ಬೆಂಗಳೂರು : ತುಮಕೂರಿನಿಂದಲೇ ದೇವೇಗೌಡರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕೆಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.
ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸಿ. ಗೌರಿಶಂಕರ್ ನೇತೃತ್ವದಲ್ಲಿ ನೂರಾರು ಜೆಡಿಎಸ್ ಕಾರ್ಯಕರ್ತರು ಇಂದು ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಆಗಮಿಸಿ, ಮಾತುಕತೆ ನಡೆಸಿದರು.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಗೌರಿಶಂಕರ್, ಹೆಚ್.ಡಿ. ದೇವೇಗೌಡರು ತುಮಕೂರಿನಿಂದಲೇ ಸ್ಪರ್ಧಿಸಬೇಕೆಂಬುದು ನಮ್ಮ ಆಸೆ. ಈ ಬಗ್ಗೆ ದೇವೇಗೌಡರಿಗೂ ಮನವಿ ಮಾಡಿದ್ದೇವೆ. ಅವರು ಸಹ ತುಮಕೂರಿನಿಂದ ಸ್ಪರ್ಧಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದರು.
ದೇವೇಗೌಡರು ತುಮಕೂರಿನಿಂದ ಸ್ಪರ್ಧಿಸುವ ಬಗ್ಗೆ ಇಂದು ಸಂಜೆ ಅಥವಾ ನಾಳೆ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಶಾಸಕ ಗೌರಿಶಂಕರ್ ಎಂದು ತಿಳಿಸಿದರು.
ದೇವೇಗೌಡರು ಕರ್ನಾಟಕದ ಮಾಣಿಕ್ಯ. ಅವರು ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಬಹುದು. ಅವರಿಗೆ ಮತ ಹಾಕುವುದಕ್ಕೆ ನಾವು ಪುಣ್ಯ ಮಾಡಿದ್ದೇವೆ. ದೇವೇಗೌಡರಿಗೆ ಗಂಗೆಯ ಶಾಪ ಇದೆ ಅಂತಾ ಹೇಳಿದವರು ಲೂಸ್ ಎಂದು ಶಾಸಕ ಗರಂ ಆದ್ರು.