ಬೆಂಗಳೂರು: ರಾಜ್ಯ ಸರ್ಕಾರ ಲಕ್ಷಾಂತರ ಕೋಟಿ ರೂಪಾಯಿ ಅನುದಾನವನ್ನು ಸಾರ್ವಜನಿಕ ಉದ್ದಿಮೆಗಳಿಗಾಗಿ ನೀಡುತ್ತಿದೆ. ಆದರೆ ಕೆಲ ಸಾರ್ವಜನಿಕ ಉದ್ದಿಮೆಗಳು ನಷ್ಟ ಅನುಭವಿಸುತ್ತಿದ್ದು, ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಿ ಪರಿಣಮಿಸುತ್ತಿದೆ. ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸರ್ಕಾರ ಇದೀಗ ನಷ್ಟ ಅನುಭವಿಸುತ್ತಿರುವ ಈ ಉದ್ದಿಮೆಗಳಿಂದ ಬಂಡವಾಳ ವಾಪಸು ತೆಗೆದು, ಪುನಶ್ಚೇತನಗೊಳಿಸಲು ಗಂಭೀರ ಚಿಂತನೆ ನಡೆಸಿದೆ.
ಕರ್ನಾಟಕ ಒಟ್ಟು 60 ಸಾರ್ವಜನಿಕ ಉದ್ದಿಮೆಗಳನ್ನು ಹೊಂದಿದೆ. ಈ ಸಾರ್ವಜನಿಕ ಉದ್ದಿಮೆಗಳಿಗೆ ಸರ್ಕಾರ ಕೋಟ್ಯಂತರ ರೂ. ಅನುದಾನ ನೀಡುತ್ತದೆ. ಕಾಲ ಕಾಲಕ್ಕೆ ಈ ಉದ್ದಿಮೆಗಳಿಗೆ ರಾಜ್ಯ ಸರ್ಕಾರ ಬಂಡವಾಳ ಹೂಡಿಕೆ ಮಾಡುತ್ತದೆ. ಸಾರ್ವಜನಿಕ ಉದ್ದಿಮೆಗಳ ಪುನಶ್ಚೇತನಕ್ಕಾಗಿನೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಆದರೆ, ಈಗಲೂ ಹಲವು ಸಾರ್ವಜನಿಕ ಉದ್ದಿಮೆಗಳು ನಷ್ಟದ ಹಾದಿಯಲ್ಲೇ ಇದೆ. ಆ ಮೂಲಕ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಿ ಪರಿಣಮಿಸುತ್ತಿದೆ.
ಇದೀಗ ರಾಜ್ಯ ಸರ್ಕಾರ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಕೆಲ ನಿಗಮಗಳು ಹಲವು ವರ್ಷಗಳಿಂದ ನಷ್ಟದ ಹಾದಿಯಲ್ಲೇ ಮುಂದುವರಿದಿದೆ. ಸದ್ಯ ರಾಜ್ಯ ಸರ್ಕಾರ ನಷ್ಟದಲ್ಲಿರುವ ಕಂಪನಿಗಳಿಗೆ ಅನುದಾನ ನೀಡುವ ಪರಿಸ್ಥಿತಿಯಲ್ಲಿಲ್ಲ. ಹೀಗಾಗಿ ಸರ್ಕಾರ ರೋಗಗ್ರಸ್ತ ಉದ್ದಿಮೆಗಳನ್ನು ಪುನಶ್ಚೇತನಗೊಳಿಸುವ ಬಗ್ಗೆ ನೂತನ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮುನ್ಸೂಚನೆ ನೀಡಿದ್ದಾರೆ. ರೋಗಗ್ರಸ್ತ ಉದ್ದಿಮೆಗಳಿಂದ ಬಂಡವಾಳ ಹಿಂತೆಗೆಯುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದ್ದು, ಈ ಬಗ್ಗೆ ಕೇಂದ್ರ ಬಂಡವಾಳ ವಾಪಸಾತಿ ಸಚಿವಾಲಯದ ಅಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ಸಚಿವ ನಿರಾಣಿ ತಿಳಿಸಿದ್ದಾರೆ.
ನಷ್ಟದಲ್ಲಿರುವ ಉದ್ದಿಮೆಗಳಿಂದ ಭಾರಿ ಹೊರೆ
ರಾಜ್ಯದಲ್ಲಿನ ಒಟ್ಟು 60 ಸಾರ್ವಜನಿಕ ಉದ್ದಿಮೆಗಳಲ್ಲಿ (ನಿಗಮ) ಒಟ್ಟು 19 ನಿಗಮಗಳು ನಷ್ಟ ಅನುಭವಿಸುತ್ತಿದೆ. ಕಳೆದ ಆರೇಳು ವರ್ಷಗಳಿಂದ ಈ ನಿಗಮಗಳು ನಷ್ಟದ ಹಾದಿಯಲ್ಲೇ ಇದೆ. ಇದು ಸರ್ಕಾರದ ಪಾಲಿಗೆ ಬಿಳಿ ಆನೆಯಾಗಿಯೇ ಪರಿಣಮಿಸಿದ್ದು, ಖಜಾನೆ ಮೇಲೆ ಭಾರಿ ಹೊರೆಯಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ಈ ನಿಗಮಗಳಿಗೆ ಸರ್ಕಾರ ಸುಮಾರು 1.04 ಲಕ್ಷ ಕೋಟಿ ರೂ. ಅನುದಾನ ನೀಡಿದೆ.
2019-20ರವರೆಗಿನ ಸಿಎಜಿ ವರದಿಯಲ್ಲಿ 19 ಪ್ರಮುಖ ಉದ್ದಿಮೆಗಳು ನಷ್ಟದಲ್ಲಿರುವ ಬಗ್ಗೆ ಉಲ್ಲೇಖಿಸಿದೆ. ಸಾಕಷ್ಟು ಬಂಡವಾಳ ಹೂಡಿಕೆ ಮಾಡಿದರೂ, ಉದ್ದಿಮೆಗಳನ್ನು ಮಾತ್ರ ನಷ್ಟದಿಂದ ಹೊರತರಲು ಸಾಧ್ಯವಾಗುತ್ತಿಲ್ಲ. ಈಗಿನ ಪರಿಸ್ಥಿತಿಯಲ್ಲಿ ನಷ್ಟದಲ್ಲಿರುವ ಉದ್ದಿಮೆಗಳಿಗೆ ಇನ್ನಷ್ಟು ಬಂಡವಾಳ ಹೂಡಿಕೆ ಮಾಡುವ ಬದಲು ಬಂಡವಾಳ ಹಿಂತೆಗೆದು ಪುನಶ್ಚೇತನಗೊಳಿಸುವ ಇರಾದೆ ಸರ್ಕಾರದ್ದು. ಇದರಿಂದ ಸೊರಗಿರುವ ಸರ್ಕಾರದ ಬೊಕ್ಕಸದ ಮೇಲಾಗುವ ಹೊರೆ ತಗ್ಗಿಸಲು ಮುಂದಾಗಿದೆ.
ಇದನ್ನೂ ಓದಿ: ಅಂಧ ವಿದ್ಯಾರ್ಥಿಗಳಿಗೆ ಉಚಿತ ಟಾಕಿಂಗ್ ಲ್ಯಾಪ್ಟಾಪ್ : ಹೈಕೋರ್ಟ್ಗೆ ಸರ್ಕಾರದ ಮಾಹಿತಿ
ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ನಿಗಮಗಳಾದ ಮೈಸೂರು ಪೇಪರ್ ಮಿಲ್ಸ್ ನಿಯಮಿತ ಮತ್ತು ಮೈಸೂರು ಶುಗರ್ ಕಂಪನಿ ನಿರಂತರ ನಷ್ಟದ ಹಾದಿ ತುಳಿಯುತ್ತಿವೆ. ಮೈ ಶುಗರ್ ಸಂಸ್ಥೆ ಕಾರ್ಖಾನೆಗಳಲ್ಲಿನ ಸಕ್ಕರೆ ಸಂಗ್ರಹವನ್ನು ಮಾರಾಟ ಮಾಡಿ ತನ್ನ ಉದ್ಯೋಗಿಗಳ ವೇತನ ಪಾವತಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಸ್ಥೆಗಳ ಪುನಶ್ಚೇತನಕ್ಕಾಗಿ ಸರ್ಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ ಇದುವರೆಗೆ ಯಾವುದೇ ಫಲವನ್ನು ನೀಡುತ್ತಿಲ್ಲ.
ಉದ್ದಿಮೆಗಳ ನಷ್ಟದ ಪ್ರಮಾಣ ಏನು?
- ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ: ಒಟ್ಟು ನಷ್ಟ 1,955 ಕೋಟಿ ರೂ.
- ಬೆಸ್ಕಾಂ : ಒಟ್ಟು ನಷ್ಟ 147 ಕೋಟಿ ರೂ.
- ಜೆಸ್ಕಾಂ: ಒಟ್ಟು ನಷ್ಟ 1002 ಕೋಟಿ ರೂ.
- ಚೆಸ್ಕಾಂ: ಒಟ್ಟು ನಷ್ಟ 875 ಕೋಟಿ ರೂ.
- ಬೆಂಗಳೂರು ಮಹಾನಗರ ಸಾರಿಗೆ ನಿಗಮ: ಒಟ್ಟು ನಷ್ಟ 511 ಕೋಟಿ ರೂ.
- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ: ಒಟ್ಟು ನಷ್ಟ 311 ಕೋಟಿ ರೂ.
- ಎನ್ಇಕೆಎಸ್ಆರ್ ಟಿಸಿ: ಒಟ್ಟು ನಷ್ಟ 610 ಕೋಟಿ ರೂ.
- ಎನ್ ಡಬ್ಲ್ಯೂ ಕೆಎಸ್ಆರ್ಟಿಸಿ: ಒಟ್ಟು ನಷ್ಟ 881 ಕೋಟಿ ರೂ.
- ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ: ಒಟ್ಟು ನಷ್ಟ 65.50 ಕೋಟಿ ರೂ.
- ಕರ್ನಾಟಕ ಗೇರು ಅಭಿವೃದ್ಧಿ ನಿಗಮ: ಒಟ್ಟು ನಷ್ಟ 67.99 ಕೋಟಿ ರೂ.
- ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ನಿಗಮ: ಒಟ್ಟು ನಷ್ಟ 34.38 ಕೋಟಿ ರೂ.
- ಕರ್ನಾಟಕ ರಾಜ್ಯ ಹಣಕಾಸು ನಿಗಮ: ಒಟ್ಟು ನಷ್ಟ 386 ಕೋಟಿ ರೂ.
- ಜಗಜೀವನ್ ರಾಮ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ: ಒಟ್ಟು ನಷ್ಟ 22.50 ಕೋಟಿ ರೂ.
- ಮೈಸೂರು ಕಾಗದ ಕಾರ್ಖಾನೆ ನಿಯಮಿತ: ಒಟ್ಟು ನಷ್ಟ 425 ಕೋಟಿ ರೂ.
- ಆಹಾರ ಮತ್ತು ನಾಗರಿಕ ಸರಬರಾಜು ನಿಗಮ: ಒಟ್ಟು ನಷ್ಟ 179 ಕೋಟಿ ರೂ.
- ಕೆಆರ್ ಇಡಿಎಲ್: ಒಟ್ಟು ನಷ್ಟ 263 ಕೋಟಿ ರೂ.
- ಮೈಸೂರು ಸಕ್ಕರೆ ಕಾರ್ಖಾನೆ ಕಂಪನಿ ನಿಯಮಿತ: ಒಟ್ಟು ನಷ್ಟ 460.88 ಕೋಟಿ ರೂ.
- ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ: ಒಟ್ಟು ನಷ್ಟ 154 ಕೋಟಿ ರೂ.
- ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮ: ಒಟ್ಟು ನಷ್ಟ 18.95 ಕೋಟಿ ರೂ