ಬೆಂಗಳೂರು: ಕನ್ನಡ ಬಾವುಟ ಸುಟ್ಟಿದ್ದು, ಸಂಗೊಳ್ಳಿ ರಾಯಣ್ಣ, ಬಸವಣ್ಣರ ಪ್ರತಿಮೆಯನ್ನು ಹಾನಿಗೊಳಿಸಿದ್ದು, ಕನ್ನಡಿಗರಿಗೆ ಅಳಹೇಳನ ಮಾಡಿರುವುದನ್ನು ಖಂಡಿಸಿ ಇಂದು ಕನ್ನಡ ಒಕ್ಕೂಟದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಇದೇ ಡಿಸೆಂಬರ್ 31 ರಂದು ರಾಜ್ಯಾದ್ಯಂತ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದ್ದು, ಇದಕ್ಕೆ ಜನರು ಬೆಂಬಲಿಸುವಂತೆ ಮೆಜೆಸ್ಟಿಕ್ ನಿಲ್ದಾಣದಲ್ಲಿ ವಿವಿಧ ಸಂಘಟನೆಗಳಿಂದ ಸತ್ಯಾಗ್ರಹ ನಡೆಯಿತು.
ಪ್ರತಿಭಟನೆಯಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಕನ್ನಡಪರ ಹೋರಾಟಗಾರ ಸಾ.ರಾ. ಗೋವಿಂದು ಸೇರಿದಂತೆ ಇತರೆ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಮತ್ತು ಮುಖಂಡರು ಸಂಗೊಳ್ಳಿ ರಾಯಣ್ಣ ಪ್ರತಿಮೆ ಎದುರು ಘೋಷಣೆ ಕೂಗಿದರು.
ಬಳಿಕ ಪ್ರತಿಕ್ರಿಯಿಸಿದ ಸಾ.ರಾ. ಗೋವಿಂದು, ಸ್ವಾಭಿಮಾನಿ ಕನ್ನಡಿಗರು ಒಂದಾಗಬೇಕಾದ ಸಮಯ ಬಂದಿದೆ. ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಹಾನಿಗೊಳಿಸಿದ್ದಾರೆ. ಹೀಗಾಗಿ ಎಂಇಎಸ್ ನಿಷೇಧ ಆಗಲೇಬೇಕು. ಕರ್ನಾಟಕದ ಮನೆಗೆ ಬೆಂಕಿ ಬಿದ್ದಿದ್ದು, ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದರು. ಇದೇ ವೇಳೆ ರಾಜ್ಯದ ಸಂಸದರ ವಿರುದ್ಧ ಕಿಡಿಕಾರಿದರು. ಬೆಳಗಾವಿಯಲ್ಲಿರುವ ಶಾಸಕರು ಮರಾಠರ ಪರವಾಗಿದ್ದಾರೆ ಹೊರತು ಕನ್ನಡದವರ ಪರವಾಗಿಲ್ಲ. ಅವರಿಗೆ ಬೆಳಗಾವಿಯ ಮರಾಠರ ವೋಟ್ ಬೇಕು, ಹಾಗಾಗಿಯೇ ಅವರ ಪರ ನಿಂತಿದ್ದಾರೆ. ಎಂಇಎಸ್ ನಿಷೇಧ ಮಾಡೋವರೆಗೂ ಮುಂದಿನ ಹೋರಾಟ ಇರುತ್ತೆ ಎಚ್ಚರಿಕೆ ರವಾನಿಸಿದರು.
ಬಸ್ ಸಂಚಾರ ಸ್ಥಗಿತವಾಗುತ್ತಾ?
ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಡಿ.31ರಂದು ಕರ್ನಾಟಕ ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ, ಅಂದು ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಓಡುತ್ತಾ, ಇಲ್ವಾ, ಅನ್ನೋ ಗೊಂದಲ ಸೃಷ್ಟಿಯಾಗಿದೆ. ಕರ್ನಾಟಕ ಬಂದ್ ಕರೆಗೆ ಕೆಲ ರಾಜ್ಯ ಸಾರಿಗೆ ಒಕ್ಕೂಟಗಳು ಬೆಂಬಲ ನೀಡಿವೆ. ಹೀಗಾಗಿ ಮುನ್ನೆಚ್ಚರಿಕೆಯಾಗಿ ಬಂದ್ನಲ್ಲಿ ಭಾಗಿಯಾಗುವ ನೌಕರರಿಗೆ ನಿಗಮಗಳಿಂದ ಮೌಖಿಕ ಸೂಚನೆ ನೀಡಲಾಗಿದೆ. ಸಾರಿಗೆ ನಿಗಮಗಳ 1ಲಕ್ಷ 30 ಸಾವಿರ ನೌಕರರು ಡಿಸೆಂಬರ್ 31 ರಂದು ಕಡ್ಡಾಯ ಹಾಜರಾತಿಗೆ ಸೂಚನೆ ನೀಡಲಾಗಿದೆ. ವಾರದ ರಜೆ ಹಾಗೂ ದೀರ್ಘಾವಧಿ ರಜೆ ನೌಕರರು ಹೊರತುಪಡಿಸಿ ಎಲ್ಲಾ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕೆಂದು ಸೂಚಿಸಲಾಗಿದೆ. ಬಂದ್ ದಿನ ಸುಖಾಸುಮ್ಮನೆ ರಜೆ ಹಾಕಿದರೆ ಕ್ರಮದ ಎಚ್ಚರಿಕೆ ನೀಡಿದ್ದು, ಕರ್ತವ್ಯಕ್ಕೆ ಗೈರಾದರೆ ವೇತನ ಕಡಿತದ ಎಚ್ಚರಿಕೆ ನೀಡಲಾಗಿದೆ. ಅಗತ್ಯ ಸೇವೆಗಳ ಅಡಿಯಲ್ಲಿ ಸಾರಿಗೆ ನಿಗಮಗಳು ಬರುವುದರಿಂದ ಬಸ್ ಸಂಚಾರ ನಿಲ್ಲಿಸುವಂತಿಲ್ಲ ಅಂತ ತಿಳಿಸಲಾಗಿದೆ.
ಬಂದ್ಗೆ ಭಿನ್ನಾಭಿಪ್ರಾಯವೇಕೆ?
ಕರ್ನಾಟಕ ಬಂದ್ಗೆ ಕನ್ನಡ ಪರ ಸಂಘಟನೆಗಳಿಂದ ಪರ-ವಿರೋಧ ವ್ಯಕ್ತವಾಗಿದೆ. ಬಂದ್ಗೂ ಮೊದಲೇ ಹಲವು ಸಂಘಟನೆಗಳಿಂದ ಅಪಸ್ವರ ಶುರುವಾಗಿದ್ದು, ಕೆಲವರು ನೈತಿಕ ಬೆಂಬಲ ಸೂಚಿಸಿದ್ದರೆ, ಇನ್ನೂ ಹಲವು ಸಂಘಟನೆಗಳು ಬಂದ್ಗೆ ಬೆಂಬಲ ನೀಡಲ್ಲವೆಂದು ಹಿಂದೆ ಸರಿದಿದ್ದಾರೆ. ವ್ಯಾಪಾರಸ್ಥರು ಬಂದ್ನಿಂದ ಆಗುವ ಲೆಕ್ಕಾಚಾರ ಕುರಿತು ಚಿಂತೆಗೆ ಜಾರಿದ್ದರೆ, ಇತರೆ ಕನ್ನಡ ಪರ ಸಂಘಟನೆಗಳು ಬಂದ್ನಿಂದ ಯಾವ ಬದಲಾವಣೆಯೂ ಆಗೋದಿಲ್ಲ, ಇದು ವ್ಯರ್ಥ ಅಂತ ತಿಳಿಸಿದ್ದಾರೆ.
ಬಂದ್ ನಿಂದ ಹಿಂದೆ ಸರಿದವರು ಯಾರು?
- ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣ
- ರಾಜ್ಯ ಟ್ರಾವೆಲ್ ಮಾಲೀಕರ ಸಂಘ
- ಬೆಂಗಳೂರು ಬಟ್ಟೆ ಅಂಗಡಿ ಮಾಲೀಕರ ಸಂಘ
- ಖಾಸಗಿ ಶಾಲೆ ಒಕ್ಕೂಟ
- ಬಾರ್ & ರೆಸ್ಟೋರೆಂಟ್ ಅಸೋಸಿಯೇಷನ್
- ಮಾಲ್ ಅಸೋಸಿಯೇಷನ್
- ಗಾರ್ಮೆಂಟ್ ಲೇಬರ್ ಅಸೋಸಿಯೇಷನ್ ಸೇರಿದಂತೆ ಹಲವರು ಬಂದ್ಗೆ ಬೆಂಬಲ ನೀಡಲು ಹಿಂದೇಟು ಹಾಕಿದ್ದಾರೆ.
ಇದನ್ನೂ ಓದಿ: ರೈಡರ್ ಸಿನಿಮಾ ಪೈರಸಿ: ಭಾವುಕರಾದ ನಿಖಿಲ್ ಕುಮಾರಸ್ವಾಮಿ