ಬೆಂಗಳೂರು : ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಕಟ್ಟುವ ಜವಾಬ್ದಾರಿ ವಹಿಸಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ಗೆ ಹೊಸದೊಂದು ಸವಾಲು ಎದುರಾಗಿದೆ. ಕಾಂಗ್ರೆಸ್ನ ಸಾಂಪ್ರದಾಯಿಕ ಮತಬ್ಯಾಂಕ್ ಆಗಿದ್ದ ಮುಸಲ್ಮಾನ್ ಸಮುದಾಯ ಇದೀಗ ಜೆಡಿಎಸ್ ಕಡೆ ವಾಲುವ ಸ್ಥಿತಿ ನಿರ್ಮಾಣವಾಗುತ್ತಿದೆ. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ದೊಡ್ಡಮಟ್ಟದಲ್ಲಿ ಅಲ್ಪಸಂಖ್ಯಾತರ ಓಲೈಕೆ ಆರಂಭಿಸಿದ್ದಾರೆ.
ಇನ್ನೊಂದೆಡೆ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಸಿಎಂ ಇಬ್ರಾಹಿಂರನ್ನು ನೇಮಕ ಮಾಡಿದ್ದಾರೆ. ಕುಮಾರಸ್ವಾಮಿ ಆಡುತ್ತಿರುವ ಓಲೈಕೆಯ ಮಾತುಗಳು ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡಿರುವ ಸಿಎಂ ಇಬ್ರಾಹಿಂ ಅಲ್ಪಸಂಖ್ಯಾತ ಮುಸಲ್ಮಾನ ಸಮುದಾಯದ ಕಾಂಗ್ರೆಸ್ ನಾಯಕರನ್ನು ಸೆಳೆಯಲು ನಡೆಸುತ್ತಿರುವ ಪ್ರಯತ್ನ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ಗೆ ಒಂದಿಷ್ಟು ಆತಂಕದ ಸ್ಥಿತಿ ನಿರ್ಮಿಸಿದೆ.
![D. K. Shivakumar](https://etvbharatimages.akamaized.net/etvbharat/prod-images/kn-bng-01-congress-vote-bank-congress-capture-script-7208077_19042022103200_1904f_1650344520_746.jpg)
ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಎರಡೂವರೆ ವರ್ಷಗಳ ಬಳಿಕ ಕೆಪಿಸಿಸಿಗೆ ಪದಾಧಿಕಾರಿಗಳನ್ನು ನೇಮಿಸಿಕೊಂಡಿರುವ ಡಿ.ಕೆ. ಶಿವಕುಮಾರ್ಗೆ ಪಕ್ಷ ಬಲಪಡಿಸುವ ಹೊಣೆಗಾರಿಕೆಯನ್ನು ನೀಡಲಾಗಿದೆ. ಜಿಲ್ಲೆ ಹಾಗೂ ತಾಲೂಕುಗಳಿಗೆ ತೆರಳಿ ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗಿ ಹುರಿದುಂಬಿಸುವ ಹಾಗೂ ಅವರಿಗೆ ಜವಾಬ್ದಾರಿಗಳನ್ನು ನೀಡಿ ಉತ್ತೇಜಿಸುವ ಅವಕಾಶ ಡಿಕೆಶಿಗೆ ಅಷ್ಟಾಗಿ ಲಭಿಸಿಲ್ಲ. ಕಳೆದ ಎರಡೂವರೆ ವರ್ಷಗಳಲ್ಲಿ ಮಾಡಲಾಗದ ಕಾರ್ಯವನ್ನು ಚುನಾವಣೆ ವರ್ಷದಲ್ಲಿ ಮಾಡುವ ಒತ್ತಡ ಎದುರಾಗಿದೆ.
ಮತ ಬ್ಯಾಂಕ್ ಕಳೆದುಕೊಳ್ಳುವ ಚಿಂತೆಯಲ್ಲಿ ಕಾಂಗ್ರೆಸ್ : 2023ರ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಿದ್ಧಗೊಳಿಸಬೇಕು. ಇರುವ ಡಿಕೆಶಿಗೆ ಇದೀಗ ಜೆಡಿಎಸ್ ಮಗ್ಗುಲ ಮುಳ್ಳಾಗಿ ಕಾಡಿದೆ. ಒಂದೆಡೆ ಕುಮಾರಸ್ವಾಮಿ ಅಲ್ಪಸಂಖ್ಯಾತರ ಪರ ಅಖಾಡಕ್ಕಿಳಿದಿದ್ದಾರೆ. ಆಡಳಿತ ಪಕ್ಷ ಬಿಜೆಪಿ ವಿರುದ್ಧ ಹರಿಹಾಯುತ್ತಿದ್ದಾರೆ. ಇನ್ನೊಂದೆಡೆ ಜೆಡಿಎಸ್ ರಾಜ್ಯ ಅಧ್ಯಕ್ಷರಾಗಿ ನಿಯೋಜಿತರಾಗಿರುವ ಸಿಎಂ ಇಬ್ರಾಹಿಂ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರು ಹಾಗೂ ಮಾಜಿ ಶಾಸಕರು ಹಾಗೂ ಶಾಸಕರನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಒಂದೆಡೆ ಪಕ್ಷವನ್ನು ಬಲಪಡಿಸುವ ಜವಾಬ್ದಾರಿಗೆ ಕಾಂಗ್ರೆಸ್ ಪಕ್ಷದ ನಾಯಕರಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಇನ್ನೊಂದೆಡೆ ಸಾಂಪ್ರದಾಯಿಕ ಮತಬ್ಯಾಂಕ್ ಕಳೆದುಕೊಳ್ಳುವ ಆತಂಕವೂ ಎದುರಾಗುತ್ತಿದೆ.
![H. D. Kumaraswamy](https://etvbharatimages.akamaized.net/etvbharat/prod-images/kn-bng-01-congress-vote-bank-congress-capture-script-7208077_19042022103200_1904f_1650344520_1037.jpg)
ಜೆಡಿಎಸ್ನಿಂದ ಕಾಂಗ್ರೆಸ್ ನಾಯಕರಿಗೆ ಗಾಳ : ಒಂದೆಡೆ ಶಿವಾಜಿನಗರ ಮಾಜಿ ಶಾಸಕ ಹಾಗೂ ಮಾಜಿ ಸಚಿವ ರೋಷನ್ ಬೇಗ್ ಬಹುತೇಕ ಜೆಡಿಎಸ್ಗೆ ಕಾಲಿಟ್ಟಿದ್ದಾರೆ. ಬೇಗ್ ಕಳೆದ ವಿಧಾನಸಭೆ ಉಪ ಚುನಾವಣೆ ವೇಳೆ ತಟಸ್ಥವಾಗಿ ಉಳಿದಿದ್ದರು. ಆದರೆ, ಈಗ ಜೆಡಿಎಸ್ ಕೈ ಬಲಪಡಿಸಲು ಮುಂದಾಗಿರುವುದು ಸಹಜವಾಗಿ ಡಿಕೆಶಿಗೆ ಆತಂಕ ತರಿಸಿದೆ. ಮತ್ತೊಂದೆಡೆ ಮಾಜಿ ಸಚಿವ ಜಮೀರ್ ಅಹಮದ್ ಖಾನ್ರನ್ನು ಸೆಳೆಯುವ ಪ್ರಯತ್ನವನ್ನು ಇಬ್ರಾಹಿಂ ನಡೆಸಿದ್ದಾರೆ. ಜೊತೆಜೊತೆಗೆ ಗಂಗಾವತಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಅನ್ನು ಜೆಡಿಎಸ್ಗೆ ವಾಪಸ್ ಕರೆತರುವ ನಿಟ್ಟಿನಲ್ಲಿ ಇಬ್ರಾಹಿಂ ಪ್ರಯತ್ನ ಮುಂದುವರಿಸಿದ್ದಾರೆ ಎಂಬ ಮಾಹಿತಿ ಇದೆ.
ಆಂತರಿಕ ಗೊಂದಲ ಮತ್ತು ಅಸಹಕಾರ : ಕಾಂಗ್ರೆಸ್ ಹಿಂದುಳಿದ ವರ್ಗಗಳ ಮತವನ್ನು ಈಗಾಗಲೇ ಬಿಜೆಪಿ ಸೆಳೆದುಕೊಳ್ಳಲು ಗಾಳ ಹಾಕಿಕೊಂಡು ಕಾಯುತ್ತಿದೆ. ಅಲ್ಪಸಂಖ್ಯಾತ ಮುಸಲ್ಮಾನ ಸಮುದಾಯದ ಮತವನ್ನು ಜೆಡಿಎಸ್ ಸೆಳೆದರೆ ಮುಂದಿನ ವಿಧಾನಸಭೆ ಚುನಾವಣೆ ಎದುರಿಸುವ ಸಂದರ್ಭ ಕಾಂಗ್ರೆಸ್ಸಿಗೆ ಸಾಕಷ್ಟು ತೊಡಕುಗಳು ಎದುರಾಗಲಿವೆ. ಕಾಂಗ್ರೆಸ್ ಪಕ್ಷದ ಆಂತರಿಕ ಗೊಂದಲಗಳು ಹಾಗೂ ಅಸಹಕಾರದ ನಡುವೆ ಇದೀಗ ಪಕ್ಷದ ಮತದಾರರ ಸಮುದಾಯವನ್ನು ಸೆಳೆಯುವ ಪ್ರಯತ್ನ ಸಹ ಆರಂಭವಾಗಿರುವುದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ಗೆ ಸಹಜವಾಗಿ ಒತ್ತಡವನ್ನೂ ಹೆಚ್ಚಿಸಿದೆ.
![JDS party taking lead in A minority vote: Congress vote bank stolen by jds](https://etvbharatimages.akamaized.net/etvbharat/prod-images/kn-bng-01-congress-vote-bank-congress-capture-script-7208077_19042022103200_1904f_1650344520_1046.jpg)
ಅಧ್ಯಕ್ಷರಾಗಿ ಪದಗ್ರಹಣ ಮಾಡುವ ಮುನ್ನ ಪಕ್ಷದ ಹೈಕಮಾಂಡ್ ನಾಯಕರಿಗೆ ಪಕ್ಷವನ್ನು ಅಧಿಕಾರಕ್ಕೆ ತರುವ ಭರವಸೆ ನೀಡಿರುವ ಡಿ.ಕೆ. ಶಿವಕುಮಾರ್ಗೆ ಇದೀಗ ಜೆಡಿಎಸ್ ಪಕ್ಷದ ಸವಾಲು ಸಾಕಷ್ಟು ದೊಡ್ಡ ಮಟ್ಟದ ಒತ್ತಡವನ್ನು ತರುತ್ತಿದೆ. ಪಕ್ಷವನ್ನು ಅಧಿಕಾರಕ್ಕೆ ತರುವುದು ಇರಲಿ ಕಳೆದ ಸಾಲಿಗಿಂತ ಕಡಿಮೆ ಸ್ಥಾನವನ್ನು ಪಡೆಯುವ ಆತಂಕ ಸಹ ಎದುರಾಗಿದೆ. ಇದಕ್ಕೆಲ್ಲ ಶಿವಕುಮಾರ್ ಯಾವ ರೀತಿ ಪರಿಹಾರ ಕಂಡುಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: ಕೋವಿಡ್ ನಾಲ್ಕನೇ ಅಲೆ ಭೀತಿಯಲ್ಲಿ ಇದೆಯೇ ಭಾರತ? ತಜ್ಞರು ಹೇಳುವುದೇನು?