ಬೆಂಗಳೂರು: ಕಳೆದ 7 ವರ್ಷಗಳಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು, ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಜೊತೆಗೆ ಕೊರೊನಾ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು ಎಂದು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ತಿಳಿಸಿದ್ದಾರೆ.
ಜೆ ಪಿ ನಡ್ಡಾ ಅವರೊಂದಿಗಿನ ವಿಡಿಯೋ ಸಂವಾದದಲ್ಲಿ ಅಧಿಕೃತ ನಿವಾಸ ಕಾವೇರಿಯಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾಗಿಯಾದರು. ಒಂದು ಗಂಟೆ ಕಾಲ ಸುದೀರ್ಘ ಭಾಷಣ ಮಾಡಿದ ನಡ್ಡಾ, ಕೊರೊನಾವನ್ನ ಸರಿಯಾಗಿ ನಿಭಾಯಿಸಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನ ಜನರಿಗೆ ತಲುಪಿಸಬೇಕು, ನಾಳೆ ಯೋಗ ದಿನಾಚರಣೆ ಪ್ರಯುಕ್ತ ಲಸಿಕೆ ಮೇಳ ಮಾಡಬೇಕು. ಇದನ್ನ ಯಶಸ್ವಿಗೊಳಿಸಿ ಎಂದು ಕರೆ ನೀಡಿದರು.
ಪಕ್ಷ ಸಂಘಟನೆ ಮರೆಯಬೇಡಿ:
ಕೋವಿಡ್ ಸಂಕಷ್ಟ ಸಮಯದಲ್ಲಿ ಕಾರ್ಯಕರ್ತರು ಜನರ ಜತೆ ಇರಬೇಕು ಬೂತ್ ಮಟ್ಟಕ್ಕೆ ಕಾರ್ಯಕ್ರಮಗಳು ಮುಟ್ಟಬೇಕು. ವ್ಯಾಕ್ಸಿನೇಷನ್ ಎಲ್ಲರಿಗೂ ಸಿಗುವ ಕೆಲಸ ಮಾಡಬೇಕು. ಕೊರೊನಾ ನಿರ್ವಹಣೆ ಜತೆ ಜತೆಗೆ ಪಕ್ಷ ಸಂಘಟನೆ ಮರೆಯಬಾರದು. ಕೊರೊನಾ ಮುಂದಿನ ಚುನಾವಣೆಗಳಲ್ಲಿ ಪ್ರಮುಖ ಅಸ್ತ್ರವಾಗುತ್ತದೆ. ಇದರಲ್ಲಿ ಯಶಸ್ವಿಯಾದರೆ ಪಕ್ಷಕ್ಕೆ ಲಾಭ, ಸಂಘಟನೆಗೂ ಲಾಭ. ವಿಫಲವಾದರೆ ಪಕ್ಷದ ವಿರುದ್ಧ ಪ್ರತಿಪಕ್ಷಗಳಿಗೆ ಅಸ್ತ್ರ ಸಿಕ್ಕಂತಾಗಲಿದೆ. ಹಾಗಾಗಿ ಕೋವಿಡ್ ಯಶಸ್ವಿಯಾಗಿ ನಿರ್ವಹಿಸಿ ಪಕ್ಷ ಸಂಘಟನೆ ಬಲಪಡಿಸಿ ಎಂದು ಸೂಚನೆ ನೀಡಿದರು.
ಜೂನ್ 21ರಂದು ಯೋಗ ದಿನಾಚರಣೆ ನಡೆಯಲಿದೆ. ಕೋವಿಡ್ ನಿಯಮಗಳನ್ನು ಪಾಲಿಸಿ ಪ್ರತಿ ತಾಲೂಕಿನಲ್ಲೂ ಯೋಗ ದಿನ ಆಚರಿಸಬೇಕು. ಅದರಲ್ಲಿ ಕಲಾವಿದರು, ಪ್ರಮುಖ ವ್ಯಕ್ತಿಗಳು, ಕ್ರೀಡಾಪಟುಗಳು, ಸಾರ್ವಜನಿಕರು ಭಾಗವಹಿಸಲು ಅವರಿಗೆ ಆಹ್ವಾನ ಕೊಡಬೇಕು ಎಂದು ನಡ್ಡಾ ತಿಳಿಸಿದರು.
ಜೂನ್ 25ರಂದು ತುರ್ತು ಪರಿಸ್ಥಿತಿಯ ನೆನಪಿಗಾಗಿ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಕರಾಳ ದಿನಾಚರಣೆ ಮಾಡಲು ಪಕ್ಷ ನಿರ್ಧರಿಸಿದೆ. ಆ ದಿನ ವಿಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಪರಿಸ್ಥಿತಿ ವೇಳೆ ಜೈಲಿನಲ್ಲಿದ್ದವರನ್ನು ಗುರುತಿಸುವ ಕಾರ್ಯ ನಡೆಸಬೇಕು ಎಂದು ಸಲಹೆ ನೀಡಿದರು.
ಜೂನ್ 23ರಂದು ಡಾ. ಶ್ಯಾಮ್ಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿ ಮತ್ತು ಜುಲೈ 6ರಂದು ಅವರ ಜನ್ಮದಿನ ಇದ್ದು, ಈ ಅವಧಿಯಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಡಾ. ಶ್ಯಾಮ್ಪ್ರಸಾದ್ ಮುಖರ್ಜಿ ಅವರ ಚಿಂತನೆಗಳು, ಜೀವನಸ್ಫೂರ್ತಿ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರ ಸಂಕಿರಣಗಳನ್ನು ಆಯೋಜಿಸಬೇಕು ಎಂದರು.
ನಾಳೆ ಲಸಿಕೆ ಉತ್ಸವಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಬೌರಿಂಗ್ ಆಸ್ಪತ್ರೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಲಸಿಕೆ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸೋಮವಾರ ಒಂದೇ ದಿನ 7ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.