ಬೆಂಗಳೂರು: ಮನೆಯ ಬಳಿ ಆಟವಾಡುತ್ತಿದ್ದ ನಾಲ್ಕು ವರ್ಷದ ಹೆಣ್ಣು ಮಗುವನ್ನು ಅಪರಿಚಿತ ವ್ಯಕ್ತಿಯೋರ್ವ ಅಪಹರಿಸಲು ಯತ್ನಿಸಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೆಂಪೇಗೌಡ ಸರ್ಕಲ್ ಬಳಿ ನಿನ್ನೆ ಬೆಳಗ್ಗೆಯಿಂದ ಸಂಜೆಯವರೆಗೂ ಅನುಮಾನಸ್ಪಾದ ರೀತಿಯಲ್ಲಿ ಅಪರಿಚಿತ ವ್ಯಕ್ತಿಯೋರ್ವ ಓಡಾಡುತ್ತಿದ್ದ. ಮನೆ ಮುಂದೆ ನಿಂತುಕೊಳ್ಳುತ್ತಿದ್ದ ಈತ, ಆಟವಾಡುವ ಮಕ್ಕಳನ್ನು ಟಾರ್ಗೆಟ್ ಮಾಡಿ ಅವರಿಗೆ ಗದರಿಸುತ್ತಿದ್ದ. ಜೊತೆಗೆ, ಮಕ್ಕಳನ್ನು ಮಾತನಾಡಿಸಲು ಮುಂದಾಗ್ತಿದ್ದ. ಆತನ ವರ್ತನೆ ನೋಡಿ ಜನರು ಆತಂಕಗೊಂಡಿದ್ದರು.
ನಿನ್ನೆ ಸಂಜೆ ಕೆಂಪೇಗೌಡ ಸರ್ಕಲ್ ಬಳಿ ಕಾರ್ಮಿಕರೊಬ್ಬರ 4 ವರ್ಷದ ಮಗುವನ್ನು ಹೆಗಲಮೇಲೆ ಎತ್ತಿಕೊಂಡು ಹೋಗಲು ಯತ್ನಿಸಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಕೂಡಲೇ ಅತನಿಂದ ಮಗುವನ್ನು ಬಿಡಿಸಲು ಮುಂದಾಗಿದ್ದಾರೆ. ಈ ವೇಳೆ ಮಗು ನೀಡದೆ ಹಲ್ಲೆಗೆ ಮುಂದಾಗಿದ್ದಾನೆ. ಈ ಕುರಿತು ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ವ್ಯಕ್ತಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.