ಬೆಂಗಳೂರು : ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡರು ಮತ್ತೆ ತಮ್ಮ ಸರಣಿ ಸಭೆಗಳನ್ನು ಮುಂದುವರಿಸಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಸಭೆಗಳಿಗೆ ಬಿಡುವು ನೀಡಿದ್ದ ಗೌಡರು, ಆಗಸ್ಟ್ 19 ರಿಂದ 24 ರವರೆಗೆ ನಿರಂತರವಾಗಿ ಜಿಲ್ಲಾವಾರು ಮುಖಂಡರ ಸಭೆಗಳನ್ನು ನಡೆಸಲಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಕೆ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಪಕ್ಷ ಸಂಘಟನೆ ಬಗ್ಗೆ ಜಿಲ್ಲಾವಾರು ಮುಖಂಡರಿಂದ ಮಾಹಿತಿ ಪಡೆಯಲಾಗುತ್ತದೆ.
ಆಗಸ್ಟ್ 19 ರಂದು ಬೆಳಗ್ಗೆ 11ರಿಂದ 3 ಗಂಟೆವರೆಗೆ ಸಭೆ ನಡೆಯಲಿದ್ದು, ಅಂದು ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಮುಖಂಡರ ಸಭೆ ನಡೆಯಲಿದೆ. ಆ. 20 ರಂದು ಮಂಡ್ಯ, ರಾಮನಗರ, ಆ. 21 ರಂದು ಚಾಮರಾಜನಗರ, ಮೈಸೂರು, ಆ. 22 ರಂದು ಚಿತ್ರದುರ್ಗ, ದಾವಣಗೆರೆ, ಆ. 23 ರಂದು ಬಳ್ಳಾರಿ, ಕೊಪ್ಪಳ, ಬೀದರ್, ಆ. 24 ರಂದು ತುಮಕೂರು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಸಭೆ ನಡೆಯಲಿದೆ.
ಜಿಲ್ಲಾವಾರು ನಡೆಯುವ ಸಭೆಗಳಿಗೆ ಆಯಾ ಜಿಲ್ಲೆಯ ಜಿಲ್ಲಾಧ್ಯಕ್ಷರು, ಕಾರ್ಯಾಧ್ಯಕ್ಷರು, ಮಹಾ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು ಪಾಲ್ಗೊಳ್ಳಬೇಕು. ಆಯಾ ತಾಲೂಕು, ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರು, ಮುಖಂಡರು, ಮಾಜಿ ಸಚಿವರು, ಸಂಸದರು, ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರು, ಸಾರ್ವತ್ರಿಕ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿರುವ ಅಭ್ಯರ್ಥಿಗಳು ತಮ್ಮ ಜಿಲ್ಲೆಗೆ ಸಂಬಂಧಪಟ್ಟಂತೆ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡ ಸೂಚಿಸಿದ್ದಾರೆ.
ಸ್ಥಳೀಯ ಪರಿಸ್ಥಿತಿ ಹಾಗೂ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪಕ್ಷವನ್ನು ಬಲಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಆಯಾ ಜಿಲ್ಲೆಗೆ ಸಂಬಂಧಿಸಿದಂತೆ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಿ, ಅಗತ್ಯಬಿದ್ದರೆ ಪದಾಧಿಕಾರಿಗಳನ್ನು ಬದಲಾವಣೆ ಮಾಡಲು ನಿರ್ಣಯಿಸಲಾಗುತ್ತದೆ. ಚುನಾವಣೆ ಯಾವಾಗ ಬಂದರೂ ಪಕ್ಷ ಸಮರ್ಥವಾಗಿ ಎದುರಿಸಲು ಸಜ್ಜಾಗಿರುವಂತೆ ಕಾರ್ಯಕರ್ತರು ಹಾಗೂ ಮುಖಂಡರಿಗೆ ಕರೆ ನೀಡುವ ಸಾಧ್ಯತೆಗಳಿವೆ. ಅಲ್ಲದೆ, ಆಡಳಿತಾರೂಢ ಬಿಜೆಪಿ ಸರ್ಕಾರದ ಆಡಳಿತ ವೈಖರಿ ಬಗ್ಗೆಯೂ ಸಮಾಲೋಚನೆ ನಡೆಸಿ ಪಕ್ಷ ಮುಂದೆ ಕೈಗೊಳ್ಳಬೇಕಾಗಿರುವ ಹೋರಾಟದ ರೂಪುರೇಷೆಗಳ ಬಗ್ಗೆಯೂ ಸಮಾಲೋಚನೆ ನಡೆಸಲಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ನಾಳೆ ಸಭೆ
ನಾಳೆ ಬೆಳಗ್ಗೆ 11 ಗಂಟೆಗೆ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ನ ‘ನಿಷ್ಠಾವಂತ ಕಾರ್ಯಕರ್ತರ ಸಭೆ’ ನಡೆಯಲಿದೆ. ಮಹಾಲಕ್ಷ್ಮಿಲೇಔಟ್ನ ಶಂಕರನಗರ ಮುಖ್ಯರಸ್ತೆಯಲ್ಲಿರುವ ದೇವಮ್ಮ ಕರೀಗೌಡ ಕನ್ವೆನ್ಷನ್ ಹಾಲ್ನಲ್ಲಿ ನಡೆಯುವ ಸಭೆಯಲ್ಲಿ ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.