ಬೆಂಗಳೂರು: ಕೇವಲ ಅಧಿಕಾರದ ಉದ್ದೇಶದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡವು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಹೊಂದಾಣಿಕೆ ಮಾಡಿಕೊಂಡವು. ನಮ್ಮ ಕ್ಷೇತ್ರದ ಅಭಿವೃದ್ಧಿ, ನಮ್ಮ ಭರವಸೆ, ನಿರೀಕ್ಷೆಗೆ ಅನುಗುಣವಾಗಿ ನಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ನಾವು ಪಕ್ಷ ಬಿಡಬೇಕಾಯಿತು ಎಂದು ಅನರ್ಹ ಶಾಸಕ ಡಾ. ಕೆ.ಸುಧಾಕರ್ ಹೇಳಿದ್ದಾರೆ.
ಮೈತ್ರಿಯಲ್ಲಿ ಕೆಲವರು ಹೇಳಿದಂತೆ ಮಾತ್ರ ಸರ್ಕಾರ ನಡೆಯುತ್ತಿತ್ತು. ಆದರೆ ನಾವು ಬೇರೆ ನಾಯಕರಿಗೆ ಅವಲಂಬಿತರಾಗಿ, ಬೇರೆ ನಾಯಕರ ಕೃಪಾಕಟಾಕ್ಷದಿಂದ ಗೆದ್ದವರಲ್ಲ. ಸ್ವಯಂ ಕೃಷಿಯಿಂದ ಗೆದ್ದವರು. ಸ್ವಾಭಿಮಾನಕ್ಕೆ ಧಕ್ಕೆಯಾದ ನಂತರ ಕುರ್ಚಿ ಇದ್ದರೆಷ್ಟು ಬಿಟ್ಟರೆಷ್ಟು? ರಾಜ್ಯದ ಭವಿಷ್ಯ ಮುಖ್ಯವೆಂದು ರಾಜೀನಾಮೆ ಕೊಡಬೇಕಾಯಿತು ಎಂದರು.
ಯಾವುದೇ ಆಸೆ, ಆಮಿಷಕ್ಕೆ ನಾವು ರಾಜೀನಾಮೆ ಕೊಡಲಿಲ್ಲ. ಆಶಯಕ್ಕಾಗಿ ರಾಜೀನಾಮೆ ನೀಡಿದ್ದೇವೆ. ಮೈತ್ರಿ ಮುರಿದ ನಂತರ ಎರಡೂ ಪಕ್ಷ ಹೇಗೆ ಕಚ್ಚಾಡುತ್ತಿವೆ ಗೊತ್ತಿದೆ. ಅಂತಃಕರಣದಿಂದ ಬಿಜೆಪಿ ತತ್ವ ಸಿದ್ಧಾಂತ ಒಪ್ಪಿ ಮೋದಿ ನಾಯಕತ್ವದಲ್ಲಿ ನಂಬಿಕೆ ಇಟ್ಟು, ಸಿಎಂ ಬಿಎಸ್ವೈ ಆದರ್ಶ ನಾಯಕತ್ವದಲ್ಲಿ ನಂಬಿಕೆ ಇಟ್ಟು ಶಿಸ್ತುಬದ್ಧ ಪಕ್ಷಕ್ಕೆ ಬಂದಿದ್ದೇವೆ ಎಂದರು.
ಇಂತಹ ಕ್ರೂರ, ವಿಕೃತ ಮನಸ್ಸಿನಿಂದ ಆದೇಶ ಕೊಟ್ಟ ರಮೇಶ್ ಕುಮಾರ್ರಂತಹ ಸ್ಪೀಕರ್ ಈ ರಾಜ್ಯದ ರಾಜಕಾರಣದಲ್ಲಿ ಮತ್ತೊಮ್ಮೆ ಬರಬಾರದು. ನಮ್ಮ ರಾಜಕೀಯ ಬದುಕನ್ನೇ ಮುಗಿಸಲು ಹೊರಟಿದ್ದ ಅವರಿಗೆ ಸುಪ್ರಿಂಕೋರ್ಟ್ ತಕ್ಕ ಉತ್ತರ ಕೊಟ್ಟಿದೆ. ಸಮ ಸಮಾಜ ನಿರ್ಮಾಣ ಮಾಡಬೇಕಾದರೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಉಳಿಯಬೇಕು. ಹಾಗಾಗಬೇಕಾದರೆ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲೇಬೇಕು. ಎಲ್ಲರ ಪ್ರಾರ್ಥನೆ ಫಲಿಸಿದೆ. ನಮಗೆ ನ್ಯಾಯ ಸಿಕ್ಕಿದೆ. ನಾವು ರಾಜ್ಯದ ಒಳಿತಿಗಾಗಿ ರಾಜೀನಾಮೆ ಕೊಟ್ಟಿದ್ದೇವೆ ಹೊರತು ಸ್ವಾರ್ಥಕ್ಕಾಗಿ ಅಲ್ಲ ಎಂದರು.