ಬೆಂಗಳೂರು : ಬಿಜೆಪಿ ಸರ್ಕಾರ ಬೆಂಗಳೂರು ಅಭಿವೃದ್ಧಿಗೆ ಆದ್ಯತೆ ನೀಡುತ್ತಿಲ್ಲ, ಮಹಾನಗರಕ್ಕೆ ಪ್ರತ್ಯೇಕ ಉಸ್ತುವಾರಿ ಸಚಿವರನ್ನೇ ನೇಮಿಸಿಲ್ಲ. ಎಲ್ಲವನ್ನೂ ಸಿಎಂ ಹೆಗಲ ಮೇಲೆ ಹಾಕಿಕೊಂಡು ಕುಳಿತಿದ್ದಾರೆ. ಇದರಿಂದ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ಕಾಂಗ್ರೆಸ್ ಸದಸ್ಯ ಯು.ಬಿ ವೆಂಕಟೇಶ್ ಹೇಳಿದರು.
2021-22 ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಮುಂದುವರೆದ ಚರ್ಚೆಯ ಮೇಲೆ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ಬಜೆಟ್ನಲ್ಲಿ ಎಸ್‌ಸಿ-ಎಸ್ಟಿಗೆ ಹಣ ಕಡಿಮೆ ಮೀಸಲಿಡಲಾಗಿದೆ, ಇದು ಬಹಳ ಅನ್ಯಾಯ ಎಂದರು. ಮೀಸಲಾತಿ ಎಂಬ ಜೇನುಗೂಡಿಗೆ ಕೈ ಹಾಕಿದ್ದಾರೆ. ಅ ಇದರ ಪರಿಣಾಮವನ್ನು ಅವರೇ ಅನುಭವಿಸಲಿದ್ದಾರೆ. ಯಾವುದೇ ಜಾತಿ ಇರಲಿ ಬಡವರಿಗೆ ಸವಲತ್ತು ಕೊಡಿ. ಅದನ್ನು ಬಿಟ್ಟು ಜಾತಿಯಾಧಾರಿತವಾಗಿ ಹೋಗಿದ್ದೀರಿ ಎಂದು ಟೀಕಿಸಿದರು.
ಹುಬ್ಬಳ್ಳಿ ಅಪಘಾತ ಕಣ್ಮುಂದೆ ಇದೆ, ಆದರೂ ಆ ರಸ್ತೆ ಇನ್ನು ರಿಪೇರಿ ಮಾಡಿಲ್ಲ. ಹನ್ನೆರಡು ವರ್ಷದಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಕೋರ್ಟ್ನಲ್ಲಿ ಕೇಸ್ ಇದೆ ಎಂದು ಕೂತರೆ ಆಗಲ್ಲ. ನಾವು ಆ ಕೆಲಸ ಮಾಡಿಲ್ಲ ಎಂದೇ ಇಲ್ಲಿ ಕೂತಿದ್ದೇವೆ, ನೀವೂ ಇಲ್ಲಿ ಕೂರಬೇಕಾ..? ಅದೊಂದು ರಸ್ತೆ ಸರಿಮಾಡಿ ಎಂದರು. ಅಧಿಕಾರಿಗಳು ದುಡ್ಡು ಕೊಟ್ಟು ಬರುತ್ತಿದ್ದಾರೆ, ಹೇಳಿದ ಮಾತೆ ಕೇಳಲ್ಲ. ಸರ್ಕಾರ ಅಧಿಕಾರಿಗಳ ಕಿವಿ ಹಿಂಡಬೇಕು, ಅವರನ್ನು ಆ ಮಟ್ಟಕ್ಕೆ ವರ್ತಿಸಲು ಬಿಡಬಾರದು. ಅಧಿಕಾರಿಗಳು ಸರ್ಕಾರದ ನೀತಿಗಳನ್ನು ಅನುಷ್ಠಾನಕ್ಕೆ ತರಬೇಕು. ಅದು ಬಿಟ್ಟು ತಾವು ಹೇಳಿದಂತೆ ರಾಜ್ಯಭಾರ ಮಾಡಬಾರದು ಎಂದು ಹೇಳಿದರು.
ಚುನಾವಣೆ ವೇಳೆ ಕೋಳಿ ಸಮಾಜವನ್ನು ಎಸ್ಟಿಗೆ ಸೇರಿಸುವ ಭರವಸೆ ನೀಡಿದ್ದರು, ಈಗ ಕೇಂದ್ರಕ್ಕೆ ಕಳಿಸಿ ಸುಮ್ಮನಾಗಿದ್ದಾರೆ. ಅಲ್ಲಿ ಯಾರ ಸರ್ಕಾರ ಇದೆ? ಯಾರು ಒತ್ತಡ ಹಾಕಬೇಕು? 25 ಎಂಪಿಗಳಿದ್ದಾರಲ್ಲ ಏನ್ ಮಾಡುತ್ತಿದ್ದೀರಿ ಎಂದು ತರಾಟೆ ತೆಗೆದುಕೊಂಡರು.
ಸಿಎಂ ಯಾವುದನ್ನೆಲ್ಲಾ ನೋಡಿಕೊಳ್ಳುವುದು..?
ಇಂಧನ, ಹಣಕಾಸು, ಗುಪ್ತಚರ ಜೊತೆಗೆ ಈ ಮಂತ್ರಿಗಳನ್ನು ಸಿಎಂ ನೋಡಿಕೊಳ್ಳಬೇಕು. ಅಂತದರಲ್ಲಿ ಬೆಂಗಳೂರನ್ನು ಹೇಗೆ ನೋಡಿಕೊಳ್ಳುತ್ತಾರೆ. ಅವರಿಗೆ ಸಮಯ ಎಲ್ಲಿದೆ?. ಬೆಂಗಳೂರಿಗೆ ಪ್ರತ್ಯೇಕ ಸಚಿವರ ಅಗತ್ಯವಿದೆ ಎಂದಿದ್ದೆವು. ಆದರೆ, ಸಿಎಂ ನೋಡಿಕೊಳ್ಳುತ್ತಾರೆ ಎಂದಿದ್ದಾರೆ. ಬೆಂಗಳೂರಲ್ಲಿ ಸಮಸ್ಯೆಗಳಿವೆ. ಇನ್ನಷ್ಟು ಸರ್ಕಾರಿ ಆಸ್ಪತ್ರೆಗಳ ಅಗತ್ಯವಿದೆ. ಸರ್ಕಾರಿ ಶಾಲೆಗಳ ಸ್ಥಿತಿ ನೋಡುವಂತಿಲ್ಲ. ಲಿಂಬಾವಳಿ ಬೆಂಗಳೂರು ಉಸ್ತುವಾರಿ ಆಗಿದ್ದರೆ, ಅವರನ್ನು ಅಲ್ಲಿಗೆಲ್ಲ ಕರೆದೊಯ್ದು ತೋರಿಸಬಹುದಿತ್ತು. ಸಿಎಂಗೆ ಸಮಯ ಇರಲ್ಲ, ಅವರನ್ನು ಹೇಗೆ ಕರೆದೊಯ್ಯುವುದು ಎಂದು ಪ್ರಶ್ನಿಸಿದರು.
ಈ ವೇಳೆ ನಗುತ್ತಲೇ ಮಧ್ಯೆಪ್ರವೇಶಿಸಿದ ಅರವಿಂದ ಲಿಂಬಾವಳಿ, ವೆಂಕಟೇಶ್ ಅವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ ಇದೆ, ಅದಕ್ಕೆ ಹೀಗೆ ಹೇಳಿದ್ದಾರೆ. ಒಂದು ವೇಳೆ ಬೆಂಗಳೂರು ಉಸ್ತುವಾರಿಯನ್ನು ನನಗೆ ಕೊಡಲು ಸಿಎಂ ಚಿಂತನೆ ನಡೆಸಿದರೆ ಆಗ ವೆಂಕಟೇಶ್ ಹೇಳಿಕೆ ಕೇಳಿ, ಬದಲಾಗಬಹುದು ಎಂದರು.
ಕಾಂಗ್ರೆಸ್ ಮುಖ್ಯ ಸಚೇತಕ ನಾರಾಯಣಸ್ವಾಮಿ ಮಾತನಾಡಿ, ಮಹದೇವಪುರದಿಂದ ಹೆಚ್ಚು ಆದಾಯ ಬರಲಿದೆ. ನಿಮಗೆ ಬೆಂಗಳೂರು ಉಸ್ತುವಾರಿ ಕೊಡಲಿ. ಅರಣ್ಯ ಇಲಾಖೆ ಜೊತೆಗೆ ಮಹಾನಗರದ ಉಸ್ತುವಾರಿ ಕೊಡಲಿ ಎನ್ನುವ ಅಪೇಕ್ಷೆ ನಮ್ಮದು ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಲಿಂಬಾವಳಿ
ಸಂಸ್ಕೃತಿ, ಪ್ರಕೃತಿ ಎರಡೂ ಇದೆ, ಅಷ್ಟು ಸಾಕು ಎನ್ನುತ್ತಾ ಬೆಂಗಳೂರು ಉಸ್ತುವಾರಿ ಚರ್ಚೆಗೆ ತೆರೆ ಎಳೆದರು.
ಮರಾಠಿಗೆ 50 ಕೋಟಿ ಕನ್ನಡಕ್ಕೆ 2 ಕೋಟಿ : ಕನ್ನಡ ಅಭಿವೃದ್ಧಿಗೆ ಎರಡು ಕೋಟಿ ಕೊಟ್ಟಿದ್ದಾರೆ, ಹಾಗಾಗಿ ಸ್ವಲ್ಪ ವಿಷ ಕೊಡಿ. 50 ಕೋಟಿ ಹಣ ಮರಾಠರಿಗೆ ಕೊಡುವಾಗ ಕನ್ನಡಕ್ಕೆ 100 ಕೋಟಿಯಾದರೂ ಕೊಡಬೇಕಲ್ಲವಾ? ಇಷ್ಟು ತಾರತಮ್ಯ ಸರಿಯಲ್ಲ. ನಿಯೋಗ ಕರೆದೊಯ್ದು 100 ಕೋಟಿ ಕೊಡಿಸಿ ಎಂದು ಸಚಿವ ಅರವಿಂದ ಲಿಂಬಾವಳಿಯವರನ್ನು ಒತ್ತಾಯಿಸಿದರು.
ಕೋವಿಡ್ ಮಹಾಮಾರಿ ಎನ್ನುವುದು ಸರ್ಕಾರಕ್ಕೆ ವರವಾಗಿದೆ, ಜನರಿಗೆ ಶಾಪವಾಗಿದೆ. ಈ ಸರ್ಕಾರಕ್ಕೆ ಏನೇ ಕೇಳಿದರೂ ಕೊರೊನಾ ನೆಪ ಹೇಳುತ್ತದೆ. ಇಲ್ಲವೇ ಹಣಕಾಸು ಇಲಾಖೆ ಒಪ್ಪಿಗೆ ಇಲ್ಲ ಎನ್ನುತ್ತಾರೆ. ಹಣಕಾಸು ಇಲಾಖೆಯೇ ಸರ್ಕಾರ ನಡೆಸುತ್ತಿದೆಯಾ ಎಂದು ಸರ್ಕಾರವನ್ನು ತರಾಟೆ ತೆಗೆದುಕೊಂಡರು. ಕಳೆದ ವರ್ಷದ ಬಜೆಟ್ ಬಗ್ಗೆಯೂ ಚರ್ಚಿಸಬೇಕು, ಬಜೆಟ್ ಕಾರ್ಯಕ್ರಮಗಳೇನು, ಅನುಷ್ಠಾನಕ್ಕೆ ಬಂದಿರುವ ಯೋಜನೆಗಳು ಯಾವುವು, ಯಾಕೆ ಕಾರ್ಯಕ್ರಮಗಳ ಅನುಷ್ಠಾನ ಆಗಿಲ್ಲ ಕಾರಣ ಏನು ಎಂದು ಪ್ರತ್ಯೇಕವಾಗಿ ಚರ್ಚೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಬಜೆಟ್ ಬೆಂಬಲಿಸಿದ ತಳವಾರ ಸಾಬಣ್ಣ : ಅಭಿವೃದ್ದಿಗೆ ಆದ್ಯತೆ ಎಂಬ ಪ್ರತಿಪಾದನೆಯೊಂದಿಗೆ ಸಿಎಂ ಯಡಿಯೂರಪ್ಪ ಉತ್ತಮ ಬಜೆಟ್ ನೀಡಿದ್ದಾರೆ. ಈ ಬಜೆಟ್ಗೆ ಬೆಂಬಲ ಸೂಚಿಸುತ್ತೇನೆ ಎಂದು ಬಿಜೆಪಿಯ ಸದಸ್ಯ ತಳವಾರ ಸಾಬಣ್ಣ ಹೇಳಿದರು.
ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಶೌಚಾಲಯ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಮಹಿಳಾ ಸಬಲೀಕರಣಕ್ಕಾಗಿ ಉತ್ತಮ ರೀತಿಯ ಬಜೆಟ್ ನೀಡಿದ್ದಾರೆ. ಆದರೆ, ಆರ್ಥಿಕ ಚಟುವಟಿಕೆಯಲ್ಲಿ ಕೆಲಸ ನಿರ್ವಹಿಸುತ್ತಿಲ್ಲ. ಮಹಿಳೆಯರಿಗೆ ಉತ್ಪಾದಕರಾಗಿ ಕಾರ್ಯ ನಿರ್ವಹಿಸಲು ಅವಕಾಶ ಕೊಡಬೇಕು. ಮಹಿಳಾ ಉದ್ಯೋಗಿಗಳಿಗೆ ಯಾವ ರೀತಿ ತರಬೇತಿ ನೀಡಬೇಕು ಎನ್ನುವ ಬಗ್ಗೆ ಆಲೋಚನೆ ಮಾಡಬೇಕು ಎಂದರು.
ಕೆಲ ಸಮುದಾಯಕ್ಕೆ ಸಾಕಷ್ಟು ಅನುದಾನ ನೀಡಲಾಗಿದೆ. ಸಮುದಾಯದ ಜನಸಂಖ್ಯೆಯ ಆಧಾರದ ಮೇಲೆ ಗಮನಹರಿಸಿ ಸರ್ಕಾರ ಇದನ್ನು ಮರುಪರಿಶೀಲನೆ ಮಾಡಬೇಕು. ಎಲ್ಲಿಯವರೆಗೆ ಗುಣಮಟ್ಟದ ಶಿಕ್ಷಣ ಇರುವುದಿಲ್ಲವೋ ಅಲ್ಲಿಯವರೆಗೆ ನಾವು ಅಭಿವೃದ್ಧಿ ಆಗುವುದಿಲ್ಲ. ಆರೋಗ್ಯ ಕ್ಷೇತ್ರದಲ್ಲಿ ಎಲ್ಲಾ ವ್ಯವಸ್ಥೆ ಬಳಸಿಕೊಂಡು ಕೊರೊನಾ ಎದುರಿಸಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಪೌಷ್ಟಿಕ ಆಹಾರಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಅಭಿಪ್ರಾಯಪಟ್ಟರು.