ಬೆಂಗಳೂರು : ದೇಶದ ಸ್ಥಿತಿ ಹದಗೆಡಲು ಕಾರಣ ಎರಡು ರಾಷ್ಟ್ರೀಯ ಪಕ್ಷಗಳು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಗುಡುಗಿದ್ದಾರೆ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರಸ್ತೆಗಳ ಪರಿಸ್ಥಿತಿಯನ್ನು ವೀಕ್ಷಿಸಿದ ನಂತರ ಗಣಪತಿ ನಗರದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ಏನೇನು ಕೆಲಸ ಮಾಡಿದ್ದೇನೆ ಎಂಬುದರ ಬಗ್ಗೆ ಮಾತನಾಡಬಹುದು. ಆದರೆ, ಅದಕ್ಕೂ ಸಮಯ ಬರುತ್ತದೆ.
ಕಾಂಗ್ರೆಸ್, ಬಿಜೆಪಿ ರಾಜ್ಯಕ್ಕಾಗಿ ಏನೇನು ಮಾಡಿವೆ. ಜೆಡಿಎಸ್ ಏನು ಮಾಡಿದೆ, ಎಲ್ಲದಕ್ಕೂ ಬಹಿರಂಗ ಚರ್ಚೆಗೆ ಸಿದ್ದ ಎಂದರು. ದಾಸರಹಳ್ಳಿ ಕ್ಷೇತ್ರದ ಜನರ ಪರವಾಗಿ ನಾನು ಇರುತ್ತೇನೆ. ಅಭಿವೃದ್ಧಿ ಆಗುವವರೆಗೂ ಹೋರಾಟ ಮಾಡುತ್ತೇನೆ ಎಂದರು. ದಾಸರಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರು ಒಬ್ಬರೇ ಇರೋದು. ಇದನ್ನು ಸಹಿಸಿಕೊಳ್ಳೋದಕ್ಕೆ ಆಗುತ್ತಿಲ್ಲ.
ಕುಮಾರಸ್ವಾಮಿ ಕೊಟ್ಟ ಹಣ ರಿಲೀಸ್ ಮಾಡದೇ ಕೆಳ ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ನಿಮ್ಮ ಸಮಾಧಾನಕ್ಕೆ ಒಂದು ದಿನಕ್ಕೆ ನಾನು ಬಂದಿಲ್ಲ. ಚುನಾಯಿತ ಪ್ರತಿನಿಧಿಗೆ ಈ ರೀತಿ ಮಾಡಬಾರದು. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಮಾತನಾಡುತ್ತೇನೆ. ಅವರು ಏನು ತೀರ್ಮಾನ ಮಾಡುತ್ತಾರೋ ನೋಡೋಣ ಎಂದು ದಾಸರಹಳ್ಳಿ ಜನರಿಗೆ ಭರವಸೆ ನೀಡಿದರು.
ಹೋರಾಟದ ಎಚ್ಚರಿಕೆ : ಹೋರಾಟದಿಂದಲೇ ಸಮಸ್ಯೆ ಬಗೆಹರಿಯಬೇಕು ಎಂದಾದರೆ ಅದನ್ನು ಮಾಡುತ್ತೇನೆ. ಸಿಎಂಗೆ ಮನವಿ ಪತ್ರ ಕೊಡುತ್ತೇನೆ. ಅವರು ಅದಕ್ಕೆ ಗೌರವ ಕೊಡದೇ ಇದ್ದರೆ, ಶಾಂತಿಯುತ ಪ್ರತಿಭಟನೆಯೊಂದೇ ದಾರಿ ಎಂದು ಗೌಡರು ಎಚ್ಚರಿಸಿದರು. ನಮ್ಮ ಅಹವಾಲುಗಳನ್ನು ಕಳುಹಿಸಿಕೊಟ್ಟ ನಂತರ ನಮ್ಮ ಸಮಸ್ಯೆ ಬಗೆಹರಿಸಬೇಕು. ಇಲ್ಲದೇ ಹೋದರೆ ಎಷ್ಟು ದೂರ ಹೋಗೋದಿಕ್ಕೂ ನಾನು ರೆಡಿ. ನ್ಯಾಯಯುತ ಹೋರಾಟ ಮಾಡಲು ನಾನು ಸಿದ್ಧ ಎಂದರು.
ದಾಸರಹಳ್ಳಿ ಕ್ಷೇತ್ರಕ್ಕೆ ಅನುದಾನ ತಾರತಮ್ಯ ಮಾಡಿರುವ ಕುರಿತು ಕಿಡಿಕಾರಿದ ದೇವೇಗೌಡರು, ಈ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯಾಗಬೇಕು. ಸಹಿಸಲಾಗದ ಹೇಡಿಗಳು ಪ್ರತಿಯೊಂದಕ್ಕೂ ಅಡ್ಡಿ ಮಾಡುತ್ತಿದ್ದಾರೆ. ನಿಮ್ಮ ಪರವಾಗಿ ಹೋರಾಟ ಮಾಡುತ್ತೇನೆ. ಯಾವುದೇ ಕಾರ್ಯಕ್ರಮ ರೂಪಿಸುವುದಕ್ಕೆ ಸಿದ್ಧನಿದ್ದೇನೆ ಎಂದು ಕ್ಷೇತ್ರದ ನಿವಾಸಿಗಳಿಗೆ ಅಭಯ ನೀಡಿದರು.
ಸಿಎಂ ಮನೆ ಮುಂದೆ ಧರಣಿ : ಮುಖ್ಯಮಂತ್ರಿಗಳ ಬಳಿ ನಾನೇ ಹೋಗುತ್ತೇನೆ. ಅನುದಾನ ನೀಡುವಂತೆ ಮನವಿ ಮಾಡುತ್ತೇನೆ. ರಾಜಕೀಯ ಮಾಡಿದರೆ ಸಿಎಂ ಮನೆ ಮುಂದೆ ಧರಣಿ ಕೂರುವುದಾಗಿ ಎಚ್ಚರಿಕೆ ನೀಡಿದರು.
ಮೇಕೆದಾಟು ಪಾದಯಾತ್ರೆ ಬಗ್ಗೆ ಲಘುವಾಗಿ ಮಾತನಾಡಲ್ಲ: ಮೇಕೆದಾಟು ವಿಚಾರಕ್ಕೆ ಹಲವರು ಪಾದಯಾತ್ರೆಗೆ ಹೊರಟಿದ್ದಾರೆ. ಅದರ ಬಗ್ಗೆ ನಾನು ಲಘುವಾಗಿ ಮಾತನಾಡಲ್ಲ ಎಂದ ಅವರು, ಮೇಕೆದಾಟು ವಿಚಾರಕ್ಕೆ ಸಂಬಂಧಿಸಿದಂತೆ ಜನವರಿ 3ರಂದು ಮಾಧ್ಯಮಗಳ ಜೊತೆ ಮಾತನಾಡುತ್ತೇನೆ ಎಂದರು.
ಪ್ರವಾಸ : ಜನವರಿ 4ರಂದು ಕಲಬುರಗಿಗೆ ಹೋಗುತ್ತೇನೆ. ಅಲ್ಲಿ ಬಹಿರಂಗ ಸಭೆಗಳು ಇವೆ, ಅಲ್ಲಿಯೂ ಹೋಗುತ್ತೇನೆ. ಹಳೇ ಮೈಸೂರು ಸೇರಿದಂತೆ ಎಲ್ಲಾ ಕಡೆ ಪ್ರವಾಸ ಮಾಡುತ್ತೇನೆ ಎಂದು ತಿಳಿಸಿದರು. ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವವರಿದ್ದಾರೆ. 2023ರ ಚುನಾವಣೆ ಮುಗಿಯುವವರೆಗೆ ಪ್ರತಿ ದಿನ ನಿಮ್ಮ ಮುಂದೆ ಇರುತ್ತೇನೆ. ವಾರಕ್ಕೆ ಒಂದು ಕಾರ್ಯಕ್ರಮ ಮಾಡುತ್ತೇನೆ. 30 ಜಿಲ್ಲೆಗಳಲ್ಲೂ ಪ್ರವಾಸ ಮಾಡಿ ನಾವು ಏನು ಕೆಲಸ ಮಾಡಿದ್ದೇವೆ ಎಂದು ಹೇಳುತ್ತೇವೆ ಎಂದರು.
ಹಿಂದೂ ದೇವಾಲಯ ಸ್ವತಂತ್ರ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೌಡರು, 2023ರ ಚುನಾವಣೆ ಗೆಲ್ಲಲು ಹೀಗೆ ಹೇಳುತ್ತಿದ್ದಾರೆ. ಇಷ್ಟು ದಿನ ಇಲ್ಲದೇ ಇರೋದು ಈಗ ಏಕೆ ಹೇಳ್ತಾರೆ? ಬಿ.ಎಸ್. ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್ ಇದ್ದರು. ಇಷ್ಟು ದಿನ ಏನಾಗಿತ್ತು?. ಅವರ ವರ್ಚಸ್ಸು ಕುಗ್ಗುತ್ತಾ ಇದೆ ಅನ್ನೋದು ಗೊತ್ತಾಗುತ್ತಿದೆ. ಕಾಂಗ್ರೆಸ್ ಅಷ್ಟೇ, ಬಿಜೆಪಿನೂ ಅಷ್ಟೇ.. ಅವರ ವರ್ಚಸ್ಸು ಕುಗ್ಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ಮಾಜಿ ಸಚಿವ ಎಂಸಿ ಮನಗೂಳಿ ನಿಧನ, ಅಕಾಲಿಕ ಮಳೆ ಸೇರಿ ವಿಜಯಪುರದಲ್ಲಿ 2021ರ ಹಿನ್ನೋಟ ಹೀಗಿದೆ..
ದಾಸರಹಳ್ಳಿ ಶಾಸಕ ಮಂಜುನಾಥ್ ಮಾತನಾಡಿ, ಹೆಚ್.ಡಿ. ಕುಮಾರಸ್ವಾಮಿ ಇದ್ದಾಗ ಕೋಟಿ ಕೋಟಿ ರೂ. ಹಣ ನನ್ನ ಕ್ಷೇತ್ರಕ್ಕೆ ಕೊಟ್ಟರು. ಆದರೆ, ಈ ಸರ್ಕಾರ ಆ ಎಲ್ಲ ಅನುದಾನ ತಡೆ ಹಿಡಿದಿದೆ. ನಿತ್ಯ ನನಗೆ ಚಿತ್ರ ಹಿಂಸೆ ಕೊಡುತ್ತಿದ್ದಾರೆ. ಗುತ್ತಿಗೆದಾರರಿಗೆ ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು. ಅಧಿಕಾರಿಗಳಿಗೆ ಎತ್ತಂಗಡಿ ಮಾಡಿಸುತ್ತೇನೆಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ದೇವೇಗೌಡರ ಮುಂದೆ ಅಳಲು ತೋಡಿಕೊಂಡರು.
ಇದಕ್ಕೂ ಮುನ್ನ ದೇವೇಗೌಡರು, ಸುಂಕದಕಟ್ಟೆ, ಹೆಗ್ಗನಹಳ್ಳಿ, ರಾಜಗೋಪಾಲನಗರ ಮುಖ್ಯರಸ್ತೆ, ಗಣಪತಿನಗರ, ಚಿಕ್ಕಬಾಣಾವರ ಕೆರೆ ಮತ್ತಿತರ ಕಡೆ ವೀಕ್ಷಣೆ ಮಾಡಿದರು.