ಬೆಂಗಳೂರು: ರಾಜರಾಜೇಶ್ವರಿ ನಗರ ಹಾಗೂ ತುಮಕೂರಿನ ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ಇಂದು ನಡೆದ ಉಪ ಚುನಾವಣೆಯಲ್ಲಿ ಶೇ. 63.77ರಷ್ಟು ಮತದಾನವಾಗಿದೆ.
ಶಿರಾದಲ್ಲಿ ಶೇ. 82.31ರಷ್ಟು ಮತದಾನವಾಗಿದ್ದರೆ, ಆರ್.ಆರ್. ನಗರದಲ್ಲಿ ಶೇ. 45.24ರಷ್ಟು ಮತದಾನ ನಡೆದಿದೆ. ಎರಡು ಕ್ಷೇತ್ರದಲ್ಲಿ ಇಂದು ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿದೆ. ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆದಿದೆ. ಶಿರಾದ ಜನತೆ ಮತದಾನದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರೆ, ಆರ್.ಆರ್. ನಗರದ ಮತದಾರರು ನಿರುತ್ಸಾಹ ತೋರಿದ್ದಾರೆ.
ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಆರ್.ಆರ್. ನಗರದಲ್ಲಿ ಶೇ. 53ರಷ್ಟು ಮತದಾನ ನಡೆದಿತ್ತು. ಆದರೆ ಈ ಬಾರಿ ಶೇ. 45.24ರಷ್ಟು ಮಾತ್ರ ಮತ ಚಲಾವಣೆಯಾಗಿದೆ. ಇನ್ನು ಶಿರಾದಲ್ಲಿ ಕಳೆದ ಚುನಾವಣೆಯಲ್ಲಿ ಶೇ. 84ರಷ್ಟು ಮತ ಚಲಾವಣೆಯಾಗಿತ್ತು. ಅದ್ರೆ ಈ ಬಾರಿ ಶೇ. 82.31ರಷ್ಟು ಮತ ಚಲಾವಣೆಯಾಗಿದೆ.
ಆರ್.ಆರ್. ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮುನಿರತ್ನ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸುಮಾ ಹನುಮಂತರಾಯಪ್ಪ, ಜೆಡಿಎಸ್ ಅಭ್ಯರ್ಥಿಯಾಗಿ ವಿ. ಕೃಷ್ಣಮೂರ್ತಿ ಹಾಗೂ ಪಕ್ಷೇತರರು ಸೇರಿದಂತೆ ಒಟ್ಟು 16 ಮಂದಿ ಕಣದಲ್ಲಿದ್ದಾರೆ. ಹಾಗೆಯೇ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಡಾ. ರಾಜೇಶ್ ಗೌಡ, ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿ.ಬಿ.ಜಯಚಂದ್ರ, ಜೆಡಿಎಸ್ ಅಭ್ಯರ್ಥಿಯಾಗಿ ಅಮ್ಮಾಜಮ್ಮ ಹಾಗೂ ಪಕ್ಷೇತರರು ಸೇರಿದಂತೆ ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಸದ್ಯ ಎಲ್ಲಾ ಅಭ್ಯರ್ಥಿಗಳ ಭವಿಷ್ಯ ಇವಿಎಂ ಯಂತ್ರಗಳಲ್ಲಿ ಭದ್ರವಾಗಿದೆ. ಮತ ಎಣಿಕೆ ನವೆಂಬರ್ 10ರಂದು ನಡೆಯಲಿದ್ದು, ವಿಜಯದ ಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬುದು ಕುತೂಹಲ ಹೆಚ್ಚಿಸಿದೆ.