ಬೆಂಗಳೂರು: ಬಿಬಿಎಂಪಿ ಚುನಾವಣೆ ದೃಷ್ಟಿಯಿಂದ ಬಿಬಿಎಂಪಿ ಕಾಯ್ದೆಯಲ್ಲಿನ ಮೀಸಲಾತಿ ಪ್ರಮಾಣದ ಗೊಂದಲ ನಿವಾರಣೆಗೆ ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಗೆಜೆಟೆಡ್ ಪ್ರೊಬೆಷನರಿ ಹುದ್ದೆ ನೇಮಕ ನಿಯಮ ತಿದ್ದುಪಡಿಗೂ ಅನುಮೋದನೆ ದೊರೆತಿದೆ. ವಿಧಾನಸೌಧದಲ್ಲಿ ಸೋಮವಾರ ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಹೊಸದಾಗಿ ಜಾರಿಗೆ ತಂದಿರುವ ಬಿಬಿಎಂಪಿ ಕಾಯ್ದೆಯಲ್ಲಿ ಎಸ್ಸಿ, ಎಸ್ಟಿ ಹಾಗೂ ಇತರೆ ಹಿಂದುಳಿದ ಸಮುದಾಯಗಳ ಮೀಸಲಾತಿಯನ್ನು 1/3 ಎಂದು ನಮೂದಿಸಲಾಗಿದ್ದು, ಇದರಿಂದ ಈ ವರ್ಗಗಳಿಗೆ ಮೀಸಲಾತಿಯಲ್ಲಿ ಅನ್ಯಾಯವಾಗಲಿದೆ ಎನ್ನುವುದನ್ನು ಅರಿತ ಸರ್ಕಾರ, ಕಾನೂನು ತಿದ್ದುಪಡಿ ಮಾಡಿ ಮೀಸಲಾತಿ ಪ್ರಮಾಣವನ್ನು ಶೇ. 50ರಷ್ಟು ಮೀರದಂತೆ ಎಂದು ಬದಲಾಯಿಸಿ ಸುಗ್ರೀವಾಜ್ಞೆ ಹೊರಡಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಸುಪ್ರೀಂಕೋರ್ಟ್ 8 ವಾರಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಿರುವುದರಿಂದ ಈ ಚುನಾವಣೆಯಲ್ಲಿ ಇತರೆ ಹಿಂದುಳಿದ ವರ್ಗಗಳಿಗೂ (ಒಬಿಸಿ) ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ಪ್ರಯತ್ನ ನಡೆಸಿದ್ದು, ಅದೇ ಕಾರಣಕ್ಕೆ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಚುನಾವಣಾ ಆಯೋಗ ಬಿಬಿಎಂಪಿ ಚುನಾವಣೆಗೆ ಅಧಿಸೂಚನೆ ಹೊರಡಿಸುವ ಮುನ್ನವೇ ಕಾಯ್ದೆಗೆ ತಿದ್ದುಪಡಿ ತಂದು ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಲು ತೀರ್ಮಾನಿಸಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಕುರಿತು ಸಂಪುಟದಲ್ಲಿ ಚರ್ಚಿಸಿ ತಿದ್ದುಪಡಿಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಗೆಜೆಟೆಡ್ ಎ ಮತ್ತು ಬಿ ಶ್ರೇಣಿ ಹುದ್ದೆಗಳಿಗೆ ನೇಮಕಗೊಂಡು ನೇಮಕಾತಿ ಆದೇಶ ಪತ್ರ ಪಡೆಯದೇ ಬಾಕಿ ಉಳಿಯುವ ಹುದ್ದೆಗಳನ್ನು ನಂತರದ ನೇಮಕ ಸಂದರ್ಭದಲ್ಲಿ ಸೇರ್ಪಡೆ ಮಾಡಿಕೊಳ್ಳುವ ಸಂಬಂಧದ ತಿದ್ದುಪಡಿಗೆ ಸಮ್ಮಿತಿ ನೀಡಿದೆ. ಕರ್ನಾಟಕ ಗೆಜೆಟೆಡ್ ಪ್ರೊಬೆಷನರುಗಳ ಎ ಮತ್ತು ಬಿ ಗ್ರೂಪ್ ಹುದ್ದೆಗಳಿಗೆ ಆಯ್ಕೆಯಾಗಿ ನೇಮಕಾತಿ ಆದೇಶ ಪಡೆದ ಅಭ್ಯರ್ಥಿಗಳು ಕರ್ತವ್ಯಕ್ಕೆ ಹಾಜರಾಗದೇ ಹುದ್ದೆಗಳು ಖಾಲಿ ಉಳಿದರೆ ಅವುಗಳನ್ನು ಹೊಸದಾಗಿ ಖಾಲಿ ಉಳಿದವು ಎಂದು ಪರಿಗಣಿಸುವ ಸಂಬಂಧ ನೇಮಕ ನಿಯಮಕ್ಕೆ ತಿದ್ದುಪಡಿ ತರಲು ಕಡತ ಸಚಿವ ಸಂಪುಟದ ಮುಂದೆ ಮಂಡನೆಯಾಗಿತ್ತು. ಈ ತಿದ್ದುಪಡಿಗೆ ಸಂಪುಟ ಸಮ್ಮಿತಿಸಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ ಗೆಜೆಟೆಡ್ ಪ್ರೊಬೆಷನರುಗಳ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ) ನಿಯಮಗಳು, 1997 ನಿಯಮ 11ಕ್ಕೆ ತಿದ್ದುಪಡಿ ಮಾಡಲು ಒಪ್ಪಿಗೆ ನೀಡಿದ್ದು, ಗೆಜೆಟೆಡ್ ಪ್ರೊಬೆಶನರ್ಸ್ ಪರೀಕ್ಷೆಯ ಪ್ರಕ್ರಿಯೆ ಮುಗಿದ ನಂತರ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಿಗೆ ಆಯ್ಕೆಯಾದ ಕೆಲವು ಅಭ್ಯರ್ಥಿಗಳು ಕಾರಣಾಂತರಗಳಿಂದ ತಾವು ಆಯ್ಕೆಯಾದ ಹುದ್ದೆಗೆ ವರದಿ ಮಾಡಿಕೊಳ್ಳುತ್ತಿರಲಿಲ್ಲ. ಆದ್ದರಿಂದ, ಅದೇ ನೇಮಕಾತಿಯಲ್ಲಿ ಬೇರೆ ಹುದ್ದೆಗೆ ಆಯ್ಕೆಯಾದ ಅಥವಾ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆಯದೇ ಇರುವ ಇತರೆ ಅಭ್ಯರ್ಥಿಗಳು ವರದಿ ಮಾಡಿಕೊಳ್ಳದೇ ಇರುವ ಅಭ್ಯರ್ಥಿಗಳ ಹುದ್ದೆಗೆ ತಮ್ಮನ್ನು ಪರಿಗಣಿಸಬೇಕೆಂದು ನ್ಯಾಯಾಲಯಕ್ಕೆ ಮೊರೆ ಹೋಗುತ್ತಿದ್ದರು. ವರದಿ ಮಾಡಿಕೊಂಡಿರದೇ ಇರುವ ಸ್ಥಾನಗಳಿಗೆ ಅಂತಹವರನ್ನು ಪರಿಗಣಿಸಿದರೆ, ಇಡೀ ಆಯ್ಕೆ ಪಟ್ಟಿಯೇ ಬದಲಾಗುವ ಸಾಧ್ಯತೆ ಇತ್ತು. ಇದರಿಂದ ನೇಮಕದಲ್ಲಿ ಗೊಂದಲ ಸೃಷ್ಟಿಯಾಗುತ್ತಿತ್ತು. ಹಾಗಾಗಿ, ಅಂತಹ ಖಾಲಿ ಉಳಿಯುವ ಹುದ್ದೆಗಳನ್ನು ನಂತರದ ನೇಮಕದಲ್ಲಿ ಸೇರ್ಪಡೆಗೊಳಿಸಲು ಕರ್ನಾಟಕ ಗೆಜೆಟೆಡ್ ಪ್ರೊಬೆಷನರ್‌ಗಳ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ) ನಿಯಮ ತಿದ್ದುಪಡಿಗೆ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ ವಿಧಾನ ಪರಿಷತ್ಗೆ ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳಿಂದ ದ್ವೈವಾರ್ಷಿಕ ಚುನಾವಣೆಗಳು, 2022 ಮಾದರಿ ನೀತಿ ಸಂಹಿತೆಗೆ ಒಪ್ಪಿಗೆ ನೀಡಿದೆ. ಮೇಕೆದಾಟು ಕುಡಿಯುವ ನೀರು ಯೋಜನೆಗೆ ಅನುಮೋದನೆ ಹಾಗೂ ಕಣಿವೆ ರಾಜ್ಯಗಳ ನ್ಯಾಯಸಮ್ಮತ ಪಾಲನ್ನು ತೀರ್ಮಾನಿಸುವವರಿಗೆ ಗೋದಾವರಿ-ಕೃಷ್ಣಾ-ಪೆನ್ನಾರ್-ಕಾವೇರಿ-ವೈಗೈ-ಗುಂಡಾರ ನದಿ ಜೋಡಣೆ ಯೋಜನೆಯ ಡಿಪಿಆರ್ ಅನ್ನು ಅನುಮೋದಿಸದಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸುವ ಕುರಿತು ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳಲ್ಲಿ ಅಧಿಕೃತ ನಿರ್ಣಯವನ್ನು ಮಂಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ಸಂಪುಟ ಸಭೆ ನೀಡಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಹೊರಟ್ಟಿ ಬಿಜೆಪಿ ಸೇರದಿದ್ದರೆ ಶಿಕ್ಷಕರ ಕ್ಷೇತ್ರಕ್ಕೆ ಸ್ಪರ್ಧೆ ಇರುತ್ತಿತ್ತು: ಜಗದೀಶ್ ಶೆಟ್ಟರ್
ನಿವೃತ್ತರಾಗಲಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರಿಗೆ ಸಚಿವ ಸಂಪುಟ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.