ಬೆಂಗಳೂರು: ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಕೊಕ್ಕರೆ ಧ್ಯಾನ ಮಾಡುತ್ತಿದ್ದ ಸಿದ್ದರಾಮಯ್ಯ ಈಗ ಮುಂದಿನ ಚುನಾವಣೆಗೆ ಸುರಕ್ಷಿತ ಕ್ಷೇತ್ರ ಹುಡುಕುತ್ತಿರುವುದು ಹಾಸ್ಯಾಸ್ಪದವಾಗಿದೆ. ಚಾಮುಂಡೇಶ್ವರಿ, ಬಾದಾಮಿ, ಚಾಮರಾಜಪೇಟೆ,ಹೆಬ್ಬಾಳ ಮುಂದಾವುದು ಸಿದ್ದರಾಮಯ್ಯ....? ಕೇರಳದ ವಯನಾಡಿನಲ್ಲಿ ಒಮ್ಮೆ ವಿಚಾರಿಸಿ ನೋಡಿ ಎಂದು ಬಿಜೆಪಿ ಲೇವಡಿ ಮಾಡಿದೆ.
ಕೋವಿಡ್ ಸಮಯದಲ್ಲೂ ಸಿದ್ದರಾಮಯ್ಯ ಮತ್ತೊಂದು ವಲಸೆಗೆ ಸಿದ್ದತೆ ನಡೆಸುತ್ತಿದ್ದಾರೆ ಎಂದು ಈ ಮೊದಲೇ ಹೇಳಿದ್ದೆವು. ಈಗ ಆ ಲೆಕ್ಕಾಚಾರ ಸತ್ಯವಾಗಿದೆ ಎಂಬುದಕ್ಕೆ ಸಾಕ್ಷಿ ಲಭಿಸಿದೆ. ಖುದ್ದು ಚಾಮರಾಜ ಪೇಟೆ ಶಾಸಕರೇ ಸಿದ್ದರಾಮಯ್ಯಗೆ ಆಹ್ವಾನ ನೀಡಿದ್ದಾರೆ. ಸಿಎಂ ಕನಸು ಇನ್ನೂ ಬಿಟ್ಟಿಲ್ವೇ ಸಿದ್ದರಾಮಯ್ಯ? ಎಂದು ಟ್ವೀಟ್ ಮೂಲಕ ಬಿಜೆಪಿ ಪ್ರಶ್ನಿಸಿದೆ.
Siddaramaiah ಉಂಡಮನೆಯ ಜಂತಿ ಎಣಿಸುವ ಜಾಯಮಾನದವರೆಂದು ದೇವೇಗೌಡರು ಈ ಹಿಂದೆ ಆರೋಪಿಸಿದ್ದರು. ಅದು ಈಗ ನಿಜವಾಗುತ್ತಿದೆ. ರಾಜಕೀಯ ಪುನರ್ಜನ್ಮ ನೀಡಿದ ಬಾದಾಮಿಯಿಂದ ಪಲಾಯನ ಮಾಡುವುದಕ್ಕೆ ಸಿದ್ದರಾಮಯ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ನೀವೆಷ್ಟು ಕೃತಘ್ನರು ಎಂಬುದೀಗ ಮನದಟ್ಟಾಗುತ್ತಿದೆ ಎಂದು ಬಿಜೆಪಿ ಕುಟುಕಿದೆ.
ರಾಜಕೀಯ ಜೀವನ ಮುಗಿದೇ ಹೋಯಿತು ಎನ್ನುವಾಗ ಸಿದ್ದರಾಮಯ್ಯ ಅವರ ಕೈ ಹಿಡಿದದ್ದು ಬಾದಾಮಿ ಕ್ಷೇತ್ರದ ಜನತೆ. ಆದರೆ, ಕೈ ಹಿಡಿದ ಜನರಿಗೆ ಸಂಕಟದ ಸಂದರ್ಭದಲ್ಲಿ ಅನ್ಯಾಯ ಮಾಡಿದರು. ಕ್ಷೇತ್ರದ ಜನತೆ ಕೋವಿಡ್‌ನಿಂದ ಕಂಗೆಟ್ಟಿರುವಾಗ ಮತ್ತೊಂದು ವಲಸೆಗೆ ಲೆಕ್ಕ ಹಾಕುತ್ತಾ ಕುಳಿತಿರುವುದು ಬಾದಾಮಿ ಜನತೆಗೆ ಮಾಡಿರುವ ಅವಮಾನ ಎಂದು ಬಿಜೆಪಿ ಟೀಕಿಸಿದೆ.
ನಾಡು ಕಂಡ ಅತ್ಯಂತ ಕೃತಘ್ನ ರಾಜಕಾರಣಿಗಳ ಪಟ್ಟಿಗೆ ಸಿದ್ದರಾಮಯ್ಯ ಸೇರುತ್ತಾರೆ. ತಮ್ಮನ್ನು ಆಯ್ಕೆ ಮಾಡಿದ ಯಾವ ಕ್ಷೇತ್ರದ ಜನರಿಗೂ ನೀವು ನ್ಯಾಯ ಕೊಡಿಸಲು ಸಿದ್ದರಾಮಯ್ಯ ಅವರಿಗೆ ಸಾಧ್ಯವಾಗಿಲ್ಲ ಎಂಬುದಕ್ಕೆ ಮೇಲಿಂದ ಮೇಲೆ ನಡೆಸುವ ವಲಸೆಯೇ ಸಾಕ್ಷಿಯಾಗಿದೆ. ಈಗ ಸಿದ್ದರಾಮಯ್ಯ ಚಿತ್ತ ಚಾಮರಾಜಪೇಟೆಯತ್ತ ಹರಿದಿದೆ.ಇವರು ಸಿದ್ದರಾಮಯ್ಯ ಅಲ್ಲ ವಲಸೆ ರಾಮಯ್ಯ ಎಂದು ಬಿಜೆಪಿ ವ್ಯಂಗ್ಯವಾಡಿದೆ.