ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ಗೆ ಆಯ್ಕೆಯಾಗುವ ಚುನಾವಣೆಗೆ ಸ್ಪರ್ಧಿಸಿದ್ದ ಏಳು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದ ಬೆನ್ನಲ್ಲೇ ಮೂರೂ ರಾಜಕೀಯ ಪಕ್ಷಗಳಲ್ಲಿ ರಾಜ್ಯಸಭಾ ಅಭ್ಯರ್ಥಿಗಳ ಆಯ್ಕೆಯ ಕಸರತ್ತು ಆರಂಭವಾಗಿದೆ. ನಾಲ್ಕನೇ ಅಭ್ಯರ್ಥಿ ಆಯ್ಕೆಗೆ ಜೆಡಿಎಸ್ ಯಾರ ಕಡೆ ಒಲವು ತೋರುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ.
ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಈಗಾಗಲೇ ರಾಜ್ಯ ಕಮಿಟಿಗಳಿಂದ ಹೈಕಮಾಂಡ್‌ಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಕಳುಹಿಸಲಾಗಿದೆ. ವಿಧಾನಸಭೆಯಲ್ಲಿ ಬಿಜೆಪಿ ಪಕ್ಷದ ಶಾಸಕರ ಸಂಖ್ಯಾ ಬಲದ ಆಧಾರದಲ್ಲಿ ಎರಡು ಸ್ಥಾನಗಳು ದೊರೆಯಲಿದ್ದು, ಮೂರನೇ ಅಭ್ಯರ್ಥಿಗೆ ಮತಗಳ ಕೊರತೆಯಾಗಲಿದೆ. ಈಗಾಗಲೇ ರಾಜ್ಯ ಬಿಜೆಪಿ ಕೋರ್ ಕಮಿಟಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರನ್ನು ಶಿಫಾರಸು ಮಾಡಿದ್ದು, ಎರಡನೇ ಸ್ಥಾನಕ್ಕಾಗಿ ವಿಧಾನ ಪರಿಷತ್ ಸದಸ್ಯ ಲೆಹರ್‌ಸಿಂಗ್, ಕೆ.ಸಿ. ರಾಮಮೂರ್ತಿ, ಉದ್ಯಮಿ ಪ್ರಕಾಶ್ ಶೆಟ್ಟಿ ಅವರ ಹೆಸರು ಶಿಫಾರಸು ಮಾಡಿದ್ದು, ಶೀಘ್ರ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಪಕ್ಷದ ವತಿಯಿಂದ ಎರಡನೇ ಅಭ್ಯರ್ಥಿಯಾಗಲು ಅವಕಾಶ ವಂಚಿತರಾಗುವ ಸಂಭಾವ್ಯ ಆಕಾಂಕ್ಷಿಗಳು ಬಿಜೆಪಿಯಲ್ಲಿ ಉಳಿಯುವ ಮತಗಳನ್ನು ಪಡೆದು ಬೇರೆ ಪಕ್ಷಗಳಿಂದ ಮತ ಪಡೆಯುವ ಬಗ್ಗೆ ಜೆಡಿಎಸ್ ಜೊತೆ ಮಾತುಕತೆ ನಡೆಸಲು ಸಿದ್ಧರಿರುವಂತೆ ಬಿಜೆಪಿ ನಾಯಕರು ಆಕಾಂಕ್ಷಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್‌ನಲ್ಲಿ ಒಂದು ಸ್ಥಾನ ಸಿಗಲಿದ್ದು, ಹಾಲಿ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಅವರಿಗೆ ಟಿಕೆಟ್ ನೀಡುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಒಲವು ತೋರಿದೆ. ಜೆಡಿಎಸ್‌ನಲ್ಲಿ ಸ್ವಂತ ಶಕ್ತಿಯಿಂದ ರಾಜ್ಯಸಭೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಶಕ್ತಿ ಇಲ್ಲದಿದ್ದರೂ, ಬಿಜೆಪಿ ಅಥವಾ ಕಾಂಗ್ರೆಸ್ ಮತಗಳನ್ನು ಪಡೆದುಕೊಳ್ಳುವ ಸಾಮರ್ಥ್ಯ ಇರುವ ವ್ಯಕ್ತಿಗೆ ಬೆಂಬಲ ಸೂಚಿಸುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಸಭೆ ಚುನಾವಣೆಗೆ ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಅಥವಾ ವಿಧಾನಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಜೆಡಿಎಸ್ ಗಂಭೀರ ಚಿಂತನೆ ನಡೆಸಿದೆ. ವಿಧಾನಸಭೆಯಲ್ಲಿ ಜೆಡಿಎಸ್ ಹೊಂದಿರುವ ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ರಾಜ್ಯಸಭೆಯ ಒಂದು ಸ್ಥಾನ ಗೆಲ್ಲಬೇಕಾದರೆ ರಾಷ್ಟ್ರೀಯ ಪಕ್ಷಗಳ ಬೆಂಬಲ ಪಡೆಯುವುದು ಅವಶ್ಯವಾಗಿದೆ. ಆದರೆ ರಾಜ್ಯಸಭೆ ಅಭ್ಯರ್ಥಿ ಕಣಕ್ಕಿಳಿಸುವ ಕುರಿತಂತೆ ಜೆಡಿಎಸ್ ಯಾವುದೇ ರಾಷ್ಟ್ರೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿಲ್ಲ. ಪಕ್ಷದಿಂದ ಅಭ್ಯರ್ಥಿ ಕಣಕ್ಕಿಳಿಸುವುದಾಗಿ ಘೋಷಿಸಿದೆ.
ಕಾಂಗ್ರೆಸ್ ಪಕ್ಷ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್‍ಗೆ ಬೆಂಬಲ ನೀಡದಿರಲು ನಿರ್ಧರಿಸಿದೆ. ರಾಜ್ಯಸಭೆಯ ನಾಲ್ಕನೇ ಅಭ್ಯರ್ಥಿ ಆಯ್ಕೆಗೆ ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚು ಮತಗಳು ನಮ್ಮ ಪಕ್ಷದಲ್ಲಿವೆ ಎಂದು ಜೆಡಿಎಸ್ ವರಿಷ್ಠರು ಹೇಳುತ್ತಿದ್ದಾರೆ. ನಾಮಪತ್ರ ಸಲ್ಲಿಸಲು ಮೇ 31ರವರೆಗೂ ಅವಕಾಶವಿದೆ. ವಿಧಾನಪರಿಷತ್ ಚುನಾವಣೆಯಂತೆ ಕೊನೆ ಗಳಿಗೆಯಲ್ಲಿ ಅಭ್ಯರ್ಥಿ ಆಯ್ಕೆ ಮಾಡುವ ಸಾಧ್ಯತೆ ಇದೆ.
ರಾಷ್ಟ್ರೀಯ ಪಕ್ಷಗಳು ಹೆಚ್ಚುವರಿ ಅಭ್ಯರ್ಥಿ ಕಣಕ್ಕಿಳಿಸದಿದ್ದರೆ ಅವಿರೋಧ ಆಯ್ಕೆಯಾಗಲಿದೆ. ಆಗ ಜೆಡಿಎಸ್‍ಗೆ ಒಂದು ಸ್ಥಾನ ಸುಲಭವಾಗಿ ಲಭಿಸಲಿದೆ. ಒಂದು ವೇಳೆ ಮತದಾನ ನಡೆದರೆ ಜೆಡಿಎಸ್ ಅಭ್ಯರ್ಥಿ ಗೆಲ್ಲಲು ರಾಷ್ಟ್ರೀಯ ಪಕ್ಷಗಳ ಬೆಂಬಲ ನಿರೀಕ್ಷಿಸಬೇಕಾಗುತ್ತದೆ. ಬಿಜೆಪಿಯಿಂದ ಆಯ್ಕೆ ಬಯಸಿರುವ ಕೆಲವರು ಜೆಡಿಎಸ್ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಜೆಡಿಎಸ್ ನಾಯಕರು ಯಾರ ಕಡೆ ಒಲವು ತೋರುತ್ತಾರೆ ಎನ್ನುವುದು ಮಾತ್ರ ನಿಗೂಢವಾಗಿದೆ.
ಇದನ್ನೂ ಓದಿ: ವಿಧಾನಪರಿಷತ್ ಚುನಾವಣೆ : ಏಳೂ ಅಭ್ಯರ್ಥಿಗಳು ಅವಿರೋಧ ಆಯ್ಕೆ