ಬೆಂಗಳೂರು: ಕಳೆದ ವರ್ಷ ರಾಜ್ಯದಲ್ಲಿ ಕೊರೊನಾ ಸೋಂಕಿನ ತೀವ್ರತೆಯಿಂದ ಶೈಕ್ಷಣಿಕ ವರ್ಷ ಮೊಟಕುಗೊಂಡಿತ್ತು. ಪರಿಣಾಮ ಪರೀಕ್ಷೆಯಿಲ್ಲದೇ 9ನೇ ತರಗತಿವರೆಗೆ ಮಕ್ಕಳನ್ನು ಪಾಸ್ ಮಾಡಲಾಗಿತ್ತು. ಇದೀಗ 2021-22ನೇ ಸಾಲಿನ ಶೈಕ್ಷಣಿಕ ಸಾಲಿಗೆ ಪ್ರವೇಶಾತಿ ಆರಂಭವಾಗಿದ್ದು, ಶಾಲೆ ಆರಂಭವನ್ನು ಜುಲೈ ಮೊದಲ ವಾರದಲ್ಲಿ ಆರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಮೂರನೇ ಅಲೆಯ ಭೀತಿಯಿಂದಾಗಿ ಇದರ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಈ ಕುರಿತು ಇಂದು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಸಚಿವ ಸುರೇಶ್ ಕುಮಾರ್, ಆಯುಕ್ತ ಅನ್ಬುಕುಮಾರ್ ಸೇರಿದಂತೆ ಹಲವು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಸಭೆ ಬಳಿಕ ಮಾಹಿತಿ ನೀಡಿರುವ ಸಚಿವ ಸುರೇಶ್ ಕುಮಾರ್, ವರ್ಷದ ಕಲಿಕೆಯ ಆರಂಭಕ್ಕೆ ಸಲಹೆ ಬಂದಿದ್ದು, ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಡಾ. ದೇವಿ ಪ್ರಸಾದ್ ಶೆಟ್ಟಿಯವರ ವರದಿಯಲ್ಲಿಯೂ ಶಾಲೆಯ ವಿಕೇಂದ್ರೀಕರಣ ಮಾಡುವಂತೆ ಹೇಳಲಾಗಿದೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಶಿಕ್ಷಣ ತಜ್ಞರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಶಾಲೆ ಆರಂಭಕ್ಕೆ ನಿರ್ಧಾರ ಮಾಡಲಾಗಿದೆ. ಶಾಲೆ ಆರಂಭ ಕುರಿತು ಸೋಮವಾರ ಮತ್ತೊಂದು ಸಭೆ ನಡೆಸಲಿದ್ದು, ಶಾಲೆ ಆರಂಭದ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ತಾರಕಕ್ಕೇರಿದ ಶಾಲಾ ಫೀಸ್ ಫೈಟ್: 10ನೇ ತರಗತಿ ಪರೀಕ್ಷೆಗೆ Delta+ ವೈರಸ್ Tension
ಇನ್ನು ವಿದ್ಯಾಗಮ ಮತ್ತೆ ಆರಂಭ ಮಾಡಲು ಚಿಂತನೆ ನಡೆದಿದ್ದು, ಯಾವ ರೀತಿಯಲ್ಲಿ ಎಲ್ಲೆಲ್ಲಿ ಮಾಡಬೇಕೆಂದರ ಕುರಿತು ಚರ್ಚೆ ನಡೆಸಲಾಗುತ್ತಿದೆ. ಕಲಿಕಾ ದಿನಚರಿ ಬಗ್ಗೆ ಕೂಡಾ ಯೋಜನೆ ಮಾಡಿದ್ದು, ಅನೇಕ ತಜ್ಞರು ಅಭಿಪ್ರಾಯ ನೀಡಿದ್ದಾರೆ. ಆರೋಗ್ಯ ಇಲಾಖೆಯ ಜೊತೆ ಚರ್ಚೆ ಮಾಡಿಯೇ ಅಂತಿಮ ನಿರ್ಧಾರ ಮಾಡುತ್ತೇವೆ ಅಂತ ಸಚಿವರು ತಿಳಿಸಿದ್ದಾರೆ.
ಶೀಘ್ರದಲ್ಲೇ ಎಸ್ಎಸ್ಎಲ್ಸಿ ಪರೀಕ್ಷಾ ದಿನಾಂಕ ಪ್ರಕಟ
ಈಗಾಗಲೇ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ನಡೆಸುವುದಾಗಿ ಘೋಷಿಸಿದ್ದು, ಇದಕ್ಕಾಗಿ ಶಿಕ್ಷಣ ಇಲಾಖೆ ಹಾಗೂ ಪರೀಕ್ಷಾ ಮಂಡಳಿ ತಯಾರಿಯಲ್ಲಿ ತೊಡಗಿದೆ. ಸದ್ಯದಲ್ಲಿಯೇ ಪರೀಕ್ಷಾ ದಿನಾಂಕ ಪ್ರಕಟ ಮಾಡಲಾಗುವುದು. ಪರೀಕ್ಷೆಗಳು ಕೇವಲ ಎರಡು ದಿನಗಳಲ್ಲಿ ನಡೆಯುವುದರಿಂದ ಈಗಾಗೆಲೇ ವಿದ್ಯಾರ್ಥಿಗಳಿಗೆ ಮಾದರಿ ಪ್ರಶ್ನೆ ಪತ್ರಿಕೆಯನ್ನೂ ಬಿಡುಗಡೆ ಮಾಡಲಾಗಿದೆ. ಪರೀಕ್ಷೆಯಲ್ಲಿ ಭಾಗಿಯಾಗುವ ಸಿಬ್ಬಂದಿಗೆ ಲಸಿಕೆ ಕೊಡಿಸುವ ಕೆಲಸವೂ ಆಗ್ತಿದೆ ಎಂದರು.
ಖಾಸಗಿ ಶಾಲಾ ಶುಲ್ಕ ವಿಚಾರ
ಖಾಸಗಿ ಶಾಲೆಗಳ ಶುಲ್ಕಾ ವಿಚಾರ ಸದ್ಯ ಕೋರ್ಟ್ ನಲ್ಲಿದ್ದು, ಪದೇ ಪದೇ ಶಾಲೆಗಳ ಮುಂದೆ ಪ್ರತಿಭಟನೆ ಸರಿಯಾದ ಕ್ರಮವಲ್ಲ. ಶುಲ್ಕ ನಿಗದಿಗೆ ನಾವು ಹೈಕೊರ್ಟ್ ನ್ಯಾಯಾಧೀಶರ ಸಮಿತಿ ರಚನೆಗೆ ಮುಂದಾಗಿದ್ದೇವೆ. ಈ ಸಮಿತಿ ಮೂಲಕ ಶುಲ್ಕ ನಿಗದಿಗೆ ಚಿಂತನೆಗೆ ಮುಂದಾಗಿದ್ದೇವೆ ಅಂತ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.