ಬೆಂಗಳೂರು: ಉತ್ತರ ಕರ್ನಾಟಕದ ಎರಡು ಪ್ರಮುಖ ನೀರಾವರಿ ಯೋಜನೆಗಳು, ಮೇಕೆದಾಟು, ಎತ್ತಿನಹೊಳೆ ಸೇರಿದಂತೆ ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಜೆಡಿಎಸ್ ಹೋರಾಟದ ರೂಪುರೇಷೆಗಳನ್ನು ರೂಪಿಸುತ್ತಿದೆ.
ಕಾಂಗ್ರೆಸ್ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಘೋಷಣೆ ಮಾಡುವುದಕ್ಕೂ ಮುನ್ನವೇ ಜೆಡಿಎಸ್ ನೀರಾವರಿ ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸಲು ಪಾದಯಾತ್ರೆ ನಡೆಸುವ ಕುರಿತು ಜೆಡಿಎಸ್ ಘೋಷಿಸಿತ್ತು. ಮಹದಾಯಿ, ಕೃಷ್ಣಾ ಮೇಲ್ದಂಡೆ, ಮೇಕೆದಾಟು ಹಾಗೂ ಎತ್ತಿನಹೊಳೆ ನೀರಾವರಿ ಯೋಜನೆಗಳ ಕುರಿತಾಗಿ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಹಲವಾರು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳು, ರಾಜ್ಯದ ಪಾಲಿನ ನೀರು ಬಳಕೆಗೆ ಸಾಧ್ಯವಾಗದ ಸ್ಥಿತಿ ಬಗ್ಗೆ ಗಮನ ಸೆಳೆಯುವ ಯತ್ನವನ್ನು ಜೆಡಿಎಸ್ ಮಾಡಿದೆ.
ಇದರ ಮುಂದುವರಿದ ಭಾಗವಾಗಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ ಈಗ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಜೆಡಿಎಸ್ ತನ್ನ ಪ್ಲಾನ್ ಬದಲಿಸಲು ಚಿಂತನೆ ನಡೆಸಿದ್ದು, ನೀರಾವರಿ ಹೋರಾಟದಲ್ಲಿ ಜೆಡಿಎಸ್ ನಾಯಕರ ಮುಂದಿನ ನಡೆ ನಿಗೂಢವಾಗಿದೆ.
ರಾಜ್ಯಕ್ಕೆ ಒಂದಲ್ಲಾ ಒಂದು ರೀತಿಯ ಅನ್ಯಾಯ:
ಕೃಷ್ಣಾ, ಕಾವೇರಿ, ತುಂಗಭದ್ರಾ, ಮಹದಾಯಿ ಸೇರಿದಂತೆ ಯಾವುದೇ ನದಿ ನೀರಿನ ಹಂಚಿಕೆ ಹಾಗೂ ನೀರಾವರಿ ಯೋಜನೆಗಳ ವಿಚಾರಕ್ಕೆ ಬಂದರೆ ಕೇಂದ್ರದಿಂದ ಕರ್ನಾಟಕ ಒಂದು ರೀತಿಯಲ್ಲಿ ತಾರತಮ್ಯದ ಧೋರಣೆಗೆ ಸಿಲುಕುತ್ತಲೇ ಇದೆ. ಅದು ಯಾವುದೇ ಪಕ್ಷದ ಸರ್ಕಾರ ಇದ್ದರೂ ರಾಜ್ಯಕ್ಕೆ ಒಂದಲ್ಲಾ ಒಂದು ರೀತಿಯ ಅನ್ಯಾಯವಾಗುತ್ತಲೇ ಇದೆ. ರಾಜಕೀಯ ಬಲ, ಒತ್ತಡ ತಂತ್ರ ಬಳಸಿ ನೆರೆಯ ರಾಜ್ಯಗಳು ಕಾಲಕಾಲಕ್ಕೆ ನಮ್ಮ ಮೇಲೆ ಸವಾರಿ ಮಾಡುತ್ತಲೇ ಬಂದಿವೆ.
ರಾಜ್ಯದ ಪ್ರಮುಖ ಮೂರು ನೀರಾವರಿ ಯೋಜನೆಗಳು ಅನೇಕ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದು, ಅವುಗಳ ಅನುಷ್ಠಾನಕ್ಕಿರುವ ಅಡ್ಡಿ ನಿವಾರಣೆಗೆ ಕೇಂದ್ರ ಸರ್ಕಾರ ಮುಂದಾಗಬೇಕೆಂಬ ಒತ್ತಾಯದೊಂದಿಗೆ ಜೆಡಿಎಸ್ ಹೋರಾಟಕ್ಕೆ ಮುಂದಾಗಿದೆ. ಕೃಷ್ಣಾ ಮೇಲ್ದಂಡೆ, ಮಹದಾಯಿ ಹಾಗೂ ಮೇಕೆದಾಟು ಯೋಜನೆಗಳ ಚಿತ್ರಣ, ವಾಸ್ತವದ ಸ್ಥಿತಿ, ಅಡ್ಡಿಯ ಕುರಿತಾದ ಸಮಗ್ರ ಮಾಹಿತಿಯನ್ನು ರಾಷ್ಟ್ರಪತಿಗಳಿಗೆ ನೀಡಿದ ಮನವಿಯಲ್ಲಿ ಜೆಡಿಎಸ್ ವಿವರಿಸಿದೆ.
ಕೃಷ್ಣಾ ನದಿ ನೀರು ಹಂಚಿಕೆ ವಿಚಾರದಲ್ಲಿ ನ್ಯಾ.ಬಚಾವತ್ ಆಯೋಗ 1976ರಲ್ಲಿಯೇ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳಿಗೆ ನೀರು ಹಂಚಿಕೆ ಮಾಡಿತ್ತು. ಇದಾದ ನಂತರ ನ್ಯಾ.ಬ್ರಿಜೇಶ್ ಕುಮಾರ್ ನೇತೃತ್ವದ ಎರಡನೇ ನ್ಯಾಯಾಧಿಕರಣ ಆಲಮಟ್ಟಿ ಜಲಾಶಯ ಎತ್ತರವನ್ನು 519.60 ಮೀಟರ್‌ನಿಂದ 524.25 ಮೀಟರ್‌ಗೆ ಹೆಚ್ಚಿಸಲು ಅನುಮತಿ ನೀಡಿತ್ತಲ್ಲದೆ, ಲಭ್ಯವಾಗುವ ನೀರನ್ನು ಮೂರು ರಾಜ್ಯಗಳಿಗೆ ಹಂಚಿಕೆ ಮಾಡಿ 2013ರಲ್ಲಿಯೇ ತೀರ್ಪು ನೀಡಿದೆ.
ಕೇಂದ್ರದ ಸರ್ಕಾರದ ನೆಪವೇನು?
ನ್ಯಾಯಾಧಿಕರಣದ ತೀರ್ಪು ಹೊರಬಿದ್ದು 8 ವರ್ಷಗಳು ಕಳೆದರೂ ಇದುವರೆಗೂ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿಲ್ಲ. ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳಕ್ಕೆ ಕ್ರಸ್ಟ್ ಗೇಟ್‌ಗಳು ಇದ್ದರೂ ಅಳವಡಿಕೆ ಸಾಧ್ಯವಾಗಿಲ್ಲ. ಅವಿಭಜಿತ ಆಂಧ್ರಪ್ರದೇಶಕ್ಕೆ ನೀರು ಹಂಚಿಕೆ ಮಾಡಲಾಗಿದ್ದರೂ ಆಂಧ್ರದಿಂದ ಪ್ರತ್ಯೇಕಗೊಂಡ ತೆಲಂಗಾಣ ತನಗೆ ಪತ್ಯೇಕ ನೀರು ನೀಡಬೇಕೆಂಬ ತಗಾದೆ ತೆಗೆದಿದೆ. ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಇದರಿಂದ ಅಧಿಸೂಚನೆ ಹೊರಡಿಸಿಲ್ಲ ಎಂಬ ನೆಪವನ್ನು ಕೇಂದ್ರ ಸರ್ಕಾರ ಹೇಳುತ್ತಿದೆ.
ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ, ಮಹದಾಯಿ, ಮೇಕೆದಾಟು, ಎತ್ತಿನಹೊಳೆ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳು, ಸಮಗ್ರ ನೀರಾವರಿ ವ್ಯವಸ್ಥೆಗೆ ಒತ್ತಾಯಿಸಿ ಜೆಡಿಎಸ್ ಪಾದಯಾತ್ರೆ ನಡೆಸಲು ಮುಂದಾಗಿತ್ತು. ಆಲಮಟ್ಟಿ, ಕಣಕುಂಬಿ, ತಲಕಾಡು, ಸಕಲೇಶಪುರದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಲು ಯೋಜಿಸಿತ್ತು. ನೀರಾವರಿ ಯೋಜನೆಗಳ ಬಗ್ಗೆ ಕಾತುರದಿಂದ ನೋಡುತ್ತಿರುವ ರೈತ ಸಮುದಾಯಕ್ಕೆ ಜೆಡಿಎಸ್ ಹೋರಾಟ ಆಶಾಕಿರಣವಾಗಿ ಗೋಚರಿಸುವುದೇ? ಎಂಬ ಪ್ರಶ್ನೆ ಮೂಡಿದೆ.
'ಯಾವುದೇ ಗಿಮಿಕ್ ಮಾಡುತ್ತಿಲ್ಲ'
ಮೇಕೆದಾಟು ಹೆಸರಿನಲ್ಲಿ ಕಾಂಗ್ರೆಸ್ ಪಕ್ಷದ ಪಾದಯಾತ್ರೆ ಬಗ್ಗೆ ಟೀಕೆ ಮಾಡಲ್ಲ. ಅವರ ಸಂಘಟನೆ ದೃಷ್ಟಿಯಿಂದ ಈ ಕಾರ್ಯಕ್ರಮ ಮಾಡಿದ್ದಾರೋ ಗೊತ್ತಿಲ್ಲ. ಆದರೆ, ನಮ್ಮ ರಾಜ್ಯದ 38 ನದಿಗಳ ನೀರು ಬಳಕೆ ಮಾಡಬೇಕು. ಹೀಗಾಗಿ ನಾವು ಹೋರಾಟ ಮಾಡುತ್ತೇವೆ. ನಾವು ಯಾವುದೇ ಗಿಮಿಕ್ ಮಾಡುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಈ ಹಿಂದೆಯೇ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ವೇಗ ನಮಗೆ ಬೇಡ. ನಾವು ಬದ್ಧತೆ ಇಟ್ಟುಕೊಂಡು ಹೋಗುವವರು. ನಮ್ಮ ಕಾರ್ಯಕ್ರಮ ರೂಪರೇಷ ವಿಭಿನ್ನವಾಗಿರುತ್ತದೆ. ನೀರಾವರಿ ವಿಚಾರವಾಗಿ ರಾಜ್ಯಕ್ಕೆ ದೊಡ್ಡ ಕೊಡುಗೆ ನೀಡಿದವರಲ್ಲಿ ನಾವು ಮೊದಲಿಗರು ಎಂದು ಹೇಳಿದ್ದಾರೆ. ಜೆಡಿಎಸ್‌ಗೆ ಹೈಕಮಾಂಡ್ ಯಾವುದೇ ಅಂಕುಶ ಇಲ್ಲ, ಮುಲಾಜು ಇಲ್ಲ. ರಾಜ್ಯದ ಹಿತ ಕಾಯುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ತಾರ್ತಿಕ ಅಂತ್ಯ ಕಾಣುವವರೆಗೂ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ.
ಇದನ್ನೂ ಓದಿ: ಶಿವಕುಮಾರ್ ನೀರಾವರಿ ಮಂತ್ರಿಯಾಗಿದ್ದರೂ ಮೇಕೆದಾಟು ಯೋಜನೆ ಜಾರಿಗೆ ತರಲಿಲ್ಲ: ದೇವೇಗೌಡ