ಬೆಂಗಳೂರು: ಠೇವಣಿದಾರರ ಹಣ ಹಿಂದಿರುಗಿಸುವಲ್ಲಿ ವಿಫಲವಾಗಿರುವ ಪುತ್ತೂರಿನ ಶರ್ಮಹಾನ್ ವಿವಿಧೋದ್ದೇಶ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಆಸ್ತಿಯನ್ನು ಜಪ್ತಿ ಮಾಡಲು ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಸಕ್ಷಮ ಪ್ರಾಧಿಕಾರ ರಚಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿದೆ.
ಈ ಕುರಿತು ಠೇವಣಿದಾರ ಶ್ರೀಶ ಕೇಶವ ಯಡಪಡಿತ್ತಾಯ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಪ್ರತಿವಾದ ಆಲಿಸಿದ ಪೀಠ, ಠೇವಣಿದಾರರ ಹಣ ಹಿಂದಿರುಗಿಸುವಲ್ಲಿ ವಿಫಲವಾಗಿರುವ ಸೊಸೈಟಿಯ ಆಸ್ತಿ ಜಪ್ತಿಗೆ ಕ್ರಮ ಜರುಗಿಸಲು ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಸಕ್ಷಮ ಪ್ರಾಧಿಕಾರ ರಚಿಸುವಂತೆ ನಿರ್ದೇಶಿಸಿತು.
ಅಲ್ಲದೇ, ಅರ್ಜಿದಾರರು ದಾಖಲಿಸಿರುವ ದೂರಿನ ಮೇರೆಗೆ ತನಿಖೆ ನಡೆಸಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಪೊಲೀಸರಿಗೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.
ಅರ್ಜಿದಾರರ ಕೋರಿಕೆ
ಅರ್ಜಿದಾರ ಶ್ರೀಶ ಕೇಶವ ಯಡಪಡಿತ್ತಾಯ ಅವರು ಶರ್ಮಹಾನ್ ಸೌಹಾರ್ದ ಕೋ-ಅಪರೇಟಿವ್ ಸೋಸೈಟಿಯಲ್ಲಿ 2016ರ ಜನವರಿ 1ರಿಂದ 2018ರ ಏಪ್ರಿಲ್ 1ರ ಅವಧಿಯಲ್ಲಿ ವಿವಿಧ ಸಂದರ್ಭಗಳಲ್ಲಿ ಶೇ. 12ರ ಬಡ್ಡಿ ದರದಲ್ಲಿ ಒಟ್ಟು 75.52 ಲಕ್ಷ ರೂ. ಠೇವಣಿ ಇಟ್ಟಿದ್ದಾರೆ.
ಇದರಲ್ಲಿ 48 ಲಕ್ಷ ರೂ. ಮೊತ್ತಕ್ಕೆ ಠೇವಣಿ ಅವಧಿ ಮುಗಿದಿದೆ. ಆದರೆ ಹಲವು ಬಾರಿ ಮನವಿ ಮಾಡಿದರೂ ಹಣ ವಾಪಸ್ ನೀಡಿಲ್ಲ ಎಂದು ಆರೋಪಿರುವ ಅರ್ಜಿದಾರರು, ಈ ಬಗ್ಗೆ 2018ರ ಮೇ 16ರಂದು ಪುತ್ತೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸದ್ಯ ಮಂಗಳೂರು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಆದ್ದರಿಂದ ಪ್ರಕರಣದ ಪಾರದರ್ಶಕ ಹಾಗೂ ತ್ವರಿತ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶಿಸಬೇಕು. ಸಕ್ಷಮ ಪ್ರಾಧಿಕಾರ ನೇಮಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು. ಸೊಸೈಟಿಯ ಮುಖ್ಯಸ್ಥರು ಹಾಗೂ ನಿರ್ದೇಶಕರ ವಿರುದ್ಧ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.