ಬೆಂಗಳೂರು: ಒಂದೆಡೆ ಕೋವಿಡ್ 19, ಇನ್ನೊಂದೆಡೆ ಪ್ರವಾಹ. ಇತ್ತ ಸೊರಗಿ ಹೋಗಿರುವ ಬೊಕ್ಕಸ. ಗಾಯದ ಮೇಲೆ ಬರೆ ಎಂಬಂತೆ ತೆರಿಗೆ ಸಂಗ್ರಹ ಕುಸಿತದ ಮಧ್ಯೆ ಪರಿಹಾರ ಹಣದ ತಿವಿತ ರಾಜ್ಯ ಸರ್ಕಾರವನ್ನು ಹೈರಾಣಾಗಿಸಿದೆ. ನಾಲ್ಕು ತಿಂಗಳಲ್ಲಿನ ರಾಜ್ಯ ಬೊಕ್ಕಸದ ಸಂಪೂರ್ಣ ಮಾಹಿತಿ ಇಲ್ಲಿದೆ.
ರಾಜ್ಯದ ಆರ್ಥಿಕ ಸಂಕಷ್ಟ ದಿನೇ ದಿನೆ ಹೆಚ್ಚುತ್ತಿದೆ. ಈ ಮಧ್ಯೆ ಕೋವಿಡ್ ನಿಯಂತ್ರಣ ಖರ್ಚು ವೆಚ್ಚ, ಇನ್ನೊಂದೆಡೆ ನೆರೆ ಪರಿಹಾರದ ಹೊರೆ. ಕಳೆದ ವರ್ಷಕ್ಕೂ ಈ ವರ್ಷಕ್ಕೂ ತೆರಿಗೆ ಸಂಗ್ರಹದಲ್ಲಿ ಭಾರಿ ಖೋತಾ ಆಗುತ್ತಿದೆ. ಇತ್ತ ಕೇಂದ್ರದಿಂದ ಬಾಕಿ ಇರುವ ಜಿಎಸ್ಟಿ ಪರಿಹಾರ ಹಣ ಕೂಡ ಬರತ್ತಿಲ್ಲ. ಲಾಕ್ಡೌನ್ನಿಂದ ಈ ಆರ್ಥಿಕ ವರ್ಷದಲ್ಲಿ ರಾಜ್ಯ ಸರ್ಕಾರ ಹಿಂದೆಂದೂ ಕಂಡರಿಯದ ತೆರಿಗೆ ಖೋತಾ ಅನುಭವಿಸಿದ್ದು, ನಾಲ್ಕು ತಿಂಗಳಲ್ಲಿ ರಾಜ್ಯ ತೆರಿಗೆ ಸಂಗ್ರಹ ಪಾತಾಳಕ್ಕೆ ಬಿದ್ದಿದೆ.
ಲಾಕ್‌ಡೌನ್ ತೆರವುಗೊಂಡು ಖಜಾನೆಗೆ ನಿಧಾನವಾಗಿ ಹಣ ಹರಿದು ಬರುತ್ತಿದ್ದ ವೇಳೆಯಲ್ಲೇ ಗುಡುಗಿರುವ ಮಳೆರಾಯ ಮತ್ತೆ ಆರ್ಥಿಕ ವ್ಯವಸ್ಥೆಗೆ ಬರ ಸಿಡಿಲು ಬಡಿದಿದ್ದಾನೆ.
58,422 ಕೋಟಿ ರೂ. ತೆರಿಗೆ ಖೋತಾ!:
ರಾಜ್ಯದ ಬೊಕ್ಕಸಕ್ಕೆ ಪ್ರಮುಖವಾಗಿ ಹಣ ತರುವ ಇಲಾಖೆ ಎಂದರೆ ವಾಣಿಜ್ಯ ತೆರಿಗೆ, ಅಬಕಾರಿ, ಮೋಟಾರು ವಾಹನ ಮತ್ತು ಮುಂದ್ರಾಕ ಇಲಾಖೆ.
2019ರ ಏಪ್ರಿಲ್, ಮೇ, ಜೂನ್ ಮತ್ತು ಜುಲೈ ತಿಂಗಳಲ್ಲಿ ಬರೋಬ್ಬರಿ 81,052 ಕೋಟಿ ರೂ. ತೆರಿಗೆ ರೂಪದಲ್ಲಿ ಈ ಇಲಾಖೆಗಳಿಂದ ಬೊಕ್ಕಸ ಸೇರಿತ್ತು. ಆದರೆ ಕೊರೊನ ಹೊಡೆತದಿಂದ ಇದೇ ನಾಲ್ಕು ತಿಂಗಳ ಅವಧಿಗೆ 2020ರಲ್ಲಿ ಸಂಗ್ರಹ ಆಗಿರುವುದು 22,630 ಕೋಟಿ ರೂ ಮಾತ್ರ. ಅಂದರೆ 120 ದಿನಗಳಲ್ಲಿ ರಾಜ್ಯದ ಬೊಕ್ಕಸಕ್ಕೆ ಸುಮಾರು 58,422 ಕೋಟಿ ರೂ. ತೆರಿಗೆ ಖೋತಾ ಆಗಿದೆ.
4 ತಿಂಗಳ ಇಲಾಖಾವಾರು ತೆರಿಗೆ ಖೋತಾ ಹೀಗಿದೆ:
ವಾಣಿಜ್ಯ ತೆರಿಗೆ:
- 2019 - 49,142 ಕೋಟಿ.
- 2020 - 13,835 ಕೋಟಿ.
- ಖೋತಾ - 35,286 ಕೋಟಿ.
ಅಬಕಾರಿ ತೆರಿಗೆ:
- 2019 - 17,865 ಕೋಟಿ.
- 2020 - 5,865 ಕೋಟಿ.
- ಖೋತಾ -12 ಸಾವಿರ ಕೋಟಿ.
ಮುದ್ರಾಂಕ ತೆರಿಗೆ:
- 2019 - 8,727 ಕೋಟಿ.
- 2020 - 1,860 ಕೋಟಿ.
- ಖೋತಾ - 6,867 ಕೋಟಿ.
ಮೋಟಾರು ವಾಹನ ತೆರಿಗೆ:
- 2019 - 4,878 ಕೋಟಿ.
- 2020 - 931 ಕೋಟಿ.
- ಖೋತಾ - 3,947 ಕೋಟಿ.
ಇತರೆ ಮೂಲಗಳಿಂದ ತೆರಿಗೆ:
- 2019 - 440 ಕೋಟಿ.
- 2020 - 139 ಕೋಟಿ.
- ಖೋತಾ - 301 ಕೋಟಿ.
ಬಾಕಿ ಇರುವ ಜಿಎಸ್ಟಿ ಪರಿಹಾರ:
ಇದರ ಜತೆಯಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಭಾರೀ ಪ್ರಮಾಣದ ಜಿಎಸ್ಟಿ ಪರಿಹಾರ ಹಣ ಬರಬೇಕಾಗಿದೆ. ಆರ್ಥಿಕ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಕೇಂದ್ರದಿಂದ ರಾಜ್ಯಕ್ಕೆ ಕಳೆದ ನಾಲ್ಕು ತಿಂಗಳಿಂದ ಬರೋಬ್ಬರಿ 13,017 ಕೋಟಿ ರೂ. ಜಿ ಎಸ್ ಟಿ ಪರಿಹಾರ ಹಣ ಬರಬೇಕಿದೆ. ಇಷ್ಟು ಹಣ ಬರುವುದು ಅನುಮಾನ ಎಂದು ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ.
ಸಂಗ್ರಹವಾದ ಜಿಎಸ್ ಟಿ ತೆರಿಗೆ:
- ಮಾರ್ಚ್ - 3555 ಕೋಟಿ.
- ಏಪ್ರಿಲ್ - 840 ಕೋಟಿ.
- ಮೇ - 2011 ಕೋಟಿ.
- ಜೂನ್ - 3137 ಕೋಟಿ.
- ಜುಲೈ - 3474 ಕೋಟಿ.