ಬೆಂಗಳೂರು : ಲಾಕ್‌ಡೌನ್ ಪರಿಹಾರವಾಗಿ ರಾಜ್ಯ ಸರ್ಕಾರ ಆಟೋ ರಿಕ್ಷಾ, ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್ ಚಾಲಕರಿಗೆ ಪರಿಹಾರ ನಿಧಿ ನೀಡಲು ಮುಂದಾಗಿದೆ. ಮೇ 27ರಿಂದ ಈವರೆಗೆ 1 ಲಕ್ಷದ 55 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ.
ಸಾಂಕ್ರಾಮಿಕ ಕೊರೊನಾ ವೈರಸ್ 2ನೇ ಅಲೆಯ ಸಂಬಂಧ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಈ ಹಿನ್ನೆಲೆ ಮುಖ್ಯಮಂತ್ರಿ ಯಡಿಯೂರಪ್ಪ ಹಲವು ವರ್ಗಗಳಿಗೆ ಪರಿಹಾರ ಹಣವನ್ನ ಘೋಷಣೆ ಮಾಡಿದ್ದಾರೆ.
ಅದರಂತೆ, ಆಟೋರಿಕ್ಷಾ, ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್ ಚಾಲಕರಿಗೆ (ಲೈಸೆನ್ಸ್ ಹೊಂದಿದ ಹಾಗೂ ನೋಂದಣಿ ಮಾಡಿಸಿದ) ಒಂದು ಬಾರಿ ಪರಿಹಾರವಾಗಿ ರೂ. 3,000/- ಗಳನ್ನು ನೀಡಲು ನಿರ್ಧರಿಸಿದೆ.
ಹೀಗಾಗಿ, ಪರಿಹಾರ ಧನ ನೀಡಲು ಅರ್ಜಿಗಳನ್ನು ಆನ್‌ಲೈನ್‌ನಲ್ಲಿ 'ಸೇವಾಸಿಂಧು' ವೆಬ್ ಪೋರ್ಟಲ್‌ನ ಮೂಲಕ ಸ್ವೀಕರಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ಅರ್ಜಿ ಸ್ವೀಕರಿಸಲು ಅಗತ್ಯವಿರುವ ತಂತ್ರಾಂಶವನ್ನು ಸಿದ್ಧಪಡಿಸಿದ್ದು, ಅರ್ಹ ಚಾಲಕರುಗಳು ತಮ್ಮ ಅರ್ಜಿಗಳನ್ನು ಸೇವಾ ಸಿಂಧು ವೆಬ್ ಪೋರ್ಟಲ್ ಮುಖಾಂತರ ಸಲ್ಲಿಸಬಹುದಾಗಿದೆ.
ಮೇ 27ರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈತನಕ 1 ಲಕ್ಷದ 55 ಸಾವಿರ ಅರ್ಜಿಗಳು ಬಂದಿವೆ. ಸದ್ಯ ಬಂದಿರುವ ಅರ್ಜಿಗಳನ್ನ ಪರಿಶೀಲನೆ ನಡೆಸಿ ಶೀಘ್ರದಲ್ಲೇ ಹಣ ಜಮೆ ಮಾಡಲಾಗುತ್ತೆ ಎಂದು ರಾಜ್ಯ ಸಾರಿಗೆ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇನ್ನು, ಆಟೋರಿಕ್ಷಾ, ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್ ಚಾಲಕರುಗಳು ಪರಿಹಾರ ಧನ ಕೋರಿ ಅರ್ಜಿಗಳನ್ನು ಅನ್ಯ ಮಾರ್ಗದಲ್ಲಿ ಸಲ್ಲಿಸಲು ಅನಾವಶ್ಯಕವಾಗಿ ಪರಿಶ್ರಮ ಪಡುವುದನ್ನ ತಪ್ಪಿಸಲಾಗುತ್ತಿದೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಎಲ್ಲಾ ಅರ್ಹ ಚಾಲಕರುಗಳಿಗೆ ಪರಿಹಾರ ಧನವನ್ನು ಅವರ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ವರ್ಗಾಯಿಸಲಾಗುತ್ತೆ.