ಬೆಂಗಳೂರು: 6 ರಿಂದ 9ನೇ ತರಗತಿ ಪರೀಕ್ಷೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದ ಸಿದ್ಧತೆಗೂ ಸೂಕ್ತ ಸಮಯಾವಕಾಶ ಬೇಕಾಗುತ್ತದೆ. ಆದ್ದರಿಂದ ಪರೀಕ್ಷೆ ನಡೆಸಲು ಕ್ಯಾಮ್ಸ್ ನಿರ್ಧರಿಸಿದ್ದು, ಅಭಿಪ್ರಾಯಕ್ಕಾಗಿ ಸರ್ಕಾರಕ್ಕೆ ಪತ್ರ ರವಾನೆ ಮಾಡಲಾಗಿದೆ ಎಂದು ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕಳೆದ ಜೂನ್ ನಿಂದಲೇ ಆನ್‌ಲೈನ್ ಪಾಠ ಪ್ರಾರಂಭವಾಗಿದೆ. ಪಠ್ಯ ಪುನರಾವರ್ತನೆಯೂ ಮುಗಿದಿದೆ. ವರ್ಷವಿಡೀ ಕಲಿತಿದ್ದು ವ್ಯರ್ಥವಾಗದ ರೀತಿಯಲ್ಲಿ 6ರಿಂದ 9ನೇ ತರಗತಿ ಪರೀಕ್ಷೆ ನಡೆಬೇಕಾಗಿದೆ. ಅಲ್ಲದೆ, ಕೋವಿಡ್‌ನಿಂದಾಗಿ ಮುಂದಿನ ದಿನಗಳಲ್ಲಿ ಶಾಲೆಗೆ ರಜಾ ಕೊಟ್ಟು ಮಕ್ಕಳಿಗೆ ಈ ವರ್ಷವು ಪರೀಕ್ಷೆ ಇಲ್ಲದಂತಾಗುವ ಒಂದು ಭೀತಿ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಆಯಾ ಶಾಲೆಗಳ ಅನುಕೂಲಕ್ಕೆ ಪೂರಕವಾಗಿ ಮತ್ತು ಪಾಲಕ ಪೋಷಕರ ಅಭಿಪ್ರಾಯದಂತೆ ತಕ್ಷಣ ಪರೀಕ್ಷೆ ಪ್ರಕ್ರಿಯೆ ಮಾಡಲು ಕ್ಯಾಮ್ಸ್ ಮುಂದಾಗಿದ್ದು, ಈ ಅಂಶವನ್ನು ಶಿಕ್ಷಣ ಇಲಾಖೆಯ ಗಮನಕ್ಕೂ ತರುವುದಾಗಿ ತಿಳಿಸಿದ್ದಾರೆ. ಇಲಾಖೆಯ ನಿಯಾಮಾನುಸಾರ 10 ಮತ್ತು 12ನೇ ತರಗತಿಯ ಪರೀಕ್ಷೆಯನ್ನ ನಿಗದಿತ ದಿನಾಂಕದಂದು ನಡೆಸಲಾಗುವುದು.
ಕೋವಿಡ್ ಕಾರಣಕ್ಕೆ ಹೆಚ್ಚಾಗಿ ಶಾಲೆಗಳು ಮುಚ್ಚುವಂತಹ ಪರಿಸ್ಥಿತಿ ಉದ್ಭವಿಸುವ ಮುನ್ನ ಶಿಕ್ಷಣ ಇಲಾಖೆ ಹಾಗು ಆರೋಗ್ಯ ಇಲಾಖೆ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಬೇಗನೆ ಪರೀಕ್ಷೆ ಮುಗಿಸಲು ಕಾಲಾವಕಾಶ ಕಲ್ಪಿಸಿಕೊಡಬೇಕು. ಅಷ್ಟೇ ಅಲ್ಲದೆ ಇದರಿಂದ ಮುಂದಿನ ಶೈಕ್ಷಣಿಕ ವರ್ಷಕ್ಕೆ ಬೇಕಾದಂತಹ ಸಿದ್ಧತೆಗೂ ಸೂಕ್ತ ಸಮಯಾವಕಾಶ ಬೇಕು ಅಂತ ತಿಳಿಸಿದ್ದಾರೆ.
ಸಿಬ್ಬಂದಿಗೆ ರಜೆ ಅನಿವಾರ್ಯ
ವರ್ಷವಿಡೀ ಆನ್ಲೈನ್ ಮತ್ತು ಆಫ್ಲೈನ್ ತರಗತಿ ನಡೆಸಿ ಶಿಕ್ಷಕ ವರ್ಗ ಶ್ರಮಿಸಿದ್ದು, ಅವರಿಗೂ ಬೇಸಿಗೆ ರಜಾ ಅನಿವಾರ್ಯವಾಗಿದೆ. ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಹೊರ ರಾಜ್ಯದಿಂದ ಬಂದ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಬೇಸಿಗೆ ಬಿಸಲುವು ಹೆಚ್ಚಾಗುತ್ತಿರುವ ಹಿನ್ನೆಲೆ, ಈ ನಿರ್ಧಾರ ಆರೋಗ್ಯಕರ ಎಂದು ಭಾವಿಸಿ ಶಿಕ್ಷಣ ಇಲಾಖೆ ಗಮನಕ್ಕೆ ತರುತ್ತಿದ್ದೇವೆ. ತಮ್ಮ ಆಕ್ಷೇಪಗಳೇನಾದರು ಇದ್ದಲ್ಲಿ ಪತ್ರ ತಲುಪಿದ ಎರಡು ದಿನದೊಳಗೆ ತಿಳುವಳಿಕೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.