ಬೆಂಗಳೂರು: ಸಹಕಾರ ಬ್ಯಾಂಕ್ನಲ್ಲಿ 19 ಲಕ್ಷ ರೈತರು ಸಾಲ ಪಡೆದಿದ್ದಾರೆ. 1,81,9151 ರೈತರ ಮಾಹಿತಿ ಅಪ್ಲೋಡ್ ಆಗಿದೆ. 1.30 ಲಕ್ಷ ರೂ. ಮೊತ್ತ ನೀಡುವುದು ಬಾಕಿ ಇದೆ. ಬಾಕಿ ಇದ್ದವರು ಆಧಾರ್ ನಂಬರ್ ಸೇರಿ ಕೆಲ ದಾಖಲೆಗಳನ್ನ ಸಲ್ಲಿಸಿಲ್ಲ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉಳಿದ ರೈತರ ಪಟ್ಟಿ ಗ್ರೀನ್ ಲಿಸ್ಟ್ ಸೇರಿದೆ. ಜುಲೈ 10ರ ವರೆಗೆ ನಮಗೆ ಗಡುವು ಇದೆ. ಅದರೊಳಗೆ ಸಹಕಾರ ಬ್ಯಾಂಕ್ ನಲ್ಲಿರೋ ರೈತರ ಸಾಲಮನ್ನಾ ಕಂಪ್ಲೀಟ್ ಮನ್ನಾ ಆಗಲಿದೆ ಎಂದು ವಿವರಿಸಿದರು.
ಸಿಎಂ ಹೆಚ್ಡಿಕೆ ಗ್ರಾಮ ವಾಸ್ತವ್ಯಕ್ಕೆ ದಿನಾಂಕ ನಿಗದಿಯಾಗಿದೆ. ಜೂನ್ 26 ರಂದು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕರಿಗುಡ್ಡದಲ್ಲಿ ಗ್ರಾಮವಾಸ್ತವ್ಯ ಮಾಡಲಿದ್ದಾರೆ. ಸಿಎಂ ಅಂದು ಕರಿಗುಡ್ಡದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರಾತ್ರಿ ವಾಸ್ತವ್ಯ ಮಾಡಲಿದ್ದು, ಜೂ.27 ರಂದು ಉಜಿಳಾಂಬ ಗ್ರಾಮದಲ್ಲಿ ವಾಸ್ತವ್ಯ ಮಾಡುವರು. ಇದು ಬೀದರ್ ಜಿಲ್ಲೆಯ ಬಸವಕಲ್ಯಾಣದ ಗ್ರಾಮವಾಗಿದೆ. ಗ್ರಾಮದ ಸರ್ಕಾರಿ ಶಾಲೆಯಲ್ಲಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ ಎಂದರು.
ಈ ಸಂದರ್ಭ ಜನರ ಸಮಸ್ಯೆಗಳನ್ನ ಆಲಿಸಲಿರುವ ಸಿಎಂ, ಜೂ.25 ರ ಸಂಜೆ ಉದ್ಯಾನ್ ಎಕ್ಸ್ಪ್ರೆಸ್ ಮೂಲಕ ಪಯಣ ಬೆಳೆಸಿ ನೇರವಾಗಿ ರಾಯಚೂರಿಗೆ ತೆರಳಲಿದ್ದಾರೆ. ಮಳೆಯಿಂದಾಗಿ ಕಲಬುರಗಿ ಜಿಲ್ಲೆ ಗ್ರಾಮವಾಸ್ತವ್ಯ ರದ್ದಾಗಿತ್ತು. ಜುಲೈ ಮೊದಲ ವಾರ ಗ್ರಾಮವಾಸ್ತವ್ಯಕ್ಕೆ ಚಿಂತನೆ ನಡೆದಿತ್ತು ಎಂದು ವಿವರಿಸಿದರು.
ಪ್ರಗತಿ ಪರಿಶೀಲನೆಯಾಗಿದೆ
ಸಹಕಾರ ಇಲಾಖೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆದಿದೆ. ಸಾಲಮನ್ನಾ ಯೋಜನೆ ಬಗ್ಗೆ ಪ್ರಗತಿ ಹೇಗಿದೆ ಎಂಬ ಬಗ್ಗೆ ಸಭೆಯಲ್ಲಿ ಕೂಲಂಕುಷ ಚರ್ಚೆ ನಡೆಸಿ ಪರಾಮರ್ಶೆ ನಡೆಸಿದ್ದೇವೆ. ಇದರಲ್ಲಿ ಎಲ್ಲ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಭಾಗಿ ಆಗಿದ್ದರು. ಕೆಲ ರೈತರ ಹೆಸರು ಈಗಾಗಲೇ ಗ್ರೀನ್ ಲಿಸ್ಟ್ಗೆ ಬಂದಿದೆ. ಇನ್ನು ಕೆಲವು ಬಂದಿಲ್ಲ. ಅವರು ಆಧಾರ್, ಪಡಿತರ ಚೀಟಿ ಸಲ್ಲಿಸಿಲ್ಲ. 2 ಸಾವಿರ ಕೋಟಿ ಇಂದು ಅಥವಾ ನಾಳೆ ಬಿಡುಗಡೆ ಆಗಲಿದೆ. 1,500 ಕೋಟಿ ಈಗಾಗಲೇ ರಿಲೀಸ್ ಆಗಿದೆ. ರೈತರ ಹಣ ಬಿಡುಗಡೆ ಆಗದಿದ್ದರೆ ಭಯ ಬೀಳಬೇಕಿಲ್ಲ. ಸಿಎಂ ಅದರ ಬಗ್ಗೆ ಹೆಚ್ಚು ಮುತುವರ್ಜಿಯಿಂದ ಕೆಲಸ ಮಾಡುತ್ತಿದ್ದಾರೆ. ಎಲ್ಲ ರೈತರ ಸಾಲ ಮನ್ನಾ ಆಗಲಿದೆ. ಇನ್ನು ಒಂದು ವಾರದಲ್ಲಿ ಎಲ್ಲರಿಗೆ ಹಣ ಬಿಡುಗಡೆ ಆಗಲಿದೆ. ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.