ಬೆಂಗಳೂರು: ಬಾಲಿವುಡ್ನ ಬಹುನಿರೀಕ್ಷಿತ ಚಿತ್ರ '83' ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲಿಸಿದೆ. ಯಾಕಂದ್ರೆ ಭಾರತಕ್ಕೆ ಮೊದಲ ಕ್ರಿಕೆಟ್ ವಿಶ್ವಕಪ್ ಬಗೆಗಿನ ಸಿನಿಮಾ. 1983ರಲ್ಲಿ ಭಾರತ ಕ್ರಿಕೆಟ್ ತಂಡ, ಮೊದಲ ವಿಶ್ವಕಪ್ ಗೆದ್ದ ಬಗ್ಗೆ, 83 ಸಿನಿಮಾ ಬರುತ್ತಾ ಇದ್ದು ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ.
ವಿಶ್ವಕಪ್ ಗೆಲ್ಲಿಸಿಕೊಂಡ ಕ್ರಿಕೆಟ್ ಆಟಗಾರ ಕಪಿಲ್ ದೇವ್ ಜೀವನ ಹಾಗೂ ನಾಯಕ್ವದ ಕಥೆ ಆಧರಿಸಿರುವ 83 ಸಿನಿಮಾದಲ್ಲಿ ರಣವೀರ್ ಸಿಂಗ್ ಕಪಿಲ್ದೇವ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದೇ ಡಿಸೆಂಬರ್ 24 ರಂದು ಕರ್ನಾಟಕ ಸೇರಿದಂತೆ ದೇಶಾದ್ಯಂತ ಸಿನಿಮಾ ಬಿಡುಗಡೆಯಾಗುತ್ತಿದೆ. ಕರ್ನಾಟಕದಲ್ಲಿ 83 ಸಿನಿಮಾವನ್ನ ಕಿಚ್ಚ ಸುದೀಪ್, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್ ತಮ್ಮ ಬಾಲ್ಯದ ಕತೆಯನ್ನು ಕಿಚ್ಚ ಸುದೀಪ್, ಕಪಿಲ್ ದೇವ್ ಮುಂದೆ ಹಂಚಿಕೊಂಡಿದ್ದಾರೆ.
ಹೌದು, 1987 ರ ಸಮಯ ಇರಬಹುದು. ವೆಸ್ಟ್ ಇಂಡೀಸ್ ತಂಡ ಬೆಂಗಳೂರಿಗೆ ಟೆಸ್ಟ್ ಆಡಲು ಬಂದಿತ್ತು. ಆಗ ಕಪಿಲ್ದೇವ್ ನಾಯಕತ್ವದ ಭಾರತ ತಂಡ ಬೆಂಗಳೂರಿಗೆ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಉಳಿದುಕೊಂಡಿತ್ತು. ನಾನು ಕಪಿಲ್ ಅವರನ್ನು ನೋಡುವ ಆಸೆಯಿಂದ ಹೋಟೆಲ್‌ಗೆ ಹೋಗಿದ್ದೆ. ಆಗ ಕಪಿಲ್ ದೇವ್ ಹಾಗೂ ತಂಡ ಹೋಟೆಲ್ ಒಳಗೆ ಹೋಗಬೇಕಾದರೆ ನಾನು ಅವರ ಹಿಂದೆ ಓಡಿದ್ದೆ.
ಕಪಿಲ್ ದೇವ್ ಅವರ ಶರ್ಟ್ ಎಳೆದೆ ಅವರು ನಿಂತು ಏನೆಂದು ಕೇಳಿದರು. ಫೋಟೊ ಬೇಕೆಂದು ನಾನು ಹೇಳಿದೆ. ತೆಗೆಯುವವರು ಯಾರು? ಎಂದು ಕಪಿಲ್ ಕೇಳಿದರು. ನನ್ನ ಅಕ್ಕ ತೆಗೆಯುತ್ತಾರೆ ಎಂದೆ. ಆಕೆಯೂ ನನ್ನ ಹಿಂದೆ ಓಡೋಡಿ ಬಂದಿದ್ದಳು ಎಂದು ನೆನಪು ಮಾಡಿಕೊಂಡರು.
ಆದರೆ ನನ್ನ ಬಳಿ ಆಗ ಫಿಜಿ ಕ್ಯಾಮೆರಾ ಇತ್ತು. ಅಕ್ಕ ಅದರಲ್ಲಿ ನಮ್ಮ ಫೋಟೊ ತೆಗೆಯಲು ಯತ್ನಿಸಿದರು. ಆದರೆ, ಫೋಟೊ ಬರಲಿಲ್ಲ. ಕ್ಯಾಮೆರಾ ಕೆಲಸ ಮಾಡಲಿಲ್ಲ. ನನಗೆ ಅಳು ಬಂತು. ಆದರೆ, ಕಪಿಲ್ ದೇವ್ ನನ್ನನ್ನು ಎತ್ತಿಕೊಂಡು ಸಮಾಧಾನ ಮಾಡಿದರು. ಅಳಬೇಡ ಎಂದು ನನ್ನ ಕಣ್ಣೀರು ಒರೆಸಿದರು ಎಂದು ಹಳೆಯ ಘಟನೆ ಬಗ್ಗೆ ಮೆಲುಕು ಹಾಕಿದರು.
ಅಷ್ಟೇ ಅಲ್ಲ ಆ ನಂತರ ನಾನು ದಿಲೀಪ್ ವೆಂಗಸರ್ಕಾರ್ ಅವರನ್ನು ನೋಡಬೇಕು ಎಂದು ಕೇಳಿದೆ. ಆಗ ಕಪಿಲ್ ದೇವ್ ಯಾವುದೇ ಕೋಪ ಮಾಡಿಕೊಳ್ಳದೇ, ನನ್ನನ್ನು ಕರೆದುಕೊಂಡು ಹೋಗಿ ದಿಲೀಪ್ ವೆಂಗ್‌ಸರ್ಕಾರ್ ಅವರು ಉಳಿದುಕೊಂಡಿದ್ದ ಕೊಠಡಿ ತೋರಿಸಿದರು. ವೆಂಗಸರ್ಕಾರ್, ಅವರ ಪತ್ನಿಯೊಂದಿಗೆ ಇದ್ದಾರೆ ಹಾಗಾಗಿ ನಾನು ಅವರ ರೂಮಿನ ಬಾಗಿಲು ಬಡಿಯುವುದಿಲ್ಲ ಎಂದು ಹೇಳಿ ಹೊರಟು ಹೋದರು ಅಂತಾ ಸುದೀಪ್, ಕಪಿಲ್ ದೇವ್ ಅವರ ಜತೆಗಿನ ಆ ದಿನದ ಗಳಿಗೆಯನ್ನು ಸ್ಮರಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮುಂಬೈನ ರೆಸ್ಟೋರೆಂಟ್ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ವಿಜಯ್ ದೇವರಕೊಂಡ- ರಶ್ಮಿಕಾ ಮಂದಣ್ಣ.
ಇನ್ನು, ಅಂದು ಕಪಿಲ್ ಅವರೊಟ್ಟಿಗೆ ಚಿತ್ರ ತೆಗೆದುಕೊಳ್ಳಲು ಆಗಿರಲಿಲ್ಲ. ಇಷ್ಟು ವರ್ಷದ ಬಳಿಕ ಇಂದು ಅವರೊಟ್ಟಿಗೆ ಚಿತ್ರ ತೆಗೆಸಿಕೊಳ್ಳುವ ಅದೃಷ್ಟ ನನಗೆ ಒದಗಿ ಬಂದಿದೆ. ಈ ಒಂದು ಫೋಟೋಕ್ಕಾಗಿ ಕಾಲ ಕೂಡಿ ಬಂದಿದೆ ಅಂತಾ ಸುದೀಪ್ ಹೇಳ್ತಾ ಇದ್ದಂಗೆ, ಕಪಿಲ್ ದೇವ್ ಸುದೀಪ್ ಅವರನ್ನು ಎಬ್ಬಿಸಿ, ಒಟ್ಟಿಗೆ ಕರೆದುಕೊಂಡು ಬಂದು ಇಂದು, ನಾನು ಸುದೀಪ್ ಜೊತೆ ಫೋಟೋ ತೆಗೆಸಿಕೊಳ್ಳುತ್ತಿದ್ದೀನಿ ಅಂತಾ ಹೇಳಿ ಇಬ್ಬರೂ ಫೋಟೋ ತೆಗದುಕೊಂಡರು.