ಬೆಂಗಳೂರು: ರಾಜ್ಯದ ಕೆಲವೆಡೆ ಇಂದು ಸಾಧಾರಣ ಮಳೆಯಾಗಿದೆ. ಚಿತ್ರದುರ್ಗದಲ್ಲಿ 56 ಮಿ.ಮೀ., ಬೈಲಹೊಂಗಲ 27 ಮಿ.ಮೀ., ಬಾಳೆಹೊನ್ನೂರು 20 ಮಿ.ಮೀ., ವಿಜಯಪುರದಲ್ಲಿ 18 ಮಿ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ವಿಭಾಗದ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದರು.
ಈಗಿರುವ ವಾತಾವರಣದ ಸ್ಥಿತಿಯಲ್ಲಿ ಮಾರುತಗಳು ಉತ್ತರ ಕೇರಳ ಕರಾವಳಿಯಿಂದ ಗುಜರಾತ್, ಕೇರಳದವರೆಗೆ ವಿಸ್ತರಿಸಿವೆ. ಇದರಿಂದ ರಾಜ್ಯದ ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಫೆ. 19, 20ರಂದು ಮಳೆಯಾಗಲಿದೆ. ಫೆ. 21ರಿಂದ 23ರವರೆಗೆ ಒಣಹವೆ ಮುಂದುವರೆಯುವ ಸಾಧ್ಯತೆ ಇದೆ ಎಂದರು.
ದ. ಒಳನಾಡಿನಲ್ಲಿ ಫೆ. 19ರಂದು ಹಲವು ಕಡೆ ಮಳೆಯಾಗಲಿದ್ದು, ಫೆ. 20 ಹಾಗೂ 21ರಂದು ಕೆಲವು ಕಡೆ ಮಾತ್ರ ಮಳೆಯಾಗುವ ಸಾಧ್ಯತೆ ಇದೆ. ಫೆ. 22 ಹಾಗೂ 23ರಂದು ಒಣಹವೆ ಮುಂದುವರೆಯಲಿದೆ.
ಬೆಂಗಳೂರಿನಲ್ಲಿ ಫೆ. 19, 20ರಂದು ಹಗುರ ಮಳೆಯಾಗುವ ಸಾಧ್ಯತೆ ಇದ್ದು, ಗರಿಷ್ಠ ಹಾಗೂ ಕನಿಷ್ಠ ಉಷ್ಣಾಂಶ 29 ಹಾಗೂ 18 ಡಿಗ್ರಿ ಸೆಂಟಿಗ್ರೇಡ್ ಇರುವ ಸಾಧ್ಯತೆ ಇದೆ.