ಬೆಂಗಳೂರು: ಒಬ್ಬ ವ್ಯಕ್ತಿ ಈಶ್ವರಪ್ಪ ಕಮಿಷನ್ ಕೇಳಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಈ ನಿರಾಧಾರ ಆರೋಪಕ್ಕೆ ಹಿಂದೆ ಸಿಎಂ ಆಗಿದ್ದವರು ಸಹ ಧರಣಿ ಕುಳಿತಿದ್ದಾರೆ. ಇದನ್ನು ನೋಡಿ ಇಡೀ ದೇಶ ನಗುತ್ತಿದೆ. ಇಂತಹ ನೀಚ ರಾಜಕೀಯ ಯಾರೂ ಮಾಡಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ರಾಜೀನಾಮೆ ಬಳಿಕ ತಮ್ಮ ಸರ್ಕಾರಿ ನಿವಾಸದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ನಾನು ಕೇಳಲು ಬಯಸುತ್ತೇನೆ, ನಿಮ್ಮ ಕಾಲದಲ್ಲಿ ಕಾರ್ಯಾದೇಶ ಇಲ್ಲದೆ ಸಾವಿರಾರು ಕೋಟಿ ರೂಪಾಯಿಯ ಕಾಮಗಾರಿಗೆ ಅನುಮೋದನೆ ನೀಡಿದ್ದಾರಾ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಅಜೀವನ ಪ್ರತಿಪಕ್ಷ ಸ್ಥಾನದಲ್ಲಿದ್ದು ಧರಣಿ ಮಾಡುತ್ತಲೇ ಇರಲಿ. ಇಡೀ ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ?. ಕೇವಲ ಕರ್ನಾಟಕದಲ್ಲಿ ಸ್ವಲ್ಪ ಜೀವ ಹಿಡಿದುಕೊಂಡಿದೆ. ಮುಂದಿನ ಚುನಾವಣೆಯಲ್ಲಿ ಅಧಿಕೃತ ಪ್ರತಿಪಕ್ಷವೂ ಆಗುವುದಿಲ್ಲ. ಅವರಿಗೆ ಯಾವುದೇ ವಿಷಯವೇ ಇಲ್ಲ. ಗುತ್ತಿಗೆದಾರರ ಸಂಘದ ಕನಕಪುರದ ವ್ಯಕ್ತಿಯೊಬ್ಬ ಆರು ತಿಂಗಳಿಂದ ಮಂತ್ರಿಯವರು 40 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆ ಎಂದು ಏಕೆ ಹೇಳುತ್ತಿಲ್ಲ. ಅವರು ಕಾಂಗ್ರೆಸ್ ಏಜೆಂಟ್ ಆಗಿದ್ದಾರೆ. 'ಪ್ರಕರಣದಲ್ಲಿ ಶೇ. ಒಂದರಷ್ಟು ತಪ್ಪಿದ್ದರೆ ನನಗೆ ಶಿಕ್ಷೆ ಕೊಡು. ಇಲ್ಲವಾದರೆ ನನ್ನನ್ನು ದೋಷಮುಕ್ತಗೊಳಿಸು' ಎಂದು ನನ್ನ ಮನೆ ದೇವರು ಚೌಡೇಶ್ವರಿ ಬಳಿ ಪ್ರಾರ್ಥನೆ ಮಾಡಿದ್ದೇನೆ. ಸಂತೋಷ್ ಪಾಟೀಲ್ ಕೊಲೆಯೋ ಅಥವಾ ಸಹಜ ಸಾವೋ ಎಂಬುದನ್ನು ತನಿಖೆ ಮಾಡಲು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ನನ್ನ ಮೇಲೆ ಆಪಾದನೆ ಬಂದಿದೆ, ಅದರಿಂದ ವಿಮುಖನಾಗಬೇಕು. ತನಿಖೆ ನಡೆಸುವಂತೆ ಸಿಎಂಗೆ ಮನವಿ ಮಾಡಿದ್ದೇನೆ. ನಮ್ಮ ನಾಯಕರಿಗೆ, ಮುಖಂಡರಿಗೆ ಹಾಗೂ ರಾಜ್ಯಾಧ್ಯಕ್ಷರಿಗೆ ಮುಜುಗರ ಆಗಬಾರದೆಂದು ನಾನೇ ರಾಜೀನಾಮೆ ನೀಡಿದ್ದೇನೆ. ಪ್ರತಿಪಕ್ಷದವರು ತಾವು ಜೀವಂತ ಇದ್ದೇವಿ ಎಂದು ತೋರಿಸಲು ಪ್ರತಿಭಟನೆ ಮಾಡುತ್ತಿದ್ದಾರೆ. ಹಿಂದೆ ನಿಮ್ಮ ಸರ್ಕಾರದ ಅವಧಿಯಲ್ಲಿ ಕೆ ಜೆ ಜಾರ್ಜ್ ವಿರುದ್ಧ ಎಲ್ಲ ಸಾಕ್ಷಿ ಇದ್ದರೂ ಏಕೆ ಬಂಧಿಸಲಿಲ್ಲ ಎಂದು ಈಶ್ವರಪ್ಪ ಪ್ರಶ್ನಿಸಿದರು.
ಸಂತೋಸ್ ಉಡುಪಿಗೆ ಬಂದು ಸಾವನ್ನಪ್ಪಿದ್ದಾನೆ. ಇದು ಆತ್ಮಹತ್ಯೆಯೋ, ಕೊಲೆಯೋ?. ಇದರ ಹಿಂದೆ ಯಾರ್ಯಾರಿದ್ದಾರೆ?, ಯಾವ ಪಕ್ಷದವರು ಇದ್ದಾರೆ? ತನಿಖೆ ನಡೆಸಿ ಸತ್ಯಾಂಶ ಹೊರ ಬರಬೇಕು. ನಾನು ಡೆತ್ ನೋಟ್ ನೋಡಿಲ್ಲ. ವಾಟ್ಸ್ ಆ್ಯಪ್ನಲ್ಲಿ ಬಂದಿರುವುದು, ಅದು ಡೆತ್ ನೋಟ್ ಅಥವಾ ಅಲ್ಲವೋ ಎಂಬುದರ ಬಗ್ಗೆ ಅನುಮಾನ ಇದೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ನನ್ನ ಮೊಮ್ಮಗನ ಮದುವೆ ಕಾರ್ಯಕ್ರಮ ಇರುವ ಹಿನ್ನೆಲೆ ನಾನು ಪಕ್ಷದ ಕಾರ್ಯಕಾರಿಣಿಗೆ ಬರುವುದಿಕ್ಕೆ ಆಗುವುದಿಲ್ಲ ಎಂದು ರಾಜ್ಯಾಧ್ಯಕ್ಷರಿಗೆ ತಿಳಿಸಿದ್ದೇನೆ ಎಂದು ಇದೇ ವೇಳೆ ಈಶ್ವರಪ್ಪ ಸ್ಪಷ್ಟಪಡಿಸಿದರು. ರಾಜೀನಾಮೆ ನೀಡಿದ ಬಳಿಕ ತಮ್ಮ ಸರ್ಕಾರಿ ಕಾರು ವಾಪಸ್ ಕೊಟ್ಟ ಈಶ್ವರಪ್ಪ, ತಮ್ಮ ಸರ್ಕಾರಿ ನಿವಾಸದ ಬಳಿಯಿಂದ ಖಾಸಗಿ ಕಾರಿನಲ್ಲಿ ರೈಲ್ವೆ ನಿಲ್ದಾಣಕ್ಕೆ ಹೊರಟರು. ರಾತ್ರಿ 11:15ಕ್ಕೆ ರೈಲಿನಿಂದ ಶಿವಮೊಗ್ಗಕ್ಕೆ ತೆರಳಿದ್ದಾರೆ.
ಇದನ್ನೂ ಓದಿ: ಸಿಎಂ ಬೊಮ್ಮಾಯಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಕೆ.ಎಸ್.ಈಶ್ವರಪ್ಪ