ಬೆಂಗಳೂರು: ಆರ್ಥಿಕ ವರ್ಷದ ಕೊನೆಯ ಮೂರು ತಿಂಗಳು ಬಾಕಿ ಉಳಿದಿದ್ದು, ರಾಜ್ಯ ಸರ್ಕಾರ ತನ್ನ ನಿರೀಕ್ಷಿತ ತೆರಿಗೆ ಆದಾಯ ಗುರಿ ಮುಟ್ಟುವಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಕೆಲ ತೆರಿಗೆ ಮೂಲಗಳಿಂದ ಉತ್ತಮ ಆದಾಯ ಸಂಗ್ರಹವಾಗುತ್ತಿದ್ದರೆ, ಇನ್ನೂ ಕೆಲ ತೆರಿಗೆ ಮೂಲಗಳು ನಿರೀಕ್ಷಿತ ಗುರಿ ಮುಟ್ಟುವಲ್ಲಿ ಸಾಧ್ಯವಾಗುತ್ತಿಲ್ಲ.
ಕೋವಿಡ್-ಲಾಕ್ಡೌನ್ 2021ರಲ್ಲೂ ರಾಜ್ಯವನ್ನು ಬಹುವಾಗಿ ಕಾಡಿದೆ. ಇದೀಗ ಡಿಸೆಂಬರ್ ಹೊಸ್ತಿಲಲ್ಲಿ ಇದ್ದು, ಹೊಸ ವರ್ಷಕ್ಕೆ ಪ್ರವೇಶಿಸುತ್ತಿದ್ದೇವೆ. ಕೋವಿಡ್ ಲಾಕ್ಡೌನ್ನಿಂದ ರಾಜ್ಯದ ಆರ್ಥಿಕ ಚೇತರಿಕೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗಿಲ್ಲ. ಆದಾಯ ಸಂಗ್ರಹ ನಿರೀಕ್ಷಿತ ಮಟ್ಟದಲ್ಲಿ ಆಗದೇ ಇರುವುದು ಸರ್ಕಾರದ ತಲೆನೋವನ್ನು ಹೆಚ್ಚಿಸಿದೆ. ಈ ಮಧ್ಯೆ ಒಮಿಕ್ರಾನ್ ಭೀತಿ ಶುರುವಾಗಿದೆ. ಈ ಹಿನ್ನೆಲೆ 10 ದಿನಗಳ ಕಾಲ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಹೇರಿದೆ. ಜೊತೆಗೆ ಹೋಟೆಲ್, ಬಾರ್, ಪಬ್, ಸಭೆ ಸಮಾರಂಭಕ್ಕೆ ಕೆಲ ನಿರ್ಬಂಧಗಳನ್ನು ವಿಧಿಸಿದೆ. ಆ ಮೂಲಕ ರಾಜ್ಯದ ಆದಾಯ ಮತ್ತಷ್ಟು ಕುಸಿತ ಕಾಣುವ ಆತಂಕ ಎದುರಾಗಿದೆ.
ತೆರಿಗೆ ಸಂಗ್ರಹ ಇಲಾಖೆಗಳಿಂದ ನಿರೀಕ್ಷಿತ ತೆರಿಗೆ ಸಂಗ್ರಹದ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ. ಕೆಲ ತೆರಿಗೆ ಇಲಾಖೆಗಳಿಂದ ಉತ್ತಮ ಆದಾಯ ಸಂಗ್ರಹ ಆಗುತ್ತಿದೆ. ಆದರೆ ಇನ್ನೂ ಕೆಲ ತೆರಿಗೆ ಮೂಲಗಳಿಂದ ಆದಾಯ ಸಂಗ್ರಹದ ಗುರಿ ಮುಟ್ಟುವುದು ಬಹುತೇಕ ಅನುಮಾನವಾಗಿದೆ. ನವೆಂಬರ್ ಅಂತ್ಯಕ್ಕೆ ರಾಜ್ಯ ಶೇ.67ರಷ್ಟು ಮಾತ್ರ ತನ್ನ ಆದಾಯ ಗುರಿ ಮುಟ್ಟಲು ಸಾಧ್ಯವಾಗಿದೆ. ಆರ್ಥಿಕ ವರ್ಷದ ಕೊನೆಯ ಮೂರು ತಿಂಗಳು ತೆರಿಗೆ ಸಂಗ್ರಹದ ಪ್ರಮಾಣವನ್ನು ಹೆಚ್ಚಿಸುವಂತೆ ಆರ್ಥಿಕ ಇಲಾಖೆ ಪ್ರಮುಖ ತೆರಿಗೆ ಸಂಗ್ರಹ ಇಲಾಖೆಗಳಿಗೆ ಸೂಚನೆ ನೀಡಿದೆ.
ನಿರೀಕ್ಷಿತ ಗುರಿ ಮುಟ್ಟದ ತೆರಿಗೆ ಮೂಲಗಳು ಹೀಗಿವೆ:
ಕೆಲ ತೆರಿಗೆಗಳ ಸಂಗ್ರಹದಲ್ಲಿ ಈ ಬಾರಿಯೂ ನಿರೀಕ್ಷಿತ ಗುರಿ ಮುಟ್ಟುವಲ್ಲಿ ಸಾಧ್ಯವಾಗುತ್ತಿಲ್ಲ. ಈ ಬಾರಿ ಹೇರಿದ ಲಾಕ್ಡೌನ್ ಈಗಲೂ ಆರ್ಥಿಕ ಚಟುವಟಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಹೀಗಾಗಿ ಕೆಲ ತೆರಿಗೆ ಮೂಲಗಳಿಂದ ನಿರೀಕ್ಷಿತ ಗುರಿ ಮುಟ್ಟುವಲ್ಲಿ ಹಿನ್ನಡೆಯಾಗಿದೆ. ಇದರಿಂದ ಸರ್ಕಾರದ ಬೊಕ್ಕಸದ ಮೇಲೆ ದೊಡ್ಡ ಹೊಡೆತ ಬೀಳಿಸುತ್ತಿದೆ. ಸ್ವಂತ ತೆರಿಗೆ ಮೂಲಗಳಿಂದ ನವೆಂಬರ್ ವರೆಗೆ ಸುಮಾರು ಶೇ.63 ಮಾತ್ರ ತೆರಿಗೆ ಸಂಗ್ರಹಿಸಲು ಸಾಧ್ಯವಾಗಿದೆ.
(ಇದನ್ನೂ ಓದಿ: ಪಶ್ನೆ ಪತ್ರಿಕೆಯಲ್ಲಿ ಎಡವಟ್ಟು-ಪರೀಕ್ಷಾರ್ಥಿಗಳಿಂದ ಪ್ರತಿಭಟನೆ: ಮರು ಪರೀಕ್ಷೆಗೆ ಒಪ್ಪಿದ UGC)
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಸ್ತಿ ತೆರಿಗೆ ರೂಪದಲ್ಲಿ ಸಂಗ್ರಹಿಸಬೇಕಾದ ತೆರಿಗೆ ಗುರಿ ಸಾಧುಸುವಲ್ಲಿ ಹಿನ್ನಡೆ ಅನುಭವಿಸುತ್ತಿದೆ. 2021-22ನೇ ಸಾಲಿನಲ್ಲಿ ಕೇವಲ ಶೇ.36 ರಷ್ಟು ತೆರಿಗೆ ವಸೂಲಿ ಮಾಡಿರುತ್ತವೆ. ಈ ವರ್ಷ 801.25 ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದ್ದು, ಈ ಪೈಕಿ ಗ್ರಾಮ ಪಂಚಾಯತ್ಗಳು ಕೇವಲ 288.45 ಕೋಟಿ ರೂ. ಮಾತ್ರ ಸಂಗ್ರಹಿಸಲು ಸಾಧ್ಯವಾಗಿದೆ. ಕಳೆದ ವರ್ಷದ ಬಾಕಿ ಸೇರಿ ಒಟ್ಟು ತೆರಿಗೆ ಬೇಡಿಕೆ ಇರುವುದು 2103.96 ಕೋಟಿ ರೂ. ಇದೆ. ಈ ಪೈಕಿ ಕೇವಲ ಶೇ.14 ಮಾತ್ರ ಸಂಗ್ರಹ ಮಾಡಲಾಗಿದೆ. ಒಟ್ಟು 1816.59 ಕೋಟಿ ರೂ. ತೆರಿಗೆ ಸಂಗ್ರಹ ಬಾಕಿ ಉಳಿದುಕೊಂಡಿದೆ.
ನಗರ ಸ್ಥಳೀಯ ಸಂಸ್ಥೆಗಳಾದ ಪುರಸಭೆ, ನಗರಸಭೆಗಳಲ್ಲೂ ತೆರಿಗೆ ಸಂಗ್ರಹದಲ್ಲಿ ಹಿನ್ನಡೆಯಾಗಿದೆ. ಈ ಆರ್ಥಿಕ ವರ್ಷದಲ್ಲಿ 536.09 ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದೆ. ಆದರೆ, ಈವರೆಗೆ 288.03 ಕೋಟಿ ರೂ. ಸಂಗ್ರಹಿಸಲಾಗಿದೆ. ಈವರೆಗೆ ಕೇವಲ ಶೇ.53.72 ತೆರಿಗೆ ಸಂಗ್ರಹಿಸಲಾಗಿದೆ.
ಇತ್ತ ಮೋಟಾರು ವಾಹನ ತೆರಿಗೆ ಸಂಗ್ರಹದಲ್ಲೂ ತೀವ್ರ ಹಿನ್ನಡೆಯಾಗಿದೆ. 2021-22 ಸಾಲಿನಲ್ಲಿ 7515 ಕೋಟಿ ರೂ. ಮೋಟಾರು ವಾಹನ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದೆ. ಆದರೆ ಈವರೆಗೆ ಕೇವಲ 4,058 ಕೋಟಿ ರೂ. ಮಾತ್ರ ಸಂಗ್ರಹ ಮಾಡಲಾಗಿದೆ. ಶೇ.54ರಷ್ಟು ಮಾತ್ರ ಗುರಿ ಸಾಧಿಸಲು ಸಾಧ್ಯವಾಗಿದೆ. ಉಳಿದಂತೆ ಮುದ್ರಾಂಕ ಮತ್ತು ನೋಂದಣಿ ಶುಲ್ಕದ ರೂಪದಲ್ಲೂ ಗುರಿ ಮುಟ್ಟುವಲ್ಲಿ ಹಿನ್ನಡೆಯಾಗುತ್ತಿದೆ. ಆರ್ಥಿಕ ವರ್ಷದ 12,655 ಕೋಟಿ ರೂ. ಗುರಿ ಮುಂದೆ ನವೆಂಬರ್ ವರೆಗೆ ಸುಮಾರು ಶೇ.63ರಷ್ಟು ಮಾತ್ರ ತೆರಿಗೆ ಸಂಗ್ರಹವಾಗಿದೆ. ನವೆಂಬರ್ ವರೆಗೆ ಸುಮಾರು 7,972 ಕೋಟಿ ರೂ. ಮಾತ್ರ ಸಂಗ್ರಹ ಮಾಡಲು ಸಾಧ್ಯವಾಗಿದೆ.
(ಇದನ್ನೂ ಓದಿ: ಪುಸ್ತಕ ಮೇಳದಲ್ಲಿ ಉರ್ದು ಭಾಷೆಯ ರಾಮಾಯಣ, ಮಹಾಭಾರತಕ್ಕೆ ಹೆಚ್ಚು ಬೇಡಿಕೆ!)
ಉತ್ತಮ ಪ್ರಗತಿ ಸಾಧಿಸಿದ ಜಿಎಸ್ಟಿ ಸಂಗ್ರಹ:
ರಾಜ್ಯ ಸರ್ಕಾರ ಜಿಎಸ್ಟಿ ಸಂಗ್ರಹದಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. ಆರ್ಥಿಕ ವರ್ಷದಲ್ಲಿ ಏಪ್ರಿಲ್-ನವೆಂಬರ್ ವರೆಗೆ 54,517.94 ಕೋಟಿ ರೂ. ಸಂಗ್ರಹ ಮಾಡಲಾಗಿದೆ. ಕಳೆದ ವರ್ಷಕ್ಕಿಂತ ಸುಮಾರು ಶೇ.51ರಷ್ಟು ಪ್ರಗತಿ ಸಾಧಿಸಿದೆ.
ಪ್ರಸಕ್ತ ವರ್ಷ ರಾಜ್ಯ ವಾಣಿಜ್ಯ ತೆರಿಗೆ ರೂಪದಲ್ಲಿ 68,618.27 ಕೋಟಿ ರೂ. ಸಂಗ್ರಹ ಮಾಡಿದೆ. ಆರ್ಥಿಕ ವರ್ಷದ ಅಂತ್ಯಕ್ಕೆ 82,461.71 ಕೋಟಿ ರೂ. ಗುರಿ ದಾಟುವ ನಿರೀಕ್ಷೆ ಇಡಲಾಗಿದೆ. ಕಳೆದ ಎಂಟು ತಿಂಗಳಲ್ಲಿ ಮಾರಾಟ ತೆರಿಗೆ ರೂಪದಲ್ಲಿ ಸುಮಾರು 13,387 ಕೋಟಿ ರೂ. ಸಂಗ್ರಹ ಮಾಡಲಾಗಿದೆ.