ಬೆಂಗಳೂರು : ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ಗೆ ನಡೆದ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯುವಲ್ಲಿ ವಿಫಲವಾಗಿರುವ ಜೆಡಿಎಸ್ ಭಾರಿ ಮುಖಭಂಗ ಅನುಭವಿಸಿರುವುದು ನಾಯಕರನ್ನು ಚಿಂತೆಗೀಡುಮಾಡಿದೆ.
ಈ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಲ್ಲಿಯೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರುವುದು ಮತ್ತು ಕಣಕ್ಕಿಳಿಸಿದ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪರ ಸಮರ್ಪಕವಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳದಿರುವುದು ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
25 ಸ್ಥಾನಗಳ ಪೈಕಿ ಆರು ಕ್ಷೇತ್ರದಲ್ಲಿ ಮಾತ್ರ ದಳಪತಿಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಆರು ಕ್ಷೇತ್ರಗಳ ಪೈಕಿ 4-5 ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸ ಇಟ್ಟುಕೊಂಡಿದ್ದ ಜೆಡಿಎಸ್ ನಾಯಕರ ನಿರೀಕ್ಷೆ ಹುಸಿಯಾಗಿದ್ದು, ಕೇವಲ ಎರಡು ಸ್ಥಾನಕ್ಕೆ ಮಾತ್ರ ತೃಪ್ತಿಪಟ್ಟುಕೊಳ್ಳುವಂತಾಗಿದೆ.
ಚುನಾವಣೆಯಲ್ಲಿ ಕೇವಲ ಎರಡು ಸ್ಥಾನಗಳನ್ನು ಗೆಲ್ಲುವ ಮೂಲಕ ಪರಿಷತ್‌ನಲ್ಲಿ ಒಟ್ಟು 10 ಸದಸ್ಯರನ್ನು ಮಾತ್ರ ಜೆಡಿಎಸ್ ಹೊಂದಿದ್ದು, ಎರಡು ಸ್ಥಾನಗಳನ್ನು ಕಳೆದುಕೊಂಡಿದೆ. ಜೆಡಿಎಸ್ ಭದ್ರಕೋಟೆಯಾಗಿದ್ದ ಮಂಡ್ಯ, ತುಮಕೂರು, ಕೋಲಾರ ಕ್ಷೇತ್ರಗಳನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್‌ನ ಶಾಸಕರು ಇದ್ದರೂ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವಲ್ಲಿ ಸಾಧ್ಯವಾಗಿಲ್ಲ. ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಹಾಕಬೇಕಾದ ಶ್ರಮವನ್ನು ಹಾಕುವಲ್ಲಿ ವಿಫಲವಾಯಿತು ಎಂಬ ಮಾತುಗಳು ಕೇಳಿಬಂದಿವೆ. ಮೈಸೂರಲ್ಲಿ ಗೆಲುವು ಸಾಧಿಸುವ ಮೂಲಕ ಜೆಡಿಎಸ್ ತೊರೆದ ಸಂದೇಶ ನಾಗರಾಜ್ ವಿರುದ್ಧ ಸೇಡು ತೀರಿಸಿಕೊಂಡಿದೆ.
ಹಾಸನದಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ತಮ್ಮ ಪುತ್ರ ಡಾ. ಸೂರಜ್ ರೇವಣ್ಣ ಅವರಿಗೆ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡು ಬರುವ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದರು. ಹಾಸನ ಜೆಡಿಎಸ್‌ನ ಹಿಡಿತದಲ್ಲಿರುವ ಕಾರಣ ಸುಲಭವಾಗಿ ಗೆಲುವು ಸಾಧಿಸಿದೆ. ಈ ಮೂಲಕ ದೇವೇಗೌಡ ಕುಟುಂಬದಲ್ಲಿ ಎಂಟನೇ ವ್ಯಕ್ತಿ ರಾಜಕೀಯ ಪ್ರವೇಶಿಸಿದಂತಾಗಿದೆ.
ಕೋಲಾರ ಕ್ಷೇತ್ರದಲ್ಲಿ ಈ ಹಿಂದೆ ಗೆದ್ದಿದ್ದ ಸಿ.ಆರ್.ಮನೋಹರ್ ಕಾಂಗ್ರೆಸ್‌ಗೆ ಸೇರಿರುವುದರಿಂದ ಜೆಡಿಎಸ್ ಕ್ಷೇತ್ರದ ಮೇಲಿನ ಹಿಡಿತ ಸಡಿಲಗೊಂಡು ಕಾಂಗ್ರೆಸ್ ಪಾಲಾಗಿದೆ. ಬೆಂಗಳೂರು ಗ್ರಾಮಾತರ ಕ್ಷೇತ್ರದಿಂದ ಕಣಕ್ಕಿಳಿದಿದ್ದ ವಿಧಾನಪರಿಷತ್ ಹಾಲಿ ಸದಸ್ಯ ರಮೇಶ್‌ಗೌಡ ಅವರ ವರ್ಚಸ್ಸು ಈ ಕ್ಷೇತ್ರದಲ್ಲಿ ಇಲ್ಲದಿರುವುದು ಸೋಲಿಗೆ ಕಾರಣ ಮತ್ತು ಮಂಡ್ಯದಲ್ಲಿ ಹಾಲಿ ಸದಸ್ಯ ಅಪ್ಪಾಜಿಗೌಡಗೆ ಸರಿಯಾದ ಬೆಂಬಲ ಸಿಗದಿರುವುದು ಸೋಲಿಗೆ ಕಾರಣ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿವೆ.
ವಿಧಾನ ಪರಿಷತ್ ಚುನಾವಣೆ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜೆಡಿಎಸ್ ಮತಬುಟ್ಟಿಗೆ ಕೈ ಹಾಕುವ ಪ್ರಯತ್ನ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಮುಂದಿನ ವಿಧಾನಸಭೆ ಚುನಾವಣೆಯ ಹೊತ್ತಿಗೆ ಒಕ್ಕಲಿಗ ಸೀಟುಗಳನ್ನು ಗೆಲ್ಲಲು ಶಿವಕುಮಾರ್ ಸ್ಕೆಚ್ ಹಾಕಿದರೆ, ಜೆಡಿಎಸ್ ಅಸ್ತಿತ್ವಕ್ಕೆ ಬಹಳ ಹೊಡೆತ ನೀಡುವ ಸಾಧ್ಯತೆ ಇದೆ. ಇದನ್ನು ಜೆಡಿಎಸ್ ಯಾವ ತಂತ್ರದ ಮೂಲಕ ತಡೆಯಬಹುದು? ಎಂಬುದು ಕುತೂಹಲದ ಸಂಗತಿ.
ಇದನ್ನೂ ಓದಿ: ಪರಿಷತ್‌ನಲ್ಲಿ ಸರಳ ಬಹುಮತ ಪಡೆಯುವಲ್ಲಿ ಎಡವಿದ ಕೇಸರಿ ಪಡೆ: ಆದ್ರೂ ಇನ್ಮುಂದೆ ಬಿಜೆಪಿಗಿಲ್ಲ ಬಿಲ್ ಪಾಸ್ ಕಿರಿಕಿರಿ..!