ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ರಾಜ್ಯ ರಾಜಕಾರಣದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಜೆಡಿಎಸ್ ಜನತಾ ಜಲಧಾರೆ ಸಮಾವೇಶದ ಮೂಲಕ ಈಗಾಗಲೇ ಚುನಾವಣಾ ರಣಕಹಳೆ ಮೊಳಗಿಸಿದೆ. ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಆಚರಿಸುವ ಮೂಲಕ ಕಾಂಗ್ರೆಸ್ ಶಕ್ತಿ ಪ್ರದರ್ಶನ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕರ್ನಾಟಕ ಭೇಟಿ ಚುನಾವಣಾ ಸಿದ್ಧತೆಗೆ ಮುನ್ನುಡಿ ಎಂದೇ ಅರ್ಥೈಸಬಹುದು.
ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ಹಾಗೂ ಸಿಎಂ ಆಗಿ ಬೊಮ್ಮಾಯಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜುಲೈ 28 ರಂದು ದೊಡ್ಡಬಳ್ಳಾಪುರದಲ್ಲಿ ಬೃಹತ್ ಸಾಧನ ಸಮಾವೇಶವನ್ನು ಬಿಜೆಪಿ ಆಯೋಜಿಸಿತ್ತು. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಿಂದಾಗಿ ಸಮಾವೇಶ ರದ್ದಾಯಿತು. ಈ ಸಮಾವೇಶ ಕೂಡ ಮುಂಬರುವ ಚುನಾವಣೆಯ ತಾಲೀಮು ಅಂತಲೇ ಬಿಂಬಿಸಲಾಗಿತ್ತು.
ಮೊದಲು ಮೇಕೆದಾಟು ಪಾದಯಾತ್ರೆ ಮಾಡಿ ಚುನಾವಣಾ ರಾಜಕೀಯ ರಂಗು ಕೊಟ್ಟಿದ್ದೇ ಕಾಂಗ್ರೆಸ್. ನಂತರ ಜೆಡಿಎಸ್ ಕೂಡ ಜನತಾ ಜಲಧಾರೆ ಮೂಲಕ ದೊಡ್ಡ ಸಂಚಲನ ಉಂಟು ಮಾಡಿತ್ತು. ಈಗ ಅದರ ಮುಂದುವರಿದ ಭಾಗವಾಗಿ ಬೆಂಗಳೂರಿನಲ್ಲಿ ಜನತಾ ಮಿತ್ರ ವಿನೂತನ ಅಭಿಯಾನ ಆರಂಭಿಸಿದ್ದು, ಅದು ಮುಗಿಯುವ ಹಂತಕ್ಕೆ ಬಂದಿದೆ.
ಜೆಡಿಎಸ್ ಪಂಚರತ್ನ ರಥ ಯಾತ್ರೆ: ಜನರ ಹತ್ತಿರಕ್ಕೆ ಹೋಗಲು ಜೆಡಿಎಸ್ ಪಂಚರತ್ನ ರಥ ಯಾತ್ರೆ ಆರಂಭಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೃಷಿ, ನೀರಾವರಿ, ಉದ್ಯೋಗ, ವಸತಿ ಹಾಗೂ ಯುವ ಮತ್ತು ಸಬಲೀಕರಣ - ಇವು ಜೆಡಿಎಸ್ನ ಪಂಚರತ್ನ ಕಾರ್ಯಕ್ರಮಗಳಾಗಿವೆ. ಈ ಅಂಶಗಳೇ 2023ರ ಚುನಾವಣೆ ಪ್ರಣಾಳಿಕೆಗಳು. ಜೆಡಿಎಸ್ ಇವುಗಳನ್ನು ಜನರ ಮುಂದೆ ಪ್ರಚಾರ ಮಾಡಲು ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಪಂಚರತ್ನ ರಥ ಯಾತ್ರೆ ಆರಂಭಿಸಲಿದೆ. ಅದಕ್ಕಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯಾದ್ಯಂತ ಪ್ರವಾಸ ಮಾಡಲು ಮುಂದಾಗಿದ್ದು, ಇದಕ್ಕೆ ವಿಶೇಷ ವಾಹನಗಳನ್ನು ಸಿದ್ಧಪಡಿಸಲಾಗುತ್ತಿದೆ. ಜನತಾ ಮಿತ್ರ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಿಗೆ ಸೀಮಿತವಾಗಿದ್ದರೆ, ಪಂಚರತ್ನ ರಥ ಯಾತ್ರೆ ರಾಜ್ಯದ 224 ಕ್ಷೇತ್ರಗಳಲ್ಲೂ ಸಂಚರಿಸಲಿದೆ.
ಹೆಚ್ಡಿಕೆ ಮತ್ತೆ ಗ್ರಾಮ ವಾಸ್ತವ್ಯ: ಮೊದಲು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಹೆಸರು ತಂದುಕೊಟ್ಟದ್ದು ಗ್ರಾಮ ವಾಸ್ತವ್ಯ ಕಾರ್ಯಕ್ರಮ. ಈಗ ಚುನಾವಣಾ ಪ್ರಚಾರ ಹಿನ್ನೆಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಗ್ರಾಮೀಣ ಜನರು, ಕಾರ್ಯಕರ್ತರ ಮನೆಗಿಂತ ಶಾಲೆ, ದೇವಸ್ಥಾನಗಳಲ್ಲಿ ತಂಗಲು ಆಲೋಚಿಸಿದ್ದಾರೆ. ರಥ ಯಾತ್ರೆ ವೇಳೆ ಪ್ರತಿನಿತ್ಯ ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಕುಮಾರಸ್ವಾಮಿ ಪ್ರಯಾಣ ಮಾಡಲಿದ್ದಾರೆ ಎಂದು ಜೆಡಿಎಸ್ ಉನ್ನತ ಮೂಲಗಳು ತಿಳಿಸಿವೆ.
ಬೃಹತ್ ಸಮಾವೇಶಕ್ಕೆ ಜೆಡಿಎಸ್ ಬ್ರೇಕ್: ಚುನಾವಣಾ ಪ್ರಚಾರಕ್ಕೆ ಈ ಬಾರಿ ಬೃಹತ್ ಸಭೆ, ಸಮಾರಂಭ, ಸಮಾವೇಶ ನಡೆಸುವ ಬದಲು ಬೀದಿ ಬೀದಿ, ಗಲ್ಲಿ ಗಲ್ಲಿಗಳಲ್ಲಿ ತೆರಳಿ ಜನರನ್ನು ಉದ್ದೇಶಿಸಿ ಹೆಚ್ಡಿಕೆ ಭಾಷಣ ಮಾಡಲಿದ್ದಾರೆ. ಪ್ರತಿ ಹಳ್ಳಿ ಹಳ್ಳಿಗೂ ತಲುಪುವ ರಥ ಯಾತ್ರೆ ಕಾರ್ಯಕ್ರಮ ರೂಪಿಸಲಾಗುತ್ತಿದೆ. ರಥ ಯಾತ್ರೆ ಸಂದರ್ಭದಲ್ಲಿ ಯಾವುದೇ ಹಾರ, ತುರಾಯಿ ಸ್ವೀಕರಿಸದಿರಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಜನರ ಕುಂದು-ಕೊರತೆ ಆಲಿಸುವುದು ಹಾಗೂ ಪಕ್ಷದ ಪ್ರಣಾಳಿಕೆ ಪ್ರಚಾರ ಪಡಿಸಲಷ್ಟೇ ಯಾತ್ರೆಯನ್ನು ಸೀಮಿತ ಗೊಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಮೂರು ಕಡೆ ಸಮಾವೇಶ: ಪಂಚರತ್ನ ರಥ ಯಾತ್ರೆ ಸಮಾರೋಪ ಅಂಗವಾಗಿ ಮೈಸೂರು, ದಾವಣಗೆರೆ, ಕಲ್ಯಾಣ ಕರ್ನಾಟಕ ಭಾಗದ ನಗರವೊಂದರಲ್ಲಿ ಮೂರು ಬೃಹತ್ ಸಮಾವೇಶ ನಡೆಸಿ ಪಕ್ಷದ ಪರ ಅಲೆ ಸೃಷ್ಟಿಸಲಿದ್ದಾರೆ. ಕುಮಾರಸ್ವಾಮಿ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಬಂಡೆಪ್ಪ ಕಾಶೆಂಪೂರ್, ಹೆಚ್.ಕೆ.ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಸಾಥ್ ನೀಡಲಿದ್ದಾರೆ. ಪ್ರಮುಖ ಕಾರ್ಯಕ್ರಮಗಳಲ್ಲಿ ಮಾತ್ರ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಸ್ವಯಂ ಘೋಷಿತ ಸಂವಿಧಾನ ಪಂಡಿತರೇ, ಗರ್ವಭಂಗ ಮರೆತಿರಾ?: ರಮೇಶ್ ಕುಮಾರ್ ವಿರುದ್ಧ ಹೆಚ್ಡಿಕೆ ಟೀಕೆ