ಬೆಂಗಳೂರು: ಆರ್ಥಿಕ ವರ್ಷದ ಆರಂಭದಲ್ಲೇ ಸರ್ಕಾರ ಜಿಎಸ್ಟಿ ರೂಪದಲ್ಲಿ ಭರ್ಜರಿ ತೆರಿಗೆ ಸಂಗ್ರಹ ಮಾಡಿದೆ. ಆರ್ಥಿಕವಾಗಿ ಕುಸಿದಿರುವ ಬೊಕ್ಕಸದ ಮೇಲಿನ ಹೊರೆಯನ್ನು ಗರಿಷ್ಠ ಜಿಎಸ್ಟಿ ಸಂಗ್ರಹ ಕಡಿಮೆ ಮಾಡಿದೆ. ಕಳೆದ ವರ್ಷವೂ ರಾಜ್ಯದ ಬೊಕ್ಕಸ ನಿರೀಕ್ಷಿತ ಆದಾಯ ಸಂಗ್ರಹವಾಗದೇ ಸೊರಗಿತ್ತು. ಇದರಿಂದ ಸರ್ಕಾರಕ್ಕೆ ಅಭಿವೃದ್ಧಿ ಕೆಲಸಗಳಿಗೆ ಹಣ ಖರ್ಚು ಮಾಡುವುದು ದುಸ್ತರವಾಗಿ ಪರಿಣಮಿಸಿತ್ತು. 2022-23ನೇ ಸಾಲಿನಲ್ಲಿ ಬೊಮ್ಮಾಯಿ ಸರ್ಕಾರ ಬಜೆಟ್ನಲ್ಲಿ ದೊಡ್ಡ ಆದಾಯ ಸಂಗ್ರಹದ ನಿರೀಕ್ಷೆ ಇಟ್ಟಿದೆ. ಆ ನಿಟ್ಟಿನಲ್ಲಿ ಆದಾಯ ಸಂಗ್ರಹ ಇಲಾಖೆಗಳಲ್ಲಿನ ಗುರಿಯನ್ನೂ ಗರಿಷ್ಠ ಮಟ್ಟದಲ್ಲಿ ನಿಗದಿ ಮಾಡಿದೆ. ಅದರಂತೆ ಬೊಮ್ಮಾಯಿ ಸರ್ಕಾರವನ್ನು ವಾಣಿಜ್ಯ ತೆರಿಗೆ (ಜಿಎಸ್ಟಿ ಮತ್ತು ಮಾರಾಟ ತೆರಿಗೆ) ಮೂಲದ ಆದಾಯ ಕೈ ಹಿಡಿದಿದೆ.
ಭರ್ಜರಿ ವಾಣಿಜ್ಯ ತೆರಿಗೆ ಸಂಗ್ರಹ: 2022-23 ಆರ್ಥಿಕ ವರ್ಷದ ಆರಂಭದಲ್ಲೇ ಬೊಮ್ಮಾಯಿ ಸರ್ಕಾರ ಭರ್ಜರಿ ವಾಣಿಜ್ಯ ತೆರಿಗೆ ಸಂಗ್ರಹ ಮಾಡಿದೆ. ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಜಿಎಸ್ಟಿ ಹಾಗೂ ತೈಲ ಮಾರಾಟ ಮೇಲಿನ ತೆರಿಗೆಯೂ ಒಳಗೊಂಡಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸರ್ಕಾರ ಜಿಎಸ್ಟಿ ರೂಪದಲ್ಲಿ ಬರೋಬ್ಬರಿ 18,020.31 ಕೋಟಿ ರೂ. ಆದಾಯ ಸಂಗ್ರಹಿಸಿದೆ. ತೈಲ ಮಾರಾಟ ಮೇಲಿನ ಕರ್ನಾಟಕ ಮಾರಾಟ ತೆರಿಗೆ ರೂಪದಲ್ಲಿ ಎರಡು ತಿಂಗಳಲ್ಲಿ 3,237.96 ಕೋಟಿ ರೂ. ಆದಾಯ ಸಂಗ್ರಹಿಸಿದೆ.
ಬಜೆಟ್ನಲ್ಲಿ ಬೊಮ್ಮಾಯಿ ಸರ್ಕಾರ 2022-23ರಲ್ಲಿ 77,010 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹದ ಗುರಿ ಇಟ್ಟಿದೆ. ರಾಜ್ಯ ಸರ್ಕಾರದ ಆದಾಯ ಮೂಲಗಳಲ್ಲಿ ವಾಣಿಜ್ಯ ತೆರಿಗೆಯದ್ದೇ ಬಹು ದೊಡ್ಡ ಪಾಲು. ಆರ್ಥಿಕ ವರ್ಷದ ಆರಂಭಿಕ ಎರಡು ತಿಂಗಳಲ್ಲಿ ಸಂಗ್ರಹವಾದ ವಾಣಿಜ್ಯ ತೆರಿಗೆ ಪ್ರಮಾಣವನ್ನು ನೋಡಿದರೆ, ಬೊಮ್ಮಾಯಿ ಸರ್ಕಾರ ವಾರ್ಷಿಕ ಗುರಿ ಮುಟ್ಟುವುದು ಬಹುತೇಕ ಖಚಿತ. ಏಪ್ರಿಲ್ ತಿಂಗಳಲ್ಲಿ ಜಿಎಸ್ಟಿ ರೂಪದಲ್ಲಿ ಬೊಕ್ಕಸಕ್ಕೆ 5,205.60 ಕೋಟಿ ತೆರಿಗೆ ಬಂದಿದೆ. ಅದೇ ಮೇ ತಿಂಗಳಲ್ಲಂತೂ ದೊಡ್ಡ ಪ್ರಮಾಣದಲ್ಲಿ ಜಿಎಸ್ಟಿ ತೆರಿಗೆ ಸಂಗ್ರಹ ಮಾಡಿದೆ. ಏಪ್ರಿಲ್ನಲ್ಲಿ ಬರೋಬ್ಬರಿ 12,814.71 ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿದೆ.
ಅದೇ ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ತೆರಿಗೆಯಲ್ಲಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಏಪ್ರಿಲ್ ತಿಂಗಳಲ್ಲಿ 1,602.64 ಕೋಟಿ ರೂ. ತೆರಿಗೆ ಬಂದಿತ್ತು. ಇನ್ನು ಮೇ ತಿಂಗಳಲ್ಲಿ ಮಾರಾಟ ತೆರಿಗೆ ರೂಪದಲ್ಲಿ ಸರ್ಕಾರ 1,635.32 ಕೋಟಿ ರೂ. ಆದಾಯ ಸಂಗ್ರಹ ಮಾಡಿದೆ. ಆ ಮೂಲಕ ಕಳೆದ ಎರಡು ತಿಂಗಳಲ್ಲಿ ಜಿಎಸ್ಟಿ ಹಾಗೂ ಮಾರಾಟ ತೆರಿಗೆ ರೂಪದಲ್ಲಿ ಬರೋಬ್ಬರಿ 21,258.27 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹ ಮಾಡಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ.
ಈ ಬಾರಿ ದುಪಟ್ಟು ತೆರಿಗೆ ಸಂಗ್ರಹ: ಕಳೆದ ವರ್ಷಕ್ಕೆ ಇದೇ ಎರಡು ತಿಂಗಳಿಗೆ ಹೋಲಿಸಿದರೆ ಈ ಬಾರಿ ಎರಡು ಪಟ್ಟು ಅಧಿಕ ವಾಣಿಜ್ಯ ತೆರಿಗೆ ಸಂಗ್ರಹ ಮಾಡಿದೆ. ಜಿಎಸ್ಟಿ ರೂಪದಲ್ಲಿ ಕಳೆದ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 7,422.73 ಕೋಟಿ ರೂ. ಆದಾಯ ಸಂಗ್ರಹಿಸಿತ್ತು. ಇನ್ನು ತೈಲ ಮೇಲಿನ ಮಾರಾಟ ತೆರಿಗೆ ಮೂಲಕ 3,506.39 ಕೋಟಿ ರೂ. ಸಂಗ್ರಹಿಸಿತ್ತು. ಆ ಮೂಲಕ ಎರಡು ತಿಂಗಳಲ್ಲಿ ಒಟ್ಟು 10,929.12 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹಿಸಲಾಗಿತ್ತು. ಆದರೆ, ಈ ಬಾರಿ ಎರಡು ತಿಂಗಳಲ್ಲಿ ಬರೋಬ್ಬರಿ 21,258.27 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹಿಸಿದೆ. ಆ ಮೂಲಕ ಕಳೆದ ವರ್ಷ ಇದೇ ಅವಧಿಗಿಂತ ಈ ಬಾರಿ 10,329.15 ಕೋಟಿ ಹೆಚ್ಚು ವಾಣಿಜ್ಯ ತೆರಿಗೆ ಸಂಗ್ರಹಿಸಿದೆ ಎಂದು ವಾಣಿಜ್ಯ ಇಲಾಖೆ ಅಂಕಿ - ಅಂಶ ನೀಡಿದೆ.
(ಇದನ್ನೂ ಓದಿ: 2 ತಿಂಗಳಲ್ಲಿ 2 ಸಾವಿರ ಕೋಟಿಗೂ ಅಧಿಕ ಮೊತ್ತದ ಆಸ್ತಿ ತೆರಿಗೆ ಸಂಗ್ರಹ: ಬಿಬಿಎಂಪಿಯಿಂದ ಭರ್ಜರಿ ಬೇಟೆ)