ಬೆಂಗಳೂರು : ಸಿಡಿ ಕೇಸ್ನಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಬ್ಲಾಕ್ ಮೇಲ್ ಮಾಡಿದ ಆರೋಪ ಪ್ರಕರಣದಲ್ಲಿ, ಮಾಜಿ ಪತ್ರಕರ್ತ ನರೇಶ್ ಗೌಡ ಹಾಗೂ ಶ್ರವಣ್ಗೆ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಓದಿ: ಸಿಡಿ ಪ್ರಕರಣ: ಇಂದು ನರೇಶ್, ಶ್ರವಣ್ ಜಾಮೀನು ಅರ್ಜಿ ತೀರ್ಪು
ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ನರೇಶ್ ಗೌಡ ಹಾಗೂ ಶ್ರವಣ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನಗರದ 91ನೇ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಲಕ್ಷ್ಮಿನಾರಾಯಣ ಭಟ್ ಈ ಆದೇಶ ನೀಡಿದ್ದಾರೆ.
ವಿಚಾರಣೆ ಹಿನ್ನೆಲೆ : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ತೇಜೋವಧೆ ಮಾಡುವ ಉದ್ದೇಶದಿಂದ ನಕಲಿ ಸಿಡಿ ಸೃಷ್ಟಿಸಿದ್ದಾರೆ. ಬಳಿಕ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಜಾರಕಿಹೊಳಿ ಆಪ್ತ ನಾಗರಾಜ್ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕಳೆದ ಮಾರ್ಚ್‌ನಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಬಂಧಿಸುವ ಸಾಧ್ಯತೆ ಇರುವುದರಿಂದ ನರೇಶ್ ಗೌಡ ಹಾಗೂ ಶ್ರವಣ್ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎ.ಎಸ್ ಪೊನ್ನಣ್ಣ ವಾದ ಮಂಡಿಸಿದ್ದರು. ಇದೊಂದು ರಾಜಕೀಯ ಪ್ರೇರಿತ ಪ್ರಕರಣವಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ರಮೇಶ್ ಜಾರಕಿಹೊಳಿ ಅವರನ್ನು ರಕ್ಷಿಸಲು ಎಸ್ಐಟಿ ಪೊಲೀಸರು ಅರ್ಜಿದಾರರು ಹಾಗೂ ಸಂತ್ರಸ್ತ ಯುವತಿಯ ವಿರುದ್ಧವೇ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಈ ಮೂಲಕ ಅತ್ಯಾಚಾರ ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ಅಮಾಯಕ ಎಂಬಂತೆ ಬಿಂಬಿಸುವ ಪ್ರಯತ್ನ ನಡೆದಿದೆ.
ದೂರು ನೀಡುವ ವೇಳೆ ಅರ್ಜಿದಾರರು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದರು ಎಂದು ಆರೋಪಿಸಿದ್ದರು. ಪೊಲೀಸರು ಬ್ಲಾಕ್ ಮೇಲ್ ಮಾಡಿ ಹಣ ಪಡೆದಿದ್ದಾರೆ ಎಂದು ಮೂಲ ಆರೋಪವನ್ನೇ ಬದಲಿಸಿದ್ದಾರೆ. ಎಸ್ಐಟಿ ವಿಚಾರಣೆ ವೇಳೆ ರಮೇಶ್ ಜಾರಕಿಹೊಳಿ ಸಮ್ಮತಿಯಿಂದಲೇ ಲೈಂಗಿಕ ಸಂಪರ್ಕ ನಡೆದಿದ್ದಾಗಿ ಹೇಳಿದ್ದಾರೆ.
ಇನ್ನು, ಹಣ ಕೊಟ್ಟಿದ್ದರೆ ಯಾರ್ಯಾರಿಗೆ ಎಷ್ಟೆಷ್ಟು ಹಣ ಕೊಟ್ಟಿದ್ದಾರೆಂದು ದಾಖಲಿಸಬೇಕಿತ್ತು. ಆದರೆ, ಎಸ್ಐಟಿ ಯಾವುದೇ ಸೂಕ್ತ ಆಧಾರವಿಲ್ಲದೆ ಅರ್ಜಿದಾರರ ವಿರುದ್ಧ ಆಕ್ಷೇಪಣೆ ಸಲ್ಲಿಸಿದೆ. ಆರೋಪಗಳಲ್ಲಿ ಹುರುಳಿಲ್ಲ. ಹೀಗಾಗಿ, ಜಾಮೀನು ನೀಡಬೇಕು ಎಂದು ಕೋರಿದ್ದರು. ನ್ಯಾಯಾಲಯ ಕೂಡ, ಪ್ರಕರಣದಲ್ಲಿ ಬ್ಲಾಕ್ ಮೇಲ್ ಮಾಡಿ ಹಣ ಪಡೆದಿದ್ದರೆ ಜಾರಕಿಹೊಳಿ ಯಾರ್ಯಾರಿಗೆ ಎಷ್ಟೆಷ್ಟು ಹಣ ನೀಡಿದ್ದಾರೆಂದು ಏಕೆ ಉಲ್ಲೇಖಿಸಿಲ್ಲ ಎಂದು ಎಸ್ಐಟಿ ಪರ ವಕೀಲರನ್ನು ಪ್ರಶ್ನಿಸಿತ್ತು. ಆರೋಪಿತರು ಯುವತಿಯೊಂದಿಗೆ ಸಂಚು ರೂಪಿಸಿ ಸಿಡಿ ಸೃಷ್ಟಿಸಿ, ಹಣಕ್ಕಾಗಿ ಬ್ಯಾಕ್ ಮೇಲ್ ಮಾಡಿದ್ದಾರೆ ಎಂದು ಎಸ್ಐಟಿ ಆರೋಪಿಸಿತ್ತು.