ಬೆಂಗಳೂರು : ದಕ್ಷಿಣ ಭಾರತದ ವರ್ಸಿಟೈಲ್ ಆ್ಯಕ್ಟರ್ ಅಂತಾನೇ ಗುರುತಿಸಿಕೊಂಡಿರುವ ನಟ ಕಮಲ್ ಹಾಸನ್ ಕಳೆದ ಮೂರು ವರ್ಷದಿಂದ ಸಿನಿಮಾಗಳನ್ನ ಮಾಡದೇ ರಾಜಕೀಯ ಪಕ್ಷ ಕಟ್ಟಿದ್ದರು. ರಾಜಕೀಯ ಅಂದ್ಮೇಲೆ ಗೆಲುವು-ಸೋಲು ಕಾಮನ್. ಈ ವಿಷಯದಲ್ಲಿ ಕಮಲ್ ಹಾಸನ್ ಸೋಲು ಕಂಡಿದ್ದಾರೆ. ಈಗ ಕಮಲ್ ಹಾಸನ್ ಮತ್ತೆ ವಿಕ್ರಮ್ ಎಂಬ ಗ್ಯಾಂಗ್‌ಸ್ಟರ್ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ.
ಕಮಲ್ ಹಾಸನ್ ಜೊತೆ ವಿಜಯ್ ಸೇತುಪತಿ ಮತ್ತು ಫಹಾದ್ ಫಾಸಿಲ್ ಅಭಿನಯಿಸಿರುವ ವಿಕ್ರಮ್ ಸಿನಿಮಾ ಇಂದು ಭರ್ಜರಿಯಾಗಿ ಬಿಡುಗಡೆಗೊಂಡಿದೆ. ಕಾತುರದಿಂದ ಕಾಯುತ್ತಿದ್ದ ಕಮಲ್ ಹಾಸನ್ ಅಭಿಮಾನಿಗಳು ಚಿತ್ರ ಮಂದಿರಕ್ಕೆ ತೆರಳಿ ಸಿನಿಮಾ ವೀಕ್ಷಿಸುತ್ತಿದ್ದಾರೆ.
ಓದಿ: ಬೆಂಗಳೂರಲ್ಲಿ ವಿಕ್ರಮ್ ಸಿನಿಮಾದ ಪ್ರಚಾರ : ಬೆಳ್ಳಿತೆರೆಗೆ ಕಮ್ಬ್ಯಾಕ್ ಆದ ಕಮಲ್ ಹಾಸನ್
ಚಿತ್ರದ ಪ್ರಚಾರಕ್ಕಾಗಿ ನಟ ಕಮಲ್ ಹಾಸನ್ ನಿನ್ನೆ ಬೆಂಗಳೂರಿಗೆ ಆಗಮಿಸಿದ್ದರು. ಸಂಪಿಗೆ ಚಿತ್ರಮಂದಿರದ ಬಳಿ ಇರುವ ಮಂತ್ರಿ ಮಾಲ್ನಲ್ಲಿ 3.30ಕ್ಕೆ ಶುರುವಾಗಬೇಕಿದ್ದ ಕಾರ್ಯಕ್ರಮ ಎರಡೂವರೆ ಗಂಟೆ ತಡವಾಗಿ ಶುರುವಾಗಿತ್ತು.
ತಡವಾಗಿ ಬಂದಿದ್ದಕ್ಕೆ ಅಭಿಮಾನಿಗಳಲ್ಲಿ ಈ ವೇಳೆ ಕಮಲ್ ಹಾಸನ್ ಕ್ಷಮೆಯಾಚಿಸಿ, ನಿಮಗೆ ಗೊತ್ತೇ ಇದೆ ಬೆಂಗಳೂರು ಅಂದ್ರೆ ಟ್ರಾಫಿಕ್ ಅಂತಾ ಎಂದು ಹೇಳಿದರು. ಚಿತ್ರದ ಪ್ರಮೋಶನ್ ವೇಳೆ ಕಮಲ್ ಹಾಸನ್ ಮಾತನಾಡುತ್ತಿದ್ದಾಗ ಅಭಿಮಾನಿಗಳು ಚೇರ್‌ನಿಂದ ಚೇರ್ಗೆ ಜಂಪ್ ಮಾಡ್ತಿದ್ದರು.
ಇದನ್ನು ತಡೆಯಲು ಸೆಕ್ಯೂರಿಟಿ ಗಾರ್ಡ್ ಮುಂದಾಗಿದ್ದಾರೆ. ಈ ವೇಳೆ ಕಮಲ್ ಹಾಸನ್ ಅಭಿಮಾನಿಗಳು ಮತ್ತು ಸೆಕ್ಯೂರಿಟಿ ಗಾರ್ಡ್ ಮಧ್ಯೆ ಜಗಳ ನಡೆದಿದೆ. ಇವರ ಜಗಳ ವಿಕೋಪಕ್ಕೆ ತಿರುಗಿದ್ದು, ಅಭಿಮಾನಿಗಳು ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿದರು. ಅಷ್ಟೇ ಅಲ್ಲ, ಸ್ಥಳದಲ್ಲಿದ್ದ ಮಹಿಳೆಯ ಮೇಲೂ ಹಲ್ಲೆ ನಡೆದಿದೆ ಎನ್ನಲಾಗಿದೆ. ಈಗ ಇದಕ್ಕೆ ಸಂಬಂಧಿಸಿದಂತ ವಿಡಿಯೋ ಮಾಧ್ಯಮಕ್ಕೆ ಲಭ್ಯವಾಗಿದೆ.
ಸ್ಥಳದಲ್ಲಿದ್ದ ಪೊಲೀಸರು ಅಭಿಮಾನಿಗಳನ್ನು ಚದುರಿಸಿ ಮುಂದೆ ಯಾವುದೇ ಅನಾಹುತ ಆಗದಂತೆ ತಡೆದರು. ಹಲ್ಲೆ ನಡೆದಿರುವ ಬಗ್ಗೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ದೂರು ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.