ಬೆಂಗಳೂರು: ನಾವು ರಾಜ್ಯದ ಹಿತಕ್ಕಾಗಿ ನೀರಿಗಾಗಿ ನಡಿಗೆ ಮಾಡುತ್ತಿದ್ದೇವೆ, ರಾಜಕೀಯಕ್ಕಾಗಿ ಅಲ್ಲ. ಕಾನೂನು, ಕೋವಿಡ್ ನಿಯಮ ಅನುಸರಿಸಿ ಕಾರ್ಯಕ್ರಮ ಯಶಸ್ವಿಗೊಳಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆ ಜಂಟಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಾವು ಈ ಹಿಂದೆ ಕೈಗೊಂಡ ನಿರ್ಧಾರಕ್ಕೆ ಬದ್ಧವಾಗಿದ್ದೇವೆ. ಯಾವುದೇ ಬದಲಾವಣೆ ಇಲ್ಲ. ಯಾವುದೇ ಅಡೆತಡೆಗೂ ಬಗ್ಗಲ್ಲ ಎಂದರು.
ನೀರಿಗಾಗಿ ನಡಿಗೆಗೆ ಸಿದ್ಧತೆ:
ನೀರಿಗಾಗಿ ನಡಿಗೆಗೆ ಸಿದ್ಧತೆ ಬಹುತೇಕ ಪೂರ್ಣಗೊಂಡಿದೆ. ಇದನ್ನು ಸರ್ಕಾರ ಹಾಗೂ ಕೆಲ ಪಕ್ಷದವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ನಮಗೆ ಬೆಂಬಲ ಸಿಕ್ಕಿದೆ. ಆದರೆ ಇದೀಗ ಕೋವಿಡ್ ನೆಪವೊಡ್ಡಿ ನಿರ್ಬಂಧ ಹೇರುವ ಕಾರ್ಯ ಆಗುತ್ತಿದೆ. ವಾರಾಂತ್ಯ ಕರ್ಫ್ಯೂ ಜೊತೆ ವಾರದ ದಿನಗಳಲ್ಲಿ ಒಂದಿಷ್ಟು ನಿರ್ಬಂಧ ಹೇರಿದ್ದಾರೆ. ಆದ್ರೆ ನಾವು ಹಿಂದೆ ಸರಿಯಲ್ಲ. ಜ.19 ರಂದು ಬಹಿರಂಗ ಸಮಾವೇಶ ನಡೆಸುವ ಮೂಲಕ ಯಾತ್ರೆ ಮುಕ್ತಾಯ ಮಾಡುತ್ತೇವೆ.
ಉರಿಯೋ ಸೂರ್ಯನನ್ನು ಹಿಡಿಯೋಕೆ ಆಗಲ್ಲ, ಹರಿಯೋ ನೀರನ್ನು ತಡೆಯೋಕೆ ಆಗಲ್ಲ. ಇದನ್ನು ಬಿಜೆಪಿಯವರು ಅರ್ಥ ಮಾಡಿಕೊಂಡರೆ ಸಾಕು. ನಮ್ಮ ಕಾರ್ಯಕ್ರಮಕ್ಕೆ ನಾವು ಬದ್ಧರಿದ್ದೇವೆ. ಆದ್ರೆ ನಮ್ಮನ್ನು ತಡೆಯಲು ತಂತ್ರ ರೂಪಿಸಿ ಕೋವಿಡ್ ನೆಪ ಕೊಟ್ಟಿದ್ದಾರೆ. ಕೋವಿಡ್ ಪ್ರಕರಣಗಳು ಜಾಸ್ತಿ ಆಗಿದೆ ಎಂದು ನಿರ್ಬಂಧ ಹಾಕುತ್ತಿದ್ದಾರೆ. ಆದರೆ ನಿಗದಿಯಂತೆ ಬೆಂಗಳೂರಿನ ಕಡೆ ನಾವು ಹೆಜ್ಜೆ ಹಾಕುತ್ತೇವೆ ಎಂದರು.
'ವಿಳಂಬ ಮಾಡಿದ್ದು ಬಿಜೆಪಿ'
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಮೇಕೆದಾಟು ಯೋಜನೆ ವಿಳಂಬವಾಗುತ್ತಿದೆ. ನಾವು ಬಹಳ ದಿನಗಳಿಂದ ಕಾದೆವು, ಆದರೆ ಆಗಲಿಲ್ಲ. ರಾಜ್ಯದ ಜನರ ಹಿತದೃಷ್ಟಿಯಿಂದ ಈ ನಿರ್ಧಾರ ಮಾಡಿದ್ದೇವೆ. ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಪ್ರತಿಭಟನೆ ಇಟ್ಟುಕೊಂಡಿದ್ದೇವೆ.
'ಕೋವಿಡ್ ರೂಲ್ಸ್ ಮರೆಯಲ್ಲ'
ಆದರೆ ನಿನ್ನೆ ಸರ್ಕಾರ 15 ದಿನಗಳ ಕಾಲ ಕಠಿಣ ರೂಲ್ಸ್ ಜಾರಿ ಮಾಡಿದೆ. ನಾವು 9 ರಿಂದ 19 ರವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ನಾವು ಸರ್ಕಾರವನ್ನು ನಡೆಸಿದವರು. ನಮಗೂ ನಮ್ಮ ಜವಾಬ್ದಾರಿಗಳ ಅರಿವಿದೆ. ಕಾನೂನು ಕೈಗೆತ್ತಿಕೊಳ್ಳುವ ಉದ್ದೇಶ ನಮಗಿಲ್ಲ. ಸರ್ಕಾರದ ನಿಯಮ ಉಲ್ಲಂಘನೆ ಮಾಡಲ್ಲ. ಎಲ್ಲಾ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ನಮ್ಮ ಹೋರಾಟ ನಡೆಯಬಾರದೆಂಬ ಬಿಜೆಪಿಯವರ ಷಡ್ಯಂತ್ರವಿದೆ. ಯೋಜನೆಗಳ ಅನುಷ್ಠಾನ, ಅಭಿವೃದ್ಧಿ ವಿಚಾರದಲ್ಲಿ ಅವರು ಯಾವ ಪ್ರಯತ್ನವನ್ನೂ ಮಾಡಿಲ್ಲ ಎಂದು ಆರೋಪಿಸಿದರು.
ಯೋಜನೆಯನ್ನು ನಮ್ಮ ಸರ್ಕಾರ ಪ್ರಾರಂಭ ಮಾಡಿತು. ಡಿಪಿಆರ್ ತಯಾರು ಕೂಡ ಮಾಡಿದ್ದೆವು. ಕೇಂದ್ರ ಜಲ ಆಯೋಗಕ್ಕೂ ಕಳಿಸಿದ್ದೆವು ಎಂದರು. ಇನ್ನೂ ಯಡಿಯೂರಪ್ಪ ಅವರು ಒಂದು ಹೇಳಿಕೆ ಕೊಟ್ಟಿದ್ದು ಬಿಟ್ಟರೆ ಅವರು ಕೂಡ ಯಾವ ಪ್ರಯತ್ನವನ್ನೂ ಮಾಡಿಲ್ಲ. ಬೆಂಗಳೂರಿನಲ್ಲಿ ಶೇ.30 ರಷ್ಟು ಕೂಡ ಕಾವೇರಿ ನೀರು ಕೊಟ್ಟಿಲ್ಲ. ಈ ಯೋಜನೆಯಿಂದ ಎರಡೂವರೆ ಕೋಟಿ ಜನರಿಗೆ ಅನುಕೂಲ ಆಗಲಿದೆ. ಬೆಂಗಳೂರು, ಅಕ್ಕಪಕ್ಕದ ಜಿಲ್ಲೆಗೆ ಅನುಕೂಲವಾಗಲಿದೆ. ಆದರೆ ಇವರು ಕಾಲಹರಣ ಮಾಡುತ್ತಿದ್ದಾರೆ ಎಂದು ಅಸಮಧಾನ ಹೊರಹಾಕಿದರು.
ಇದನ್ನೂ ಓದಿ: ಅಲೆಮಾರಿ ಜನಾಂಗಕ್ಕೆ ಪ್ರತ್ಯೇಕ ನಿಗಮದ ಅಗತ್ಯವಿದೆ: ಸಿದ್ದರಾಮಯ್ಯ
ಕೋವಿಡ್ ವಿಚಾರವಾಗಿ ಸರ್ಕಾರ ಸೂಕ್ರ ಕ್ರಮ ಕೈಗೊಂಡಿಲ್ಲ. ಎರಡನೇ ಅಲೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸತ್ತರು ಎಂದು ಕಿಡಿ ಕಾರಿದರು. ಮೂರನೇ ಅಲೆ ಹರಡೋಕೆ ಕಾರಣ ಯಾರು? ಮೋದಿ ಸಭೆಯಲ್ಲಿ ಎಲ್ಲರಿಗೂ ಹೆಚ್ಚು ಇಮ್ಯುನಿಟಿ ಇರುತ್ತಾ? ಎಂದು ಪ್ರಶ್ನಿಸಿ ಬಿಜೆಪಿಯವರದ್ದು ಡಬಲ್ ಸ್ಟಾಂಡರ್ಡ್ ಎಂದರು.