ನವದೆಹಲಿ: ದೆಹಲಿಯಲ್ಲಿ 3ನೇ ಕಾವೇರಿ ನಿರ್ವಹಣಾ ಪ್ರಾಧಿಕಾರದ ಸಭೆ ನಡೀತು. ಸಭೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಅಧಿಕಾರಿಗಳ ತಂಡ ಭಾಗವಹಿಸಿದ್ದವು.
ಸಭೆ ಬಳಿಕ ಪ್ರಾಧಿಕಾರದ ಅಧ್ಯಕ್ಷ ಮಸೂದ್ ಹುಸೇನ್ ಮಾತನಾಡಿ, ಮಾನ್ಸೂನ್ ಆಧರಿಸಿ ಮೂರು ಹಂತದಲ್ಲಿ ಬಿಳಿಗುಂಡ್ಲು ಮೂಲಕ ತಮಿಳುನಾಡಿಗೆ 9.19 ಟಿಎಂಸಿ ನೀರು ಹರಿಸಬೇಕು. ಈ ಸಾರಿ ಮಾನ್ಸೂನ್ ಮಳೆ ಚೆನ್ನಾಗಿ ಬರುವ ನಿರೀಕ್ಷೆಯಿದೆ. ಉತ್ತಮ ಮಾನ್ಸೂನ್ ಬಂದ್ರೇ ಮಾತ್ರ ನೀರು ಹರಿಸಬೇಕು. ಜೂನ್ ತಿಂಗಳಲ್ಲಿ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಒಳ್ಳೆ ಮಳೆಯಾಗಿ ಇದರಿಂದ ಜಲಾಶಯದೊಳಗಿನ ಒಳ ಹರಿವು ಹೆಚ್ಚಾದ್ರೇ ಮಾತ್ರವೇ ನೀರು ಬಿಡಬೇಕು. ಮಳೆಯಾದ್ರೆ ಮಾತ್ರ ನೀರು ಬಿಡುವ ಷರತ್ತಿಗೆ ಕರ್ನಾಟಕ ಒಪ್ಪಿಕೊಂಡಿದೆ ಅಂತಾ ಅವರು ಹೇಳಿದರು.
ಈಗಾಗಲೇ ಕರ್ನಾಟಕಕ್ಕೆ ಒಂದು ವಾರ ತಡವಾಗಿ ಮಾನ್ಸೂನ್ ಪ್ರವೇಶಿಸಲಿದೆ. ಅಂದ್ರೇ ಜೂನ್ 8ಕ್ಕೆ ರಾಜ್ಯಕ್ಕೆ ಮಾನ್ಸೂನ್ ಎಂಟ್ರಿ ಕೊಡುವ ಸಾಧ್ಯತೆಯಿದೆ ಅಂತಾ ಹವಾಮಾನ ಇಲಾಖೆ ಹೇಳಿದೆ. ಕೆಆರ್‌ಎಸ್ ಸೇರಿದಂತೆ ನಾಲ್ಕು ಜಲಾಶಯಗಳಲ್ಲಿ 23.03 ಟಿಎಂಸಿ ನೀರಿನ ಸಂಗ್ರಹವಿದೆ. ಇದರಲ್ಲಿ 14.05 ಟಿಎಂಸಿ ಮಾತ್ರ ಬಳಕೆಗೆ ಸಾಧ್ಯವಿದೆ. ಕಾವೇರಿ ಅಚ್ಚುಕಟ್ಟು ಪ್ರದೇಶ ಸೇರಿ ಬೆಂಗಳೂರಿಗೆ ಕುಡಿಯೋದಕ್ಕಾಗಿ ನೀರು ಇರಿಸಿಕೊಳ್ಳಲಾಗಿದೆ. ಈಗಾಗಲೇ ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದೆ. ಆದರೆ, ಕಾವೇರಿ ನಿರ್ವಹಣಾ ಪ್ರಾಧಿಕಾರ ನೀಡಿರುವ ಇವತ್ತಿನ ಷರತ್ತಿಗೊಳಪಟ್ಟ ಆದೇಶ ಕರ್ನಾಟಕಕ್ಕೆ ಆಶಾದಾಯಕವಾಗಿದೆ.