ಬೆಂಗಳೂರು: ರಾಮನಗರದ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಸಮೀಪದ ಸರ್ವೇ ನಂಬರ್ 1ರ ಚಲ್ಲವಾಡಿ ಮೀಸಲು ಅರಣ್ಯ ಪ್ರದೇಶದ ಭೂಮಿಯನ್ನು ಚರ್ಚ್, ಆಟದ ಮೈದಾನ ಮತ್ತು ಆಸ್ಪತ್ರೆ ನಿರ್ಮಾಣಕ್ಕೆ ಒತ್ತುವರಿ ಮಾಡಿಕೊಂಡಿರುವ ಆರೋಪಕ್ಕೆ ಸಂಬಂಧಿಸಿದಂತೆ ವಸ್ತುಸ್ಥಿತಿ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಈ ಕುರಿತು ಪರಿಸರವಾದಿಗಳಾದ ಗಿರೀಶ್ ಭಾರದ್ವಾಜ್ ಮತ್ತು ಆರ್.ಸುರೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ, ಅರ್ಜಿದಾರರ ಪರ ವಕೀಲ ಗಣಪತಿ ಭಟ್, ಚಲ್ಲವಾಡಿ ಮೀಸಲು ಅರಣ್ಯ ಪ್ರದೇಶದ ಜಾಗವನ್ನು ಒತ್ತುವರಿ ಮಾಡಿಕೊಂಡು ಚರ್ಚ್, ಆಟದ ಮೈದಾನ, ಆಸ್ಪತ್ರೆ ಮತ್ತು ಸಮುದಾಯ ಕೇಂದ್ರಗಳನ್ನು ನಿರ್ಮಿಸುತ್ತಿದೆ. ಈ ಬಗ್ಗೆ ಸ್ಥಳೀಯ ಅಧಿಕಾರಿಗಳನ್ನು ವಿಚಾರಿಸಿದರೆ ಅಧಿಕೃತವಾಗಿ ಯಾವುದೇ ಭೂಮಿ ಮಂಜೂರಾಗಿಲ್ಲ. ಅದಕ್ಕೆ ಯಾವುದೇ ದಾಖಲೆ ಇಲ್ಲ ಎನ್ನುತ್ತಾರೆ ಎಂದು ತಿಳಿಸಿದರು.
ಅಲ್ಲದೇ, ಮೀಸಲು ಅರಣ್ಯ ಪ್ರದೇಶವನ್ನು ಅನ್ಯ ಉದ್ದೇಶಗಳಿಗೆ ಬಳಸಲು ಸಾಧ್ಯವಿಲ್ಲ. ಕಾನೂನಿನಲ್ಲೂ ಅದಕ್ಕೆ ಅವಕಾಶವಿಲ್ಲ. ಸರ್ಕಾರದಿಂದ ಭೂ ಮಂಜೂರು ಇಲ್ಲದೆಯೂ ನಿಯಮ ಬಾಹಿರವಾಗಿ ಒತ್ತುವರಿ ಮಾಡಿಕೊಂಡು ನಿರ್ಮಾಣ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಆ ಬಗ್ಗೆ ಫೋಟೋ ಸಹಿತ ಜಿಲ್ಲಾಧಿಕಾರಿ, ಅರಣ್ಯಾಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸರ್ಕಾರದಿಂದ ಭೂ ಮಂಜೂರಾತಿ ಇಲ್ಲದೆ ಒತ್ತುವರಿ ಮಾಡಿದ ಜಾಗದಲ್ಲಿ ನಿರ್ಮಾಣ ಕಾರ್ಯ ಕೈಗೊಂಡಿರುವ ಕುರಿತು ಅಧಿಕಾರಿಗಳಿಂದ ಮಾಹಿತಿ ತರಿಸಿಕೊಂಡು ವರದಿ ಸಲ್ಲಿಸುವಂತೆ ಸರ್ಕಾರದ ಪರ ವಕೀಲರಿಗೆ ಸೂಚನೆ ನೀಡಿ ವಿಚಾರಣೆಯನ್ನು ನ.15ಕ್ಕೆ ಮುಂದೂಡಿತು.