ಬೆಂಗಳೂರು: ಸಮಾಜ ಸೇವೆ, ಕ್ರೀಡೆ, ಸಂಗೀತ, ಯೋಗ ಸಾಧಕರ ಹೆಸರಲ್ಲಿ ಆರ್ಎಸ್ಎಸ್ ಕಾರ್ಯಕರ್ತರಿಗೇ ಹೆಚ್ಚು ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ನೀಡಲಾಗಿದೆ ಎಂದು ವಿಪಕ್ಷ ನಾಯಕ ವಾಜಿದ್ ಆರೋಪಿಸಿದ್ದಾರೆ.
ನಾಡಪ್ರಭು ಕೆಂಪೇಗೌಡ ದಿನಾಚರಣೆ ಸರಳವಾಗಿ ಆಚರಿಸಿ, 20 ಜನ ಕೊರೊನಾ ವಾರಿಯರ್ಸ್ಗೆ ಮಾತ್ರ ಪ್ರಶಸ್ತಿ ಕೊಡಲಾಗುವುದು ಎಂದು ಬಿಬಿಎಂಪಿ ಮೇಯರ್ ತಿಳಿಸಿದ್ದರು. ಆದ್ರೆ ಇಪ್ಪತ್ತು ಜನರ ಪಟ್ಟಿ, ಇಂದು 33ಕ್ಕೆ ಏರಿಕೆಯಾಗಿದೆ. ಇದರಲ್ಲಿ ಕೊರೊನಾ ವಾರಿಯರ್ಸ್ ಇರುವುದು ಬೆರಳೆಣಿಕೆ ಮಂದಿಯಷ್ಟೇ. ಉಳಿದಂತೆ ಸಮಾಜ ಸೇವೆ, ಕ್ರೀಡೆ, ಸಂಗೀತ, ಯೋಗ ಸಾಧಕರ ಹೆಸರಲ್ಲಿ ಆರ್ಎಸ್ಎಸ್ ಕಾರ್ಯಕರ್ತರಿಗೇ ಹೆಚ್ಚು ಪ್ರಶಸ್ತಿ ನೀಡಲಾಗಿದೆ ಎಂದು ವಿಪಕ್ಷ ನಾಯಕ ವಾಜಿದ್ ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಅಶ್ವಥ್ ನಾರಾಯಣ್ ಪ್ರಶಸ್ತಿ ಪುರಸ್ಕೃತರ ಆಯ್ಕೆ ಬಗ್ಗೆ ಅಪಸ್ವರ ಸರಿಯಲ್ಲ. ಮೊದಲೇ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ವಾರಿಯರುಗಳಿಗೇ ಕೇಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೇಳಲಾಗಿತ್ತು. ಆದರಂತೆ ಸಾಧಕರನ್ನು ಗುರುತಿಸಿ ಗೌರವಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಅಲ್ಲದೆ ಈ ಬಾರಿ ಆಯ್ಕೆ ಸಮಿತಿಯು ಉತ್ತಮ ಸಾಧಕರನ್ನೇ ಆಯ್ಕೆ ಮಾಡಿದೆ. ಈ ಪೈಕಿ ಹೆಚ್ಚು ಸಂಖ್ಯೆಯಲ್ಲಿ ಕೋವಿಡ್ ವಿರುದ್ಧ ಹೋರಾಟ ನಡೆಸಿದವರನ್ನೇ ಆಯ್ಕೆ ಮಾಡಲಾಗಿದೆ. ಮುಂದಿನ ವರ್ಷ ಎಂದಿನಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.
ಮೊತ್ತ ಮೊದಲು ಕೋವಿಡ್ ಆಸ್ಪತ್ರೆ ಆರಂಭಿಸಿ ಉಳಿದವರಿಗೂ ಮೇಲ್ಪಂಕ್ತಿ ಹಾಕಿಕೊಟ್ಟ ಡಾ. ಆಸೀಮಾ ಭಾನು, ಹೋಮ್ ಕ್ವಾರಂಟೈನ್ ಹಾಗೂ ಮನೆಯಲ್ಲೇ ಚಿಕಿತ್ಸೆ ನೀಡುವ ಬಗ್ಗೆ ಉತ್ತೇಜನ ನೀಡಿದ ಡಾ. ಮೀನಾ ಗಣೇಶ್, ಡಾ, ನವೀನ್ ಬೆನಕಪ್ಪ, ಡಾ. ವೆಂಕಟೇಶ ಮೂರ್ತಿ, ಜೈವಿಕ ತಂತ್ರಜ್ಞಾನದಲ್ಲಿ ಕೆಲಸ ಮಾಡಿರುವ ತಸ್ಲೀಮ್ ಆರೀಫ್ ಸೈಯ್ಯದ್, ಯುವಕರಿಗೆ ಸ್ಫೂರ್ತಿ ಆಗಿರುವ ನಿತಿನ್ ಕಾಮತ್ ಮುಂತಾದವರನ್ನು ಗುರುತಿಸಲಾಗಿದೆ ಎಂದರು.
ಇನ್ನು ಬೆಳಗ್ಗೆಯೇ ಮೇಕ್ರಿ ಸರ್ಕಲ್ ಗಡಿ ಗೋಪುರಕ್ಕೆ ಪೂಜೆ ಸಲ್ಲಿಸಿದರು. ಈ ವೇಳೆ ನಟ ಪುನೀತ್ ರಾಜ್ ಕುಮಾರ್ ಕೂಡಾ ಭಾಗಿಯಾಗಿದ್ದರು.
ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರಾದ ರಾಕೇಶ್ ಮಾತನಾಡಿ, ಸಿವಿಲ್ ಡಿಫೆನ್ಸ್ ವತಿಯಿಂದ ಅನೇಕ ತುರ್ತು ಪರಿಸ್ಥಿತಿಯಲ್ಲಿ ಕೆಲಸ ಮಾಡಿದ್ದೇನೆ. ಹೀಗಾಗಿ ಈ ಅವಾರ್ಡ್ ನನ್ನ ಸೇವೆ ಗುರುತಿಸಿ ಕೊಟ್ಟಿದ್ದಾರೆ ಸರ್ಕಾರಕ್ಕೆ ಧನ್ಯವಾದ ಎಂದರು.
ಮೇಯರ್ ಗೌತಮ್ ಕುಮಾರ್ ಮಾತನಾಡಿ, 33 ಜನಕ್ಕೆ ಪ್ರಶಸ್ತಿ ನೀಡಲಾಗಿದೆ. ಸಮಾಜಕ್ಕೆ ಕೊರೊನಾ ಸಮಯದಲ್ಲಿ ಕೆಲಸ ಮಾಡಿದವರಿಗೆ, 400 ಕೋವಿಡ್ ಶವ ಸಂಸ್ಕಾರ ಮಾಡಿದ, ವೈದ್ಯರಾಗಿ ನಿರಂತರವಾಗಿ ದುಡಿದ ಕೊರೊನಾ ವಾರಿಯರ್ಸ್ ಹಾಗೂ ಬೆಂಗಳೂರಿಗೆ ಕೊಡುಗೆ ನೀಡಿದ ವಿವಿಧ ರಂಗದ ಸಾಧಕರಿಗೆ ಸರ್ಕಾರ ಸೂಚಿಸಿದಂತೆ, ಗೌರವ ಮಾಡಲಾಗಿದೆ. ಸಮಾಜ ಸೇವೆಗೆ ಯಾವುದೇ ಪಕ್ಷಬೇಧ ಇಲ್ಲ. ಈ ಹಿಂದೆ 575 ಪ್ರಶಸ್ತಿ ಕೊಟ್ಟ ಹಾಗೆ ಅವ್ಯವಸ್ಥೆ ಮಾಡಿಲ್ಲ. ಸಿಎಂ ಮಾರ್ಗದರ್ಶನದಂತೆ ಪ್ರಶಸ್ತಿ ನೀಡಲಾಗಿದೆ ಎಂದರು.
ಸಂತೋಷ್ ತಮ್ಮಯ್ಯ ವಿವಾದಾತ್ಮಕ ಬರವಣಿಗೆ ಪ್ರಕರಣ ಎದುರುಸುತ್ತಿದ್ದು, ಅವರಿಗೂ ಪ್ರಶಸ್ತಿ ನೀಡಲಾಗಿದೆ. ನಂದಿದುರ್ಗ ಬಾಲು ಎನ್ನುವವರಿಗೆ ಎರಡು ಬಾರಿ ಪ್ರಶಸ್ತಿ ನೀಡಲಾಗಿದೆ ಎಂದು ಆರೋಪ ಕೇಳಿಬಂದಿದ್ದು, ಈ ಬಗ್ಗೆ ಪರಿಶೀಲಿಸಿ ಸರಿಪಡಿಸಲಾಗುವುದು ಎಂದರು.