ಬೆಂಗಳೂರು: ಹಂಪಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಗೆ ಚಿದಾನಂದಮೂರ್ತಿ ಅವರು ಕೂಡ ಕಾರಣೀಕರ್ತರು. ಹಂಪಿ ಅಂದಕೂಡಲೇ ತೀರಾ ಭಾವನಾತ್ಮಕವಾಗಿ ಅವರು ಪ್ರತಿಕ್ರಿಯೆ ತೋರಿಸುತ್ತಿದ್ದರು. ಕನ್ನಡಕ್ಕೆ ಕುತ್ತು ಬಂದಾಗ ಅವರು ಹೊಳೆಗೆ ಹಾರಿದ್ದರು ಎಂದು ಹಂಪಿ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಮುರುಗಪ್ಪ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು.
ಮಾಸ್ತಿಯವರು ಕನ್ನಡದ ಆಸ್ತಿಯಾದರೆ, ಚಿಮೂ ಅವರು ಕನ್ನಡತ್ವದ ಆಸ್ತಿ ಎಂದೂ ವರ್ಣಿಸಿದರು. ಅವರ ಮೂರ್ತಿ ಚಿಕ್ಕದಾದರೂ ವ್ಯಕ್ತಿತ್ವ ಬಹಳ ದೊಡ್ಡದಾಗಿತ್ತು. ಚಿಕ್ಕವರು-ದೊಡ್ಡವರು ಯಾರೇ ಇದ್ದರೂ, ಅವರೊಟ್ಟಿಗೆ ಸರಳವಾಗಿ ಪ್ರತಿಕ್ರಿಯಿಸುತ್ತಿದ್ದರು. ಅವರನ್ನು ನಾವು ಕಳೆದುಕೊಂಡಿದ್ದು, ಸಂಶೋಧನೆ ಮತ್ತು ಸಾಹಿತ್ಯಕ್ಕೆ ದೊಡ್ಡ ನಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.