ಬೆಂಗಳೂರು: ಸ್ಥಳೀಯ ಸಂಸ್ಥೆಗಳ 25 ಸ್ಥಾನಗಳಿಗೆ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆ (Legislative council election) ದಿನೇ ದಿನೇ ರಂಗೇರತೊಡಗಿದೆ.
ಈ ಬಾರಿ ಪರಿಷತ್ ಚುನಾವಣೆಗೆ 47,368 ಪುರುಷ, 51,474 ಮಹಿಳೆಯರು ಹಾಗೂ ಮೂವರು ಇತರೆ ಮತದಾರರು ಸೇರಿ ಒಟ್ಟು 98,846 ಮಂದಿ ತಮ್ಮ ಹಕ್ಕು ಚಲಾಯಿಸಲು ಅರ್ಹತೆ ಪಡೆದಿದ್ದಾರೆ. ಇದಕ್ಕಾಗಿ 6,073 ಮತಗಟ್ಟೆಗಳ ವ್ಯವಸ್ಥೆ ಮಾಡಲಾಗುತ್ತಿದೆ.
ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರ ಸಭೆ, ಮಹಾನಗರ ಪಾಲಿಕೆ ಸದಸ್ಯರಿಗೆ ಈ ಬಾರಿ ಮತದಾನದ ಹಕ್ಕು ಇರಲಿದೆ. ಹಾಗಾಗಿ, ರಾಜಕೀಯ ಪಕ್ಷಗಳು ಗ್ರಾಮ ಪಂಚಾಯತಿ ಸದಸ್ಯರ ಕಡೆ ಮುಖ ಮಾಡಿದ್ದಾರೆ. ಆದರೆ, ಚುನಾವಣೆಯಲ್ಲಿ ಬಿಬಿಎಂಪಿ, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಸದಸ್ಯರು ಮತದಾನದ ಹಕ್ಕು ಕಳೆದುಕೊಂಡಿದ್ದಾರೆ. ಅವಧಿ ಮುಗಿದಿರುವುದರಿಂದ ಈ ಸದಸ್ಯರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಚುನಾವಣಾ ಆಯೋಗ ಕೈಬಿಟ್ಟಿದೆ.
ಇದನ್ನೂ ಓದಿ: ಪರಿಷತ್ ಚುನಾವಣೆ : ಅಭ್ಯರ್ಥಿಗಳ ಆಯ್ಕೆಯಲ್ಲಿ ಇನ್ನೂ ಕಸರತ್ತು ನಡೆಸುತ್ತಿರುವ ಮೂರು ಪಕ್ಷಗಳು!
ಸದ್ಯಕ್ಕೆ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಮಾತ್ರ ಮತದಾರರಾಗಿದ್ದು, ಗ್ರಾಮ ಪಂಚಾಯತ್ ಸದಸ್ಯರ ಸಂಖ್ಯೆ ಅತಿ ಹೆಚ್ಚಾಗಿದೆ. ಇವರೇ ಈ ಚುನಾವಣೆಯಲ್ಲಿ ನಿರ್ಣಾಯಕರಾಗಲಿದ್ದಾರೆ.
ರಾಜ್ಯದ 31 ಜಿಲ್ಲಾ ಪಂಚಾಯತಿ ಹಾಗೂ 233 ತಾಲೂಕು ಪಂಚಾಯಿತಿಗಳ ಚುನಾಯಿತ ಸದಸ್ಯರ ಅವಧಿ ಮುಗಿದಿದೆ. ಹೀಗಾಗಿ, ಜಿಲ್ಲಾ ಹಾಗೂ ತಾಲೂಕು ಪಂಚಾಯತಿಯಲ್ಲಿ ಸದ್ಯ ಮತದಾರರು ಇಲ್ಲ. 2016ರ ಸಾರ್ವತ್ರಿಕ ಚುನಾವಣೆಯಲ್ಲಿ 1,083 ಜಿಲ್ಲಾ ಪಂಚಾಯತಿ ಹಾಗೂ 3,884 ತಾಲೂಕು ಪಂಚಾಯತಿ ಸೇರಿ ಒಟ್ಟು 4,967 ಸದಸ್ಯರು ಗೆದ್ದಿದ್ದರು. ಈ ಲೆಕ್ಕದಂತೆ ನೋಡುವುದಾದ್ರೆ, ಈ ಬಾರಿಯ ವಿಧಾನಪರಿಷತ್ ಚುನಾವಣೆಗೆ ಜಿಲ್ಲಾ ಮತ್ತು ತಾಲೂಕು ಪಂಚಾಯತಿಗಳ 4,967 ಮತಗಳು ಸಿಗುವುದಿಲ್ಲ. 273 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 56 ಕ್ಕೂ ಹೆಚ್ಚು ಕಡೆ ಚುನಾವಣೆ ನಡೆಯ ಬೇಕಿರುವುದರಿಂದ ಇಲ್ಲಿ 1,100ಕ್ಕೂ ಹೆಚ್ಚು ಮತಗಳು ಸಿಗುವುದಿಲ್ಲ. ಜೊತೆಗೆ ಬಿಬಿಎಂಪಿಯ 198 ವಾರ್ಡ್ ಸದಸ್ಯರ ಮತಗಳು ಈ ಬಾರಿ ಇಲ್ಲ. ಹೀಗಾಗಿ ಒಟ್ಟು 6 ಸಾವಿರಕ್ಕೂ ಹೆಚ್ಚು ಮತಗಳು ಸಿಗುವುದಿಲ್ಲ. ಈ ಮತಗಳ ಕೊರತೆಯನ್ನು ಗ್ರಾಮ ಪಂಚಾಯತಿ, ನಗರ ಸ್ಥಳೀಯ ಸಂಸ್ಥೆಗಳಿಂದ ಸರಿದೂಗಿಸಿಕೊಳ್ಳುವ ಅನಿವಾರ್ಯತೆಯಲ್ಲಿ ಮೂರು ಪಕ್ಷಗಳು ಸಿಲುಕಿವೆ.
ಇದನ್ನೂ ಓದಿ: Rain Alert: ನಾಳೆಯವರೆಗೂ ರಾಜ್ಯದ ದ.ಒಳನಾಡು, ಮಲೆನಾಡು ಭಾಗಗಳಲ್ಲಿ ಜಡಿ ಮಳೆ
ವಿಧಾನಪರಿಷತ್ ಚುನಾವಣೆಯಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಹಾಗೂ 56 ನಗರ, ಸ್ಥಳೀಯ ಸಂಸ್ಥೆಗಳಿಂದ ಸುಮಾರು 6 ಸಾವಿರ ಮತ ನಷ್ಟ ಉಂಟಾಗಲಿದೆ. ಹೀಗಾಗಿ, ಕಳೆದ ಬಾರಿ ಹೆಚ್ಚು ಸದಸ್ಯರನ್ನು ಹೊಂದಿದ್ದ ಕರಾವಳಿಯಲ್ಲಿ ಬಿಜೆಪಿಗೆ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕಾಂಗ್ರೆಸ್‌ಗೆ ಮತ್ತು ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ ಈ ಬಾರಿ ಮತ ನಷ್ಟ ಆಗಲಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಂಚಾಯತ್‍ಗೆ ನೀಡಿರುವ ಅನುದಾನ, ಕೊಟ್ಟಿರುವ ಯೋಜನೆಗಳ ಬಗ್ಗೆ ಮನವರಿಕೆ ಮಾಡಿ ಸದಸ್ಯರ ಸೆಳೆಯುವ ಪ್ರಯತ್ನ ಆಡಳಿತರೂಢ ಬಿಜೆಪಿ ಮಾಡುತ್ತಿದ್ದರೆ, ಪ್ರತಿಪಕ್ಷ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಸದಸ್ಯರ ಮುಂದಿಟ್ಟು ಮತ ಸೆಳೆಯಲು ಮುಂದಾಗಿದೆ. ಇದರ ನಡುವೆ ಜೆಡಿಎಸ್ ಪ್ರಾದೇಶಿಕ ಅಸ್ಮಿತೆಯ ಅಸ್ತ್ರ ಪ್ರಯೋಗಿಸುವ ಲೆಕ್ಕಾಚಾರ ಹಾಕಿದೆ.
ಇದನ್ನೂ ಓದಿ: ಪಂಜಾಬ್ನಲ್ಲಿ AAP ಅಧಿಕಾರಕ್ಕೆ ಬಂದ್ರೆ 18+ ಯುವತಿಯರಿಗೂ ತಿಂಗಳಿಗೆ ಸಾವಿರ ರೂ.: ಕೇಜ್ರಿವಾಲ್ ಘೋಷಣೆ
ಈಗಾಗಲೇ ಬಿಜೆಪಿ ಅಭ್ಯರ್ಥಿಗಳ ಘೋಷಣೆ ಮಾಡಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಇಂದು ರಾತ್ರಿ ವೇಳೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಚುನಾವಣೆ ನಡೆಯುವ ಎಲ್ಲಾ ಜಿಲ್ಲೆಗಳಲ್ಲಿಯೂ ಕಳೆದ ಮೂರು ದಿನಗಳಿಂದ ಬಿಜೆಪಿ ಜನ ಸ್ವರಾಜ್ ಯಾತ್ರೆ ಆರಂಭಿಸಿ ಮತದಾರರನ್ನು ಸೆಳೆಯುವ ಪ್ರಯತ್ನ ಆರಂಭಿಸಿದೆ.