ಬೆಂಗಳೂರು : ತೈಲ ಬೆಲೆ ಏರಿಕೆ ಮೇಲಿನ ಚರ್ಚೆ ವೇಳೆ ಸಿದ್ದರಾಮಯ್ಯ ಅವರ ದೆಹಲಿ ಪೊಲಿಟಿಕ್ಸ್ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯಿತು. ಸ್ಪೀಕರ್ ಕಾಗೇರಿ ಚರ್ಚೆ ವೇಳೆ ಸಿದ್ದರಾಮಯ್ಯರನ್ನು ದೆಹಲಿಗೆ ಕಳುಹಿಸುವ ಬಗ್ಗೆ ವಿಷಯ ಪ್ರಸ್ತಾಪಿಸಿದರು.
ಪೆಟ್ರೋಲ್, ಡೀಸೆಲ್ ದರ ಏರಿಕೆ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಚರ್ಚೆಗೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಮಾಧುಸ್ವಾಮಿಯನ್ನು ಪ್ರಶ್ನಿಸಿದ ಸ್ಪೀಕರ್ ಕಾಗೇರಿ, ಸಿದ್ದರಾಮಯ್ಯ ಅವರನ್ನು ಪಾರ್ಲಿಮೆಂಟ್‌ಗೆ ಕಳಿಸುವ ಉದ್ದೇಶ ಇದ್ಯಾ? ಎಂದು ಪ್ರಶ್ನಿಸಿದರು. ಆಗ ಕಾನೂನು ಸಚಿವ ಮಾಧುಸ್ವಾಮಿ, ಸಿದ್ದರಾಮಯ್ಯ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದವರು. ಕರ್ನಾಟಕದ ಕಹಳೆಯನ್ನು ದಿಲ್ಲಿಯಲ್ಲಿ ಊದಬೇಕು ಎಂದರು. ಆಗ ಸಚಿವ ಆರ್.ಅಶೋಕ್, ಸಿದ್ದರಾಮಯ್ಯ ಅವರು ಇಲ್ಲೇ ಇರಬೇಕು. ಅವರು ದೆಹಲಿಗೆ ಹೋಗುವುದು ಬೇಡ ಎಂದರು.
'ನಾನು, ಮಾಧುಸ್ವಾಮಿ,ಆರ್.ಅಶೋಕ್ ಉತ್ತಮ ಫ್ರೆಂಡ್ಸ್' : ಅದಕ್ಕೆ ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ನಾನು, ಮಾಧುಸ್ವಾಮಿ ಮತ್ತು ಆರ್.ಅಶೋಕ್ ಉತ್ತಮ ಫ್ರೆಂಡ್ಸ್ ಎಂದರು. ಆಗ ಇದಕ್ಕೆ ಈಶ್ವರಪ್ಪ ಅವರ ಅಭಿಪ್ರಾಯ ಏನೋ ಎಂದು ಸ್ಪೀಕರ್ ಕಾಗೇರಿ ಪ್ರಶ್ನಿಸಿದರು. ಅವರನ್ನು ಕೇಳಬೇಡಿ, ಅವರು ಇಲ್ಲೂ ಬೇಡ, ಅಲ್ಲೂ ಬೇಡ ಎಂದು ಸಿದ್ದರಾಮಯ್ಯ ಕಿಚಾಯಿಸಿದರು.
ಆಗ ಸಚಿವ ಈಶ್ವರಪ್ಪ, ನಾನು ಹೃದಯ ಮುಟ್ಟಿ ನೀವು ದೆಹಲಿಗೆ ಹೋಗಿ ಅಂಥ ಹೇಳಲು ಸಾಧ್ಯನಾ ಎಂದರು. ಆಗ ಸಿದ್ದರಾಮಯ್ಯ ಆದರೆ ಬಹಿರಂಗವಾಗಿ ಹೇಳುತ್ತಿಯಾ? ಈ ವೇಳೆ, ಆಂತರಿಕವಾಗಿ ಹೇಳಲ್ಲ, ಬಹಿರಂಗವಾಗಿ ಹೇಳುತ್ತಾರೆ ಎಂದು ಸಿದ್ದರಾಮಯ್ಯ ಉತ್ತರಿಸಿದರು. ಇದಕ್ಕೆ, ನೋಡಿ ಇದೊಂದು ನಿಜ ಹೇಳಿದ್ರೀ ಎಂದು ಈಶ್ವರಪ್ಪ ಹೇಳಿದರು.
ರಾಜಕಾರಣಿ ಆದ ಮೇಲೆ ಸುಳ್ಳು ಹೇಳುವ ಅನಿವಾರ್ಯತೆ ಬರುತ್ತೆ. ಹೇಳಿರಬಹುದು. ಆದ್ರೆ, ಸುಳ್ಳು ಹೇಳಿಲ್ಲ ಅನ್ನೋದು ಅದು ಆತ್ಮವಂಚನೆ ಆಗುತ್ತೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು. ನಾನು ಈ ಮುಂಚೆ ಸಂಸತ್ತಿಗೆ ಹೋಗಲು ಯತ್ನಿಸಿದೆ. ಆದರೆ, ವಿಫಲನಾದೆ ಎಂದರು. ಈ ವೇಳೆ ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ, ಈಗ ದೆಹಲಿಗೆ ಹೋಗಲು ಯತ್ನಿಸಿದರೆ ದೆಹಲಿಯಲ್ಲಿ ಇರುವವರ ಹೃದಯ ಒಡೆದು ಹೋಗುತ್ತೆ ಎಂದು ಟಾಂಗ್ ನೀಡಿದರು. ಆಗ ಸಿದ್ದರಾಮಯ್ಯ, ನನಗೆ ಈಶ್ವರಪ್ಪ ಬಿಟ್ಟು ಹೋಗುವ ಮನಸ್ಸು ಇಲ್ಲ ಎಂದು ತಿರುಗೇಟು ನೀಡಿದರು.
'ಇನ್ನೊಂದು ಚುನಾವಣೆಯಲ್ಲಿ ನಿಲ್ಲಬಹುದಷ್ಟೆ' : ನಾನು ಎರಡು ಬಾರಿ ದೆಹಲಿಗೆ ಹೋಗಲು ಯತ್ನಿಸಿ ವಿಫಲನಾದೆ. ಬಳಿಕ ದೆಹಲಿಗೆ ಹೋಗುವ ಯತ್ನವನ್ನು ಬಿಟ್ಟು ಬಿಟ್ಟೆ. ಇನ್ನೇನು ಒಂದು ಚುನಾವಣೆ ನಿಲ್ಲಬಹುದಷ್ಟೇ ಎಂದರು. 1980 ಮತ್ತು 1991ರಲ್ಲಿ ಎರಡು ಭಾರಿ ಲೋಕಸಭೆ ಚುನಾವಣೆಗೆ ನಿಲ್ಲಲು ಪ್ರಯತ್ನ ಮಾಡಿದೆ. ಆದರೆ, ಎರಡು ಬಾರಿ ನನ್ನನ್ನ ಸೋಲಿಸಿಬಿಟ್ರು ಎಂದರು.
ಈ ವೇಳೆ ಸ್ಪೀಕರ್, ಸಚಿವ ಈಶ್ವರಪ್ಪ ದೆಹಲಿಗೆ ಹೋಗೋದಿಲ್ಲವಾ ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈಶ್ವರಪ್ಪನಿಗೆ ಎರಡೂ ಇಲ್ಲ. ಅತ್ತ ದೆಹಲಿಗೂ ಹೋಗಲ್ಲ, ಇತ್ತ ಇಲ್ಲೂ ಉಳಿಯಲ್ಲ ಎಂದು ಹೇಳಿ ಸದನವನ್ನು ನಗೆಗಡಲಲ್ಲಿ ತೇಲಿಸಿದರು.
ಮೊಬೈಲ್ ಗುಟ್ಟು ಬಿಚ್ಚಿಟ್ಟ ಸಿದ್ದರಾಮಯ್ಯ : ಇದೇ ವೇಳೆ ಸಿದ್ದರಾಮಯ್ಯ ಮೊಬೈಲ್ ಗುಟ್ಟನ್ನು ಬಿಚ್ಚಿಟ್ಟರು. ಸಾಮಾಜಿಕ ಜಾಲತಾಣಗಳಲ್ಲಿ ತೈಲ ಬೆಕೆ ಏರಿಕೆ ಬಗ್ಗೆ ನೋಡ್ತಾ ಇರುತ್ತೇನೆ. ನಾನು ಮೊಬೈಲ್ ನೋಡಲ್ಲ. ನನ್ನ ಬಳಿ ಮೊಬೈಲ್ ಇಲ್ಲ. ಹುಡುಗರು ತೋರಿಸ್ತಾ ಇರುತ್ತಾರೆ ಎಂದು ಸಿದ್ದರಾಮಯ್ಯ ವಿವರಿಸಿದರು. ಮೊಬೈಲ್ ಇದ್ದರೆ ನ್ಯುಸೆನ್ಸ್ ಆಗುತ್ತದೆ. ಸಿಎಂ ಆಗಿದ್ದಾಗ ಐದು ವರ್ಷ ನಾನು ಮೊಬೈಲ್ ಇಟ್ಟಿರಲಿಲ್ಲ. ರಾತ್ರಿಯೆಲ್ಲಾ ಫೋನ್ ಬರುತ್ತದೆ ಎಂದು ತಿಳಿಸಿದರು.
ನೀವೂ ಮೊಬೈಲ್ ಬಳಕೆ ಮಾಡಬೇಡಿ ಎಂದು ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಸಲಹೆ ನೀಡಿದರು. ಕೆಲವರಿಗೆ ಮೊಬೈಲ್ ಬಗ್ಗೆ ಭಾರೀ ಅಟ್ಯಾಚ್ಮೆಂಟ್ ಇರುತ್ತದೆ. ಯಾವತ್ತೂ ಅದರಲ್ಲೇ ಇರುತ್ತಾರೆ. ನಮಗೆ ಅದರ ಚಿಂತೆ ಇಲ್ಲ. ಯಾರು ಬೇಕಾದರು ಬರಲಿ, ಹೋಗಲಿ. ತಲೆ ಕೆಡಿಸಿಕೊಳ್ಳಲ್ಲ ಎಂದರು.