ಬೆಂಗಳೂರು: ಮಹಾನಗರ ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಗುರುವಾರ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ, ಬಿಜೆಪಿ ಸದಸ್ಯ ತುಳಸಿ ಮುನಿರಾಜು ಗೌಡರ ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿಗಳ ಪರವಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಈ ರೀತಿಯಾಗಿ ಉತ್ತರ ನೀಡಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ 198 ವಾರ್ಡ್‌ಗಳಲ್ಲಿ ಪಾಲಿಕೆಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು- ಹೆರಿಗೆ ಆಸ್ಪತ್ರೆಗಳು, ರೆಫರಲ್ ಆಸ್ಪತ್ರೆಗಳು, ಡಯಾಲಿಸಿಸ್ ಘಟಕಗಳಲ್ಲಿ ಉತ್ಪತ್ತಿಯಾಗುವ ಜೈವಿಕ ತ್ಯಾಜ್ಯದ ವಿಲೇವಾರಿಯನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕೃತ ಸಂಸ್ಥೆಗಳಾದ ಮೆ. ಮಡಿಕೇರ್ ಎನ್‌ವಿರಾನ್‌ಮೆಂಟಲ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್, ಮೆ. ಮರಡಿ ಎಕೋ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್, ಮೆ. ಅನು ಆಟೋಕ್ಷೇವ್ ಅಂಡ್ ಇನ್ಸಿನ್ ಸರ್ವೀಸಸ್ ಮತ್ತು ಮೆ. ಎ.ವಿ ಇನ್ನಿನ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಗಳಿಗೆ ಟೆಂಡರ್ ಮುಖಾಂತರ ಬಿಬಿಎಂಪಿ ವತಿಯಿಂದ ಕಾರ್ಯಾದೇಶ ನೀಡಲಾಗಿರುತ್ತದೆ.
ಸದರಿ ಸಂಸ್ಥೆಗಳ ಮೂಲಕ, ಪಾಲಿಕೆಯ ಆಸ್ಪತ್ರೆಗಳಲ್ಲಿ ಉತ್ಪತ್ತಿಯಾಗುವ ಜೈವಿಕ ತ್ಯಾಜ್ಯ ವಿಲೇವಾರಿಯನ್ನು ನಿರ್ವಹಿಸಲಾಗುತ್ತಿದೆ. ಇವರನ್ನು ಹೊರತುಪಡಿಸಿ ಬೇರೆ ಯಾವುದೇ ಸಂಸ್ಥೆಯವರು ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಮಾಡಿದರೆ ಇಲ್ಲವೇ ಇದೇ ಸಂಸ್ಥೆಗಳು ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಿದರೂ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಮತ್ತು ಬೆಂಗಳೂರು ನಗರ ಜಿಲ್ಲಾದ್ಯಂತ ಇರುವ ಆಸ್ಪತ್ರೆಗಳು, ಲ್ಯಾಬ್‌ಗಳು, ಕ್ಲಿನಿಕ್‌ಗಳಿಗೆ ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷ್ಮೆಂಟ್ ಆ್ಯಕ್ಟ್ ಪ್ರಕಾರ ನೋಂದಣಿ ಪ್ರಮಾಣ ಪತ್ರ ನೀಡುವ ಕಾರ್ಯವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಬೆಂಗಳೂರು ನಗರ ಜಿಲ್ಲೆ ವತಿಯಿಂದ ನಿರ್ವಹಿಸಲಾಗುತ್ತಿದೆ ಎಂದರು.
ಇದನ್ನೂ ಓದಿ: ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡಿ ಜನರಿಂದ ಪಿಕ್ ಪಾಕೇಟ್ ಮಾಡುತ್ತಿದೆ: ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ
ರಾಜ್ಯದಲ್ಲಿ ಸದ್ಯ ಈ ಕಾಯ್ದೆ ಜಾರಿ ಮಾಡುವ ಸಕ್ಷಮ ಪ್ರಾಧಿಕಾರವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ ಆಗಿದೆ. ಸದರಿ ಆಸ್ಪತ್ರೆಗಳು, ಲ್ಯಾಬ್‌ಗಳು, ಕ್ಲಿನಿಕ್‌ಗಳಲ್ಲಿ ಉತ್ಪತ್ತಿಯಾಗುವ ಜೈವಿಕ ತ್ಯಾಜ್ಯದ ವಿಲೇವಾರಿಯ ಬಗ್ಗೆ ಮೇಲುಸ್ತುವಾರಿ ಮಾಡುವ ಅಧಿಕಾರ ಮತ್ತು ಜವಾಬ್ದಾರಿ ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಇರುತ್ತದೆ.
ಆದರಂತೆ, ಜೈವಿಕ ತ್ಯಾಜ್ಯದ ವಿಲೇವಾರಿಯನ್ನು ಮಾಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ವತಿಯಿಂದ ಈಗಾಗಲೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ ಮತ್ತು ಪರಿಸರ ಅಧಿಕಾರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಂಗಳೂರು ದಕ್ಷಿಣ ತಾಲೂಕು ಅವರುಗಳಿಗೆ ಪತ್ರ ಬರೆಯಲಾಗಿರುತ್ತದೆ ಎಂದು ವಿವರಿಸಿದರು.