ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಘೋಷಣೆ ಇಂದು ಸಂಜೆ 4 ಗಂಟೆಗೆ ಹೊರಬೀಳುವ ಸಾಧ್ಯತೆ ಇದೆ.
ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧ್ಯಕ್ಷರನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ರಾಜ್ಯಾಧ್ಯಕ್ಷರ ಘೋಷಣೆ ಬಾಕಿ ಉಳಿದಿದೆ. ಡಾ.ಮಹೇಶ್ ಜೋಷಿ ಅವರು ಅತ್ಯಧಿಕ ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ.
ಡಾ.ಮಹೇಶ್ ಜೋಷಿ ಅವರು 50 ಸಾವಿರಕ್ಕೂ ಅಧಿಕ ಮತ ಪಡೆದಿದ್ದಾರೆ. ಇನ್ನೊಬ್ಬ ಸ್ಪರ್ಧಿ ಡಾ.ಶೇಖರಗೌಡ ಮಾಲಿಪಾಟೀಲರಿಂತ 46 ಸಾವಿರ ಮತಗಳ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ.
ಅಂಚೆ ಮೂಲಕ ರವಾನೆಯಾಗುವ ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಗೋವಾ ಹಾಗೂ ಹೊರರಾಜ್ಯದ ಒಟ್ಟು ಮತಗಳ ಸಂಖ್ಯೆ 4479 ಇದ್ದು, ವಿಳಾಸದಲ್ಲಿ ಮತದಾರ ಇಲ್ಲದ ಕಾರಣಕ್ಕೆ ಈಗಾಗಲೇ 1343 ಮತಗಳು ವಾಪಸಾಗಿವೆ. ಈ ಮತಗಳ ಎಣಿಕೆ ಇನ್ನಷ್ಟೇ ನಡೆಯಬೇಕಿದೆ. ಆದರೆ ಪ್ರಥಮ ಹಾಗೂ ದ್ವಿತೀಯ ಅಭ್ಯರ್ಥಿಗಳ ನಡುವಿನ ಅಂತರ ಹೆಚ್ಚಿರುವುದರಿಂದ ಈ ಮತಗಳ ಎಣಿಕೆ ಔಪಚಾರಿಕವಷ್ಟೇ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಗಡಿನಾಡು ಜಿಲ್ಲೆಗಳ ಫಲಿತಾಂಶ:
ತಮಿಳುನಾಡು ಗಡಿಭಾಗದ ಅಧ್ಯಕ್ಷ ಸ್ಥಾನಕ್ಕೆ ಒಬ್ಬರೇ ಸ್ಪರ್ಧಿಸಿದ್ದು ತಮಿಳು ಸೆಲ್ವಿ ಅವರನ್ನು ಚುನಾವಣಾಧಿಕಾರಿಗಳು ಅಧ್ಯಕ್ಷರೆಂದು ಘೋಷಿಸಿದ್ದಾರೆ. ಗೋವಾ ರಾಜ್ಯದ ಗಡಿನಾಡು ಭಾಗದಿಂದ ಯಾವುದೇ ನಾಮಪತ್ರ ಬರದಿರುವುದರಿಂದ ಚುನಾವಣೆ ಪ್ರಕ್ರಿಯೆ ನಡೆದಿಲ್ಲ. ಮಹಾರಾಷ್ಟ್ರದಿಂದ ಸೋಮಶೇಖರ್ ಜಮಶೆಟ್ಟಿ ಗೆಲುವು ಸಾಧಿಸಿದ್ದಾರೆ. ಕೇರಳ, ಆಂಧ್ರಪ್ರದೇಶದ ಅಧ್ಯಕ್ಷರ ಆಯ್ಕೆಗೆ ಮತಎಣಿಕೆ ನಡೆಯುತ್ತಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಡಾ. ಮಹೇಶ್ ಜೋಷಿಗೆ ಘಟಾನುಘಟಿಗಳ ಬೆಂಬಲ:
ಡಾ.ಮಹೇಶ್ ಜೋಷಿಗೆ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಬೆಂಬಲ ಘೋಷಿಸಿದ್ದರು. ಚುನಾವಣೆಗೆ ಮುನ್ನ ಮಂತ್ರಾಲಯ ಶ್ರೀಗಳು ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬೆಂಬಲ ವ್ಯಕ್ತಪಡಿಸಿದ್ದರು.