ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಸೇರಿದಂತೆ ಯಾವ ಪಕ್ಷದ ಜತೆಯೂ ಜೆಡಿಎಸ್ ಮೈತ್ರಿ ಇಲ್ಲವೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು.
ಪಕ್ಷದ ಕಚೇರಿ ಜೆ ಪಿ ಭವನದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ವಿಧಾನಸಭೆ ಚುನಾವಣೆಯಲ್ಲಿ ನಿಗದಿತ ಗುರಿ ತಲುಪಲು ಅನುಕೂಲವಾಗುವಂತೆ ಪಕ್ಷವು ಸ್ಪರ್ಧೆ ಮಾಡದಿರುವ 19 ಕ್ಷೇತ್ರಗಳಿಗೆ ಸ್ಥಳೀಯ ಮಟ್ಟದಲ್ಲಿಯೇ ನಿರ್ಧಾರ ಕೈಗೊಳ್ಳುವಂತೆ ಪಕ್ಷದ ನಾಯಕರಿಗೆ ನಿರ್ದೇಶನ ನೀಡಲಾಗಿದೆ ಎಂದರು.
ವಿಧಾನಪರಿಷತ್ ಚುನಾವಣೆ ಘೋಷಣೆ ಆದಾಗಿನಿಂದ ಜೆಡಿಎಸ್ ಬಗ್ಗೆ ಒಂದಲ್ಲ ಒಂದು ಊಹೆಯ ಸುದ್ದಿಗಳು ಹರಿದಾಡುತ್ತಿವೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಮ್ಮ ಪಕ್ಷದ ಬೆಂಬಲ ಕೇಳಿದ ಮೇಲೆ ಮತ್ತಷ್ಟು ಊಹಾಪೋಹಗಳಿಗೆ ದಾರಿ ಆಯಿತು. ಅದಕ್ಕೆಲ್ಲ ಇಂದು ತೆರೆ ಎಳೆಯಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ನಾಯಕರು, ಜೆಡಿಎಸ್ ಪಕ್ಷವು ಬಿಜೆಪಿ ಬಿ ಟೀಮ್ ಎಂದು ಹೇಳುತ್ತಿದ್ದಾರೆ. ಅಲ್ಲದೆ, ಜೆಡಿಎಸ್ 6 ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಿಸಿ ಬೇರೆ ಕಡೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯಿಂದ ನಮಗೆ ಯಾವುದೇ ಬೆಂಬಲದ ಕೋರಿಕೆ ಬಂದಿಲ್ಲ. ಯಡಿಯೂರಪ್ಪ ಅವರು ಬೆಂಬಲ ನೀಡಿ ಎಂದಿದ್ದರು. ಆದರೆ, ಜೆಡಿಎಸ್ ಏಕಾಂಗಿ ಸ್ಪರ್ಧೆ ಮಾಡಲು ಇಚ್ಛಿಸುತ್ತದೆ ಎಂದು ಅವರಿಗೆ ತಿಳಿಸಲಾಗಿದೆ ಎಂದರು.
ಇದನ್ನೂ ಓದಿ: ಮುಖ್ಯಮಂತ್ರಿ ಭೇಟಿಗೆ ಅವಕಾಶ ನೀಡದ್ದಕ್ಕೆ ಕಣ್ಣೀರು ಹಾಕಿದ ಬೆಳಗಾವಿ ರೈತ!
ನಮಗೆ ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳು ಶತ್ರುಗಳೇ. ಎರಡೂ ಪಕ್ಷಗಳ ವಿರುದ್ಧ ಹೋರಾಟ ನಡೆಸುತ್ತೇವೆ. 6 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ. ನನ್ನ ಈಗಿನ ತೀರ್ಮಾನ ಯಾರಿಗೆ ಅಸ್ತ್ರ ಆಗುತ್ತದೆ ಅನ್ನೋದು ತಾತ್ಕಾಲಿಕ. ಕಾಲಚಕ್ರ ಹೀಗೆ ಇರೋದಿಲ್ಲ. ಕಾಂಗ್ರೆಸ್ ನಾಯಕರ ಪ್ರಮಾಣಪತ್ರ ನನಗೆ ಬೇಕಿಲ್ಲ ಎಂದು ಹೆಚ್ಡಿಕೆ ಹೇಳಿದ್ರು.
ಜೆಡಿಎಸ್ ಪಕ್ಷ ಸಂಘಟನೆಗೆ ಯಾವುದೇ ತೊಂದರೆ ಆಗದಂತೆ ಸ್ಥಳೀಯ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. 2023ಕ್ಕೆ 123 ಸ್ಥಾನ ಗೆಲ್ಲಬೇಕು ಎನ್ನುವುದು ನಮ್ಮ ಗುರಿ ಎಂದು ಕುಮಾರಸ್ವಾಮಿ ಹೇಳಿದರು.