ಬೆಂಗಳೂರು: ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷೆ ಕಲಿಕೆ (Kannada Language) ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಅರ್ಜಿ ಸಂಬಂಧ ಕೇಂದ್ರ ಸರ್ಕಾರ ತನ್ನ ನಿಲುವು ತಿಳಿಸುವಂತೆ ಹೈಕೋರ್ಟ್ (Karnataka High Court) ಸೂಚಿಸಿದೆ.
ಪದವಿ ತರಗತಿಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಸಂಸ್ಕೃತ ಭಾರತಿ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್.ಎಸ್.ನಾಗಾನಂದ್, ರಾಜ್ಯ ಸರ್ಕಾರ ಕನ್ನಡ ಭಾಷೆ ಕಲಿಕೆಯನ್ನು ಕಡ್ಡಾಯ ಮಾಡಿರುವ ಕ್ರಮ ಸುಪ್ರೀಂ ಕೋರ್ಟ್ ನಿರ್ದೇಶನಗಳಿಗೆ, ಸಂವಿಧಾನಕ್ಕೆ ವಿರೋಧಿಯಾಗಿದೆ. ಹೊರ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯ ಮಾಡಿರುವುದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಈ ಕುರಿತು ವಿದ್ಯಾರ್ಥಿಗಳು ತಮ್ಮ ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾರೆ ಎಂದರು.
ಅಲ್ಲದೇ, ಭಾಷೆಯನ್ನು ಬಲವಂತವಾಗಿ ಕಲಿಸಬಾರದು (Kannada Language). ನಾನು ಕನ್ನಡಿಗ, ಕನ್ನಡವನ್ನು ಪ್ರೀತಿಸುತ್ತೇನೆ. ಹಾಗೆಂದು ಹೊರಗಿನಿಂದ ಬಂದವರಿಗೂ ಕನ್ನಡ ಕಲಿಯುವಂತೆ ಒತ್ತಾಯಿಸುವುದು ಸರಿ ಎನ್ನಿಸುವುದಿಲ್ಲ. ಉನ್ನತ ಶಿಕ್ಷಣದಲ್ಲಿ ಕನ್ನಡ ಕಲಿಸುವುದು ಅಷ್ಟು ಸೂಕ್ತವಲ್ಲ. ಆದ್ದರಿಂದ ಸರ್ಕಾರದ ಆದೇಶಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಿದರು.
ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಇದೊಂದು ಸರ್ಕಾರದ ನೀತಿ ನಿರೂಪಣೆಗೆ ಸಂಬಂಧಿಸದ ವಿಚಾರ. ಕನ್ನಡ ಕಲಿಕೆ ಪ್ರಶ್ನಿಸಿ ಯಾವುದೇ ವಿದ್ಯಾರ್ಥಿ ಅರ್ಜಿ ಸಲ್ಲಿಸಿಲ್ಲ. ಯಾವುದೇ ವಿದ್ಯಾರ್ಥಿಗೆ ಸಮಸ್ಯೆಯಾಗುತ್ತಿದ್ದರೆ ಅವರು ಬಂದು ಪ್ರಶ್ನಿಸಬೇಕಿತ್ತು. ಆದರೆ, ಇಲ್ಲಿ ಭಾಷೆ ಕಲಿಕೆಯನ್ನು ಪ್ರಶ್ನಿಸಿರುವುದು ವಿದ್ಯಾರ್ಥಿಗಳಲ್ಲ. ಮೂರನೇ ವ್ಯಕ್ತಿಗಳು. ಅವರ ವೈಯಕ್ತಿಕ ಹಿತಾಸಕ್ತಿಗೆ ಈ ಅರ್ಜಿ ಸಲ್ಲಿಸಿದ್ದಾರೆ. ಇತರೆ ಭಾಷಾ ಶಿಕ್ಷಕರ ಹುದ್ದೆಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲ. ಬದಲಿಗೆ ವೈಯಕ್ತಿಕ ಹಿತಾಸಕ್ತಿ ಅರ್ಜಿಯಾಗಿದೆ. ಆದ್ದರಿಂದ ಅರ್ಜಿ ವಜಾಗೊಳಿಸಬೇಕು ಎಂದರು ಕೋರಿದರು.
ಅಲ್ಲದೇ, ಸರ್ಕಾರದ ಈ ಆದೇಶ ರಾಷ್ಟ್ರೀಯ ಶಿಕ್ಷಣ ನೀತಿಗೆ ವಿರುದ್ಧವಾಗಿಲ್ಲ. ವಿದ್ಯಾರ್ಥಿಗಳಿಗೆ ಕನ್ನಡವನ್ನು ಒಂದು ಭಾಷೆಯಾಗಿ ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಕನ್ನಡ ಗೊತ್ತಿಲ್ಲದವರಿಗೆ ಸರಳವಾಗಿ ಕನ್ನಡ ಕಲಿಸಲು ಪ್ರತ್ಯೇಕ ಪಠ್ಯ ರೂಪಿಸಲಾಗಿದೆ. ಸರ್ಕಾರದ ನೀತಿ ನಿರೂಪಣೆ ವಿಚಾರದಲ್ಲಿ ಕೋರ್ಟ್ ಮಧ್ಯಪ್ರವೇಶಿಸುವಂತಿಲ್ಲ. ಮಹಾರಾಷ್ಟ್ರದಲ್ಲಿ ಮರಾಠಿ ಭಾಷೆ ಕಲಿಸುವ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಲು ನಿರಾಕರಿಸಿದೆ ಎಂದು ವಿವರಿಸಿದರು.
ವಾದ ಪ್ರತಿವಾದ ಆಲಿಸಿದ ಪೀಠ, ಕನ್ನಡ ಕಲಿಕೆ ಪ್ರೋತ್ಸಾಹಿಸುವುದೇನೋ ಸರಿ. ಆದರೆ ಕಡ್ಡಾಯ ಮಾಡುವುದು ಸರಿಯೇ ಎಂದು ಪ್ರಶ್ನಿಸಿತು. ಬಳಿಕ ಅರ್ಜಿ ಸಂಬಂಧ ಕೇಂದ್ರ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸುವಂತೆ ಸೂಚಿಸಿ ವಿಚಾರಣೆಯನ್ನು ನ. 29 ಕ್ಕೆ ಮುಂದೂಡಿತು.
ಇದನ್ನೂ ಓದಿ: ಪದವಿಯಲ್ಲಿ ಕನ್ನಡ ಕಲಿಕೆ ಕಡ್ಡಾಯ: ಶಿಕ್ಷಣದಲ್ಲಿ ರಾಜಕೀಯ ಮಾಡುವುದೇಕೆ?: ಹೈಕೋರ್ಟ್