ಬೆಂಗಳೂರು: ರಾಜ್ಯದಲ್ಲಿ ನಡೆಯಲಿರುವ ಹದಿನೈದು ಕ್ಷೇತ್ರಗಳ ಉಪ ಚುನಾವಣೆಗೆ ಇನ್ನೆರಡು ದಿನಗಳಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಹಾಲಕ್ಷ್ಮಿಲೇಔಟ್ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರಗಳ ಮುಖಂಡರು ಹಾಗೂ ಕಾರ್ಯಕರ್ತರ ಸಭೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಪರೇಷನ್ ಕಮಲದ 2ನೇ ಆವೃತ್ತಿಯಿದು. 2008ರಲ್ಲಿ ಒಮ್ಮೆ ನಡೆದಿತ್ತು. ಈಗ 2019ರಲ್ಲಿ ಮತ್ತೆ ನಡೆದಿದೆ. ಅಧಿಕಾರಕ್ಕಾಗಿ ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ 15 ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದೆ. ಪಕ್ಷ ಚುನಾವಣೆ ಎದುರಿಸಲು ಸಜ್ಜಾಗಿದೆ. ಎಲ್ಲ ಜಿಲ್ಲೆಗಳ ಮುಖಂಡರ ಸಭೆಯನ್ನು ಈಗಾಗಲೇ ಜೆಡಿಎಸ್ ವರಿಷ್ಠರು ನಡೆಸಿದ್ದಾರೆ. ಇನ್ನು, ಎರಡು ದಿನಗಳಲ್ಲಿ ಎಲ್ಲ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುತ್ತೇವೆ ಎಂದರು.
ದೇವೇಗೌಡರ ಕುಟುಂಬ ಈವರೆಗೆ ಅನುಭವಿಸಿದ ನೋವು ಸಾಕಾಗಿದೆ. ಕೆಲವು ಮಾಧ್ಯಮಗಳಲ್ಲಿ ಮತ್ತೆ ಗೌಡರ ಕುಟುಂಬದ ಸದಸ್ಯರು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿ ಬರುತ್ತಿದೆ. ಆದರೆ, ಒತ್ತಡ ಇದ್ದರೂ ಸ್ಥಳೀಯರಿಗೆ ಟಿಕೆಟ್. ಸಾಮಾನ್ಯ ಕಾರ್ಯಕರ್ತರನ್ನೂ ಗೆಲ್ಲಿಸಿಕೊಂಡು ಬರ್ತೀವಿ. ನಮ್ಮ ಕುಟುಂಬ ಸದಸ್ಯರು ಯಾರೂ ಉಪ ಕದನದಲ್ಲಾಗಲಿ, ದೊಡ್ಡ ಕದನದಲ್ಲಾಗಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈವರೆಗೆ ನಾವು ಪಟ್ಟಿರುವ ಹಿಂಸೆ ಸಾಕಾಗಿದೆ. ನಮ್ಮ ಕುಟುಂಬದವರು ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಉಪ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಯಾರೂ ಸಹ ಅಭ್ಯರ್ಥಿಗಳಿರುವುದಿಲ್ಲ. ಕಾರ್ಯಕರ್ತರ ಒತ್ತಡ ಇದ್ದರೂ, ಕಾರ್ಯಕರ್ತರನ್ನೇ ನಿಲ್ಲಿಸಿ ಗೆಲ್ಲಿಸುವ ಬಗ್ಗೆ ನಮಗೆ ಒತ್ತಡವಿದೆ. ಕೆಆರ್‌ಪೇಟೆ, ಹುಣಸೂರು, ಚಿಕ್ಕಬಳ್ಳಾಪುರದಲ್ಲೂ ನಮ್ಮ ಕುಟುಂಬದವರು ಸ್ಪರ್ಧೆ ಮಾಡಬೇಕೆಂಬ ಒತ್ತಾಯವಿದೆ. ಆದರೆ, ನಮ್ಮ ಕುಟುಂಬದಿಂದ ಯಾರೂ ಸ್ಪರ್ಧೆ ಮಾಡುವುದಿಲ್ಲ ಎಂದರು.
ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಹೆಚ್ಚಿನ ಕ್ಷೇತ್ರದಲ್ಲಿ ಗೆಲ್ಲಲೂ ಜನತೆ ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಕುಮಾರಸ್ವಾಮಿ, ಬಿಜೆಪಿ ಆಡಳಿತದಿಂದ ಜನ ಈಗಾಗಲೇ ಬೇಸತ್ತಿದ್ದಾರೆ. ನೆರೆ ವಿಷಯದಲ್ಲಿ ಬಿಜೆಪಿ ವರ್ತನೆ ಜನರಲ್ಲಿ ಆಕ್ರೋಶ ಮೂಡಿಸಿದೆ. ಇನ್ನು, ಕಾಂಗ್ರೆಸ್ ನಾಯಕರ ಕಿತ್ತಾಟ ಜನರಿಗೆ ಬೇಸರ ಮೂಡಿಸಿದೆ. ಈ ಮಧ್ಯೆ ಜನರಿಗೆ ವಿಶ್ವಾಸ ಮೂಡಿಸುವ ಕೆಲಸ ಮಾಡುತ್ತೇವೆ ಎಂದರು.
ಬಿಜೆಪಿ ಬರ ನಿರ್ವಹಣೆ ಮಾಡಿಲ್ಲ. ಕಾಂಗ್ರೆಸ್ನಲ್ಲಿ ಸ್ಥಳೀಯ ಮುಖಂಡರ ಗೊಂದಲವಿದೆ. ನಾನು ಸಿಎಂ ಆಗಿದ್ದಾಗ ಅನೇಕ ಅಭಿವೃದ್ಧಿ ಕಾರ್ಯಕ್ರಮ ಜಾರಿಗೆ ತಂದಿದ್ದೆ. ಸಾಲಮನ್ನಾ, ಋಣಮುಕ್ತ ಕಾಯ್ದೆ ಜಾರಿಗೆ ತಂದೆ. ಆದರೆ, ಬಿಜೆಪಿ ಋಣಮುಕ್ತ ಕಾಯ್ದೆ ಜಾರಿ ಸರಿಯಾಗಿ ತರುತ್ತಿಲ್ಲ. ಬಡ್ಡಿ ತೆಗೆದುಕೊಳ್ಳುವವರಿಗೆ ಬಿಜೆಪಿಯವರು ಅನುಕೂಲ ಮಾಡಿಕೊಡುತ್ತಿದ್ದಾರೆ. ಬಡವರ ಬಂಧು ಸರಿಯಾಗಿ ಜಾರಿಯಾಗಿಲ್ಲ. ಬಿಜೆಪಿ ವೈಫಲ್ಯದ ಬಗ್ಗೆ ಜನರ ಬಳಿ ಹೋಗುತ್ತೇವೆ ಎಂದು ಗುಡುಗಿದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ನಾವು ಶಕ್ತಿ ಮೀರಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ನೆರವು ನೀಡಿ ಹೃದಯ ವೈಶಾಲ್ಯ ಮೆರೆದವು. ಆದರೆ, ಕಾಂಗ್ರೆಸ್ನಿಂದ ಈ ಸಹಾಯ ನಮಗೆ ಸಿಗಲಿಲ್ಲ. ಹೀಗಾಗಿ ಯಾರ ಸಹವಾಸವೂ ಬೇಡ ಅಂತಾ ಸ್ವತಂತ್ರವಾಗಿಯೇ ನಾವು ಉಪ ಚುನಾವಣೆ ಎದುರಿಸುತ್ತೇವೆ ಎಂದರು.