ಬೆಂಗಳೂರು: ಕರ್ನಾಟಕ ಸರ್ಕಾರ ಬುಧವಾರ ಪರಿಷ್ಕೃತ ಲಾಕ್‌ಡೌನ್ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನ್ರೇಗಾ) ಯೋಜನೆಯಡಿ ಕೆಲಸ ಮಾಡಲು ಅನುಮತಿ ನೀಡಿದೆ.
"ಯಾವುದೇ ಸ್ಥಳದಲ್ಲಿ ಮನ್ರೇಗಾ ಅಡಿಯಲ್ಲಿ ಕೆಲಸ ಮಾಡಲು 40ಕ್ಕಿಂತ ಹೆಚ್ಚು ಜನರನ್ನು ನಿಯೋಜಿಸುವಂತಿಲ್ಲ. ಕೆಲಸದ ವೇಳೆ ಕೋವಿಡ್ ನಿಯಮ ಪಾಲನೆ ಕಡ್ಡಾಯವಾಗಿರುತ್ತದೆ" ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಆದೇಶಿಸಿದ್ದಾರೆ.
ಇದನ್ನೂ ಓದಿ: ಹಳ್ಳಿಗಳಲ್ಲಿ ಕೋವಿಡ್ ಉಲ್ಬಣ: ಉದ್ಯೋಗ ಖಾತ್ರಿ ಕಾಮಗಾರಿ ತಾತ್ಕಾಲಿಕ ಸ್ಥಗಿತ
ಕೋವಿಡ್ ಉಲ್ಬಣ ನಿಯಂತ್ರಿಸಲು ರಾಜ್ಯದಲ್ಲಿ ಮೇ 10 ರಿಂದ ಮೇ 24ರ ವರೆಗೆ ಲಾಕ್‌ಡೌನ್ ಹೇರಿದೆ. ಹಳ್ಳಿಹಳ್ಳಿಗಳಲ್ಲೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಮನ್ರೇಗಾ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಗಳನ್ನು ಕೂಡ ಮೇ 10ರಿಂದ 24ರವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಆದೇಶ ಹೊರಡಿಸಲಾಗಿತ್ತು. ಆದರೆ ದಿನಗೂಲಿ ಮಾಡಿಯೇ ಅನೇಕರು ಒಪ್ಪೊತ್ತಿನ ಹೊಟ್ಟೆ ತುಂಬಿಸಿಕೊಳ್ಳಬೇಕಾಗಿದೆ. ಹೀಗಾಗಿ ಮನ್ರೇಗಾ ಯೋಜನೆಯಡಿ ಕೆಲಸ ಮಾಡಲು ಸರ್ಕಾರ ಅನುಮತಿ ನೀಡಿದೆ.
ಈಗಾಗಲೇ ಲಾಕ್‌ಡೌನ್ ವೇಳೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್‌ಗಳಲ್ಲಿ ಬಡವರು, ವಲಸಿಗರು ಸೇರಿದಂತೆ ಹಸಿದವರಿಗೆ ಮೂರು ಹೊತ್ತು ಊಟ ನೀಡಲು ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಆರಂಭಿಸಿದೆ.