ದೇವನಹಳ್ಳಿ : ಬೆಂಗಳೂರು-ಜೈಪುರದ ಇಂಡಿಗೋ ವಿಮಾನದ ಶೌಚಾಲಯ ಬಳಿ ಸಿಕ್ಕ ಟಿಶ್ಯೂ ಪೇಪರ್ನಲ್ಲಿ ಬಾಂಬ್ ಬೆದರಿಕೆಯ ಸಂದೇಶವೊಂದು ಪತ್ತೆಯಾಗಿದೆ.ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಬಾಂಬ್ ಬೆದರಿಕೆ ಬರೆದ ಇಬ್ಬರು ಶಂಕಿತರನ್ನ ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಾನುವಾರ ರಾತ್ರಿ 9:26ಕ್ಕೆ ಇಂಡಿಗೋ 6E- 556 ವಿಮಾನ ಜೈಪುರದಿಂದ ಆಗಮಿಸಿದೆ. ವಿಮಾನದ ಶೌಚಾಲಯದ ಬಳಿ ಟಿಶ್ಯೂ ಪೇಪರ್ನಲ್ಲಿ ನೀಲಿ ಬಣ್ಣದ ಶಾಯಿಯಲ್ಲಿ ‘ಲ್ಯಾಂಡ್ ಮಾಡಬೇಡಿ, ವಿಮಾನದಲ್ಲಿ ಬಾಂಬ್ ಇದೆ’ ಎಂದು ಹಿಂದಿ ಅಕ್ಷರದಲ್ಲಿ ಬರೆದ ಸಂದೇಶ ಆತಂಕವನ್ನುಂಟು ಮಾಡಿದೆ.
ವಿಮಾನದ ಸಿಬ್ಬಂದಿಯೊಬ್ಬರು ಶೌಚಾಲಯದ ಹಿಂಭಾಗ ಹೋದಾಗ ಬಾಂಬ್ ಬೆದರಿಕೆ ಸಂದೇಶದ ಟಿಶ್ಯೂ ಪೇಪರ್ ಪತ್ತೆಯಾಗಿದೆ. ತಕ್ಷಣವೇ ಕ್ಯಾಪ್ಟನ್ಗೆ ತಿಳಿಸಿದ್ದಾರೆ. ಸಿಐಎಸ್ಎಫ್ ಅಧಿಕಾರಿಗಳ ಗಮನಕ್ಕೆ ಬಾಂಬ್ ಬೆದರಿಕೆಯ ಸಂದೇಶ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಸಿಐಎಸ್ಎಫ್ ಸಿಬ್ಬಂದಿ ವಿಮಾನ ತಪಾಸಣೆಗೆ ಮುಂದಾಗಿದ್ದಾರೆ. ವಿಮಾನದಲ್ಲಿದ್ದ 174 ಪ್ರಯಾಣಿಕರನ್ನ ಕೆಳಗಿಳಿಸಿ ಬ್ಯಾಗ್ಗಳ ತಪಾಸಣೆ ಕೈಗೊಳ್ಳಲಾಯಿತು.
ಬಾಂಬ್ ಬೆದರಿಕೆಯ ಶಂಕಿತರನ್ನು ಪತ್ತೆ ಮಾಡಲು ಸಿಐಎಸ್ಎಫ್ ಅಧಿಕಾರಿಗಳು ಪ್ರಯಾಣಿಕರ ಕೈಬರಹದ ಪರೀಕ್ಷೆ ನಡೆಸಿದರು. ಹಿಂದಿಯಲ್ಲಿ ಬರೆಯಲು ಬಾರದವರನ್ನು ಪರೀಕ್ಷೆಯಿಂದ ಹೊರಗೆ ಇಡಲಾಯಿತು. ಅಂತಿಮವಾಗಿ 20 ಜನರನ್ನ ಶಾರ್ಟ್ ಲಿಸ್ಟ್ ನೋಡಿ ಇದರಲ್ಲಿ ಇಬ್ಬರು ಶಂಕಿತರನ್ನು ಪತ್ತೆ ಮಾಡಿ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಸಂಪೂರ್ಣ ತಪಾಸಣೆ ನಡೆಸಿದ ನಂತರ ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದುಬಂದಿದೆ.
ಓದಿ: ಸರ್ಕಾರಿ ಶಾಲೆಯಲ್ಲಿ ಹ್ಯಾಂಡ್ ಗ್ರೇನೆಡ್ ಪತ್ತೆ: ಬಾಲ್ ಅಂತಾ ತಿಳಿದು ಆಟವಾಡುತ್ತಿದ್ದ ಮಕ್ಕಳು!