ಬೆಂಗಳೂರು: 2023ರ ವಿಧಾನಸಭೆ ಚುನಾವಣೆ ಗೆಲುವು ಹಾಗೂ 2024ರ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜ್ಯ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಒಗ್ಗಟ್ಟಾಗಿರುವಂತೆ ಕಾಣಿಸುತ್ತಿದ್ದಾರೆ. ಜತೆಗೆ ಮಸ್ಕಿಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವು ಕಾಂಗ್ರೆಸ್ ಪಕ್ಷಕ್ಕೆ ನವ ಚೈತನ್ಯ ಮೂಡಿಸಿದೆ. ಅಲ್ಲದೇ ಬೆಳಗಾವಿ ಲೋಕಸಭೆ ಕ್ಷೇತ್ರ ಉಪಚುನಾವಣೆಯಲ್ಲಿ ಪಕ್ಷಕ್ಕೆ ಸಿಕ್ಕ ಮನ್ನಣೆ ಕಾಂಗ್ರೆಸ್ ನಾಯಕರಲ್ಲಿ ಹೊಸ ಜೀವಸೆಲೆ ಮೂಡಿಸಿದೆ. ಉತ್ತರ ಕರ್ನಾಟಕ ಹಾಗೂ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪರ ಜನರ ಒಲವು ಇರುವುದನ್ನು ಗೃಹಿಸಿರುವ ರಾಜ್ಯ ಕಾಂಗ್ರೆಸ್ ನಾಯಕರು ಈ ಭಾಗವನ್ನೇ ಹೆಚ್ಚಾಗಿ ಕೇಂದ್ರೀಕರಿಸಲು ತೀರ್ಮಾನಿಸಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮ ಇತರೆ ನಾಯಕರ ಜತೆ ಸೇರಿ ಪ್ರತ್ಯೇಕವಾಗಿ ವಿವಿಧ ಸಭೆ, ಸಮಾರಂಭ ಹಾಗೂ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ. ಕೋವಿಡ್ ನಿಯಮಾವಳಿಗಳು ಇರುವ ಹಿನ್ನೆಲೆ ಎಲ್ಲ ನಾಯಕರು ಒಂದೇ ಸಾರಿ ತೆರಳದೇ ಆಗಾಗ ತೆರಳಿ ಜನರ ಒಲವು ಗಳಿಸಲು ತೀರ್ಮಾನಿಸಿದ್ದಾರೆ.
ಸದ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೊರೊನಾ ನಿಯಂತ್ರಣ ಮತ್ತು ಪರಿಹಾರ ಕಾರ್ಯಕ್ರಮಗಳ ಪರಿಶೀಲನೆ ಹೆಸರಿನಲ್ಲಿ ನಿನ್ನೆಯಿಂದ ಹುಬ್ಬಳ್ಳಿ - ಧಾರವಾಡ, ಹಾವೇರಿ ಪ್ರವಾಸ ಕೈಗೊಂಡಿದ್ದಾರೆ. ಜೂ.3ರಂದು ಮಂಡ್ಯಕ್ಕೆ ಭೇಟಿ ಕೊಡಲಿದ್ದಾರೆ. ಇಲ್ಲೆಲ್ಲ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಡಲಿರುವ ಅವರು, ಶತಾಯ ಗತಾಯ ಮುಂದಿನ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುವಂತೆ ಮಾಡುವ ನಿಟ್ಟಿನಲ್ಲಿ ಮುನ್ನಡೆದಿದ್ದಾರೆ.
ನಿರಂತರ ಪ್ರವಾಸ
ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಅವಾಂತರ ಸೃಷ್ಟಿಸಿದ ಹಿನ್ನೆಲೆ ಲಾಕ್ಡೌನ್ ಜಾರಿಯಲ್ಲಿದೆ. ಜೂ.7ರ ನಂತರ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎನ್ನುವುದನ್ನು ಕಾಂಗ್ರೆಸ್ ನಾಯಕರು ಕಾದು ನೋಡುತ್ತಿದ್ದಾರೆ. ಒಂದೊಮ್ಮೆ ಲಾಕ್ಡೌನ್ ಮುಂದುವರಿದರೆ, ರಾಜ್ಯ ಕಾಂಗ್ರೆಸ್ ನಾಯಕರು ಇನ್ನಷ್ಟು ದಿನ ಆನ್ಲೈನ್ ಮೂಲಕ ಪಕ್ಷದ ಮುಖಂಡರನ್ನು ಸಂಪರ್ಕಿಸುವ ಯತ್ನ ಮಾಡಲಿದ್ದಾರೆ.
ಲಾಕ್ಡೌನ್ ತೆರವಾದರೆ ರಾಜ್ಯ ಪ್ರವಾಸ ಆರಂಭಿಸಲು ತೀರ್ಮಾನಿಸಿದ್ದಾರೆ. ರಾಜ್ಯದ ಪ್ರತಿಯೊಂದು ಜಿಲ್ಲೆಯ ನಾಯಕರ ಜತೆ ಮಾತುಕತೆ ನಡೆಸಿ ಸಭೆ ಸಮಾರಂಭ ಹಮ್ಮಿಕೊಳ್ಳಲು ಮಾನಸಿಕವಾಗಿ ಸಜ್ಜಾಗುವಂತೆ ರಾಜ್ಯ ನಾಯಕರು ಸೂಚಿಸಿದ್ದು, ಲಾಕ್ಡೌನ್ ತೆರವಾಗುತ್ತಿದ್ದಂತೆ ಮುಂದಿನ ಒಂದೆರಡು ತಿಂಗಳು ನಿರಂತರವಾಗಿ ರಾಜ್ಯ ಸುತ್ತಿ, ಪಕ್ಷ ಸಂಘಟನೆಗೆ ಕಾರ್ಯಯೋಜನೆ ರೂಪಿಸಲು ತೀರ್ಮಾನಿಸಿದ್ದಾರೆ. 2023ರ ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಇನ್ನು ಹೆಚ್ಚು ಸಮಯವಿಲ್ಲ. ಪಕ್ಷ ಬಲವಾಗಿದೆ, ಅಧಿಕಾರಕ್ಕೆ ತಂದರೆ ಉತ್ತಮ ಆಡಳಿತ ನೀಡುತ್ತೇವೆ ಎನ್ನುವ ಭರವಸೆಯನ್ನು ಜನರಿಗೆ ಮೂಡಿಸುವ ಯತ್ನ ಕಾಂಗ್ರೆಸ್ ಮಾಡಲಿದೆ.
ಒಗ್ಗಟ್ಟಾಗಿ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬನ್ನಿ, ಆಮೇಲೆ ಯಾರ ಪರಿಶ್ರಮ ಎಷ್ಟಿದೆ ಎನ್ನುವುದರ ಮೇಲೆ ಅಧಿಕಾರ ಹಂಚಿಕೆ ಮಾಡಲಾಗುವುದು ಎಂದು ಪಕ್ಷದ ಹೈಕಮಾಂಡ್ ಸ್ಪಷ್ಟವಾಗಿ ತಿಳಿಸಿದೆ. ಚುನಾವಣೆಗೆ ಮುನ್ನ ಯಾವುದೇ ಬಣ ರಾಜಕೀಯ ಬೇಡ. ಜನರ ಮನಸಿನಲ್ಲಿ ಕಾಂಗ್ರೆಸ್ ಎಲ್ಲ ನಾಯಕರೂ ಒಂದಾಗಿದ್ದಾರೆ ಎಂಬ ಭಾವನೆ ಇರಲಿ. ಅಧಿಕಾರ ಕೈ ಸೇರಿದ ಮೇಲೆ ಮುಂದಿನ ಆಯ್ಕೆ ಮಾಡೋಣ ಎಂದು ಕಾಂಗ್ರೆಸ್ ಹೈಕಮಾಂಡ್ ನಾಯಕರು ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ. ಇದಕ್ಕೆ ತಕ್ಕಂತೆ ಮುಂದಿನ ದಿನಗಳಲ್ಲಿ ಇಲ್ಲಿನ ನಾಯಕರು ನಡೆದುಕೊಳ್ಳಬೇಕಿದೆ.