ್ಹರು ಎಂದು ತೀರ್ಮಾನ ಮಾಡುತ್ತೇವೆ.
ಗಾಂಧಿ ಹೇಳಿದ್ದು ಪ್ರೀತಿ ಮಾಡುವ ಹಿಂದುತ್ವ. ಬಿಜೆಪಿ ಹೇಳುತ್ತಿರುವುದು ದ್ವೇಷ ಮಾಡುವ ಹಿಂದುತ್ವ. ಬೇರು ಮಟ್ಟದಲ್ಲಿ ಕಾಂಗ್ರೆಸ್ ಬಲವರ್ಧನೆ ಮಾಡುವ ಕೆಲಸ ಮಾಡುತ್ತಿದೆ. ಬಿಜೆಪಿಯವರು ಇತಿಹಾಸ ತಿರುಚುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ತರಬೇತಿ ಕಾರ್ಯಗಾರ ಮಾಡಲು ನಿರ್ಧಾರ ಮಾಡಿದೆ. ಇದನ್ನು ಗ್ರಾಮ ಮಟ್ಟದಲ್ಲಿ ಕೂಡ ಮಾಡುತ್ತೇವೆ. ಜನರಿಗೆ ಯುವಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ ಎಂದರು.