ಬೆಂಗಳೂರು: ರಾಜ್ಯಸಭೆ ಚುನಾವಣೆ ರಂಗೇರುತ್ತಿದ್ದಂತೆಯೇ ರಾಷ್ಟ್ರೀಯ ಪಕ್ಷಗಳು ಉರುಳಿಸಿರುವ ದಾಳಕ್ಕೆ ಜೆಡಿಎಸ್ ಪಕ್ಷದ ಶಾಸಕರನ್ನು ಬೀಳದಂತೆ ನೋಡಿಕೊಳ್ಳುವುದು ದಳಪತಿಗಳಿಗೆ ತಲೆಬಿಸಿಯಾಗಿದೆ. ಈಗಾಗಲೇ ಪಕ್ಷ ತೊರೆಯಲು ಸಜ್ಜಾಗಿರುವ ಹಲವು ಶಾಸಕರನ್ನು ಹಿಡಿದಿಟ್ಟುಕೊಳ್ಳುವುದರ ಜೊತೆಗೆ ಕೊರತೆ ಬೀಳುವ 13 ಮತಗಳನ್ನು ತುಂಬಿಸಿಕೊಳ್ಳುವ ಸವಾಲು ನಾಯಕರ ಮುಂದಿದೆ. ವಾಸ್ತವ ತಿಳಿದೇ ಕೋಮುವಾದಿಗಳನ್ನು ದೂರವಿಡಬೇಕು ಎಂಬ ನೆಪವೊಡ್ಡಿ ಕಾಂಗ್ರೆಸ್ ಬೆಂಬಲ ಗಿಟ್ಟಿಸಿಕೊಳ್ಳಲು ಜೆಡಿಎಸ್ ಹವಣಿಸಿದೆ. ಆದರೆ, ಅದು ಯಶಸ್ವಿಯಾಗುವುದೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ರಾಜ್ಯ ಕಾಂಗ್ರೆಸ್ ನಾಯಕರನ್ನು ನಿರ್ಲಕ್ಷಿಸಿ ರಾಷ್ಟ್ರ ಮಟ್ಟದ ರಾಜಕಾರಣ ಮಾಡಲು ಮುಂದಾದದ್ದೇ ಜೆಡಿಎಸ್‌ಗೆ ಮುಳುವಾಯಿತೆ?, ಅಥವಾ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಅವರು ನಡೆಸಿದ ಟ್ವೀಟ್ ವಾರ್ನಿಂದ ಜೆಡಿಎಸ್‌ಗೆ ಪೆಟ್ಟು ಬಿತ್ತೇ? ಎಂಬ ಚರ್ಚೆಗಳು ಹುಟ್ಟಿಕೊಂಡಿವೆ. ಕಾಂಗ್ರೆಸ್ ಕಣಕ್ಕಿಳಿಸಿರುವ ಮುಸ್ಲಿಂ ಸಮುದಾಯದ ಅಭ್ಯರ್ಥಿ ಬೆಂಬಲಿಸದಿದ್ದರೆ ಪ್ರಶ್ನಾರ್ಥಕವಾಗಿಯೇ ಉಳಿಯುವ ಆತಂಕ ಎದುರಾಗಿದೆ.
ಅಭ್ಯರ್ಥಿ ಕಣಕ್ಕಿಳಿಸುವ ಮುನ್ನ ಜೆಡಿಎಸ್ ರಾಜ್ಯ ಕಾಂಗ್ರೆಸ್ ನಾಯಕರನ್ನು ಕಡೆಗಣಿಸಿ ಎಐಸಿಸಿ ಮಟ್ಟದಲ್ಲಿ ಲಾಬಿ ನಡೆಸಿತು. ಅದು ಗೊತ್ತಾದ ಕೂಡಲೇ ಕಾಂಗ್ರೆಸ್ ರಾಜ್ಯ ನಾಯಕರು 2ನೇ ಅಭ್ಯರ್ಥಿ ಕಣಕ್ಕಿಳಿಸಿ ಜೆಡಿಎಸ್‌ಗೆ ಸಡ್ಡು ಹೊಡೆದರು. ಇದು ಈಗ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಹೊಂದಾಣಿಕೆ ರಾಜಕಾರಣಕ್ಕೆ ಅಡ್ಡಿಯಾಗಿದೆ. ಕುಮಾರಸ್ವಾಮಿ ನಡೆಯಿಂದ ಪಕ್ಷದಲ್ಲೂ ಕೆಲವು ಶಾಸಕರು ತೀವ್ರ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ನಾಲ್ಕೈದು ಶಾಸಕರು ಕಾಂಗ್ರೆಸ್ ಪರ ಹಾಗೂ ಬಿಜೆಪಿ ಪರ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದರೂ ಅಚ್ಚರಿ ಇಲ್ಲ. ಇದು ಮತ್ತೊಂದು ಆತಂಕಕ್ಕೆ ಕಾರಣವಾಗಿದೆ.
ಮೈತ್ರಿ ಹಿನ್ನಡೆಗೆ ಕಾರಣಗಳೇನು? : ರಾಜ್ಯಸಭೆ ಚುನಾವಣೆ ವಿಚಾರದಲ್ಲಿ ಕೆಲವೇ ಕೆಲವು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವುದು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ನೇರವಾಗಿ ಟೀಕಿಸುತ್ತಿರುವುದು, ಸಿದ್ದರಾಮಯ್ಯ ಜೊತೆ ಮಾತುಕತೆಗೆ ಸಮರ್ಥ ವ್ಯಕ್ತಿಗಳನ್ನು ಕಳುಹಿಸದೇ ಇರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಜೂನ್ 9 ರಂದು ಶಾಸಕಾಂಗ ಸಭೆ : ಜೂನ್ 10 ರಂದು ರಾಜ್ಯಸಭೆ ಚುನಾವಣೆ ನಡೆಯಲಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಜೂನ್ 9 ರಂದು ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಪಕ್ಷದ ಕಚೇರಿ ಜೆ.ಪಿ. ಭವನದಲ್ಲಿ ಜೂ.9 ರಂದು ಸಂಜೆ 6.30 ಕ್ಕೆ ಸಭೆ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಜೆಡಿಎಸ್ ಉಪ ನಾಯಕ ಬಂಡೆಪ್ಪ ಕಾಶೆಂಪೂರ್, ಹೆಚ್.ಕೆ. ಕುಮಾರಸ್ವಾಮಿ ಮತ್ತಿತರರ ನಾಯಕರು ಪಾಲ್ಗೊಳ್ಳಲಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ತಂತ್ರಗಳ ಬಗ್ಗೆ ಚರ್ಚೆಯಾಗಲಿದೆ.
ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಅತೃಪ್ತ ಜೆಡಿಎಸ್ ಶಾಸಕರ ಮತಗಳ ಮೇಲೆ ಕಾಂಗ್ರೆಸ್, ಬಿಜೆಪಿ ಕಣ್ಣು !