ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮ್ಮ ವಿರುದ್ಧದ ಷಡ್ಯಂತ್ರದಲ್ಲಿ 2+3+4 ತೊಡಗಿದ್ದಾರೆ ಎನ್ನುವ ಆರೋಪ ಮಾಡಿದ್ದಾರೆ.
ರಮೇಶ್ ಸಹೋದರ ಬಾಲಚಂದ್ರ ಜಾರಕಿಹೊಳಿ ಕೂಡ ಇದೇ ಸೂತ್ರವನ್ನು ಮಾಧ್ಯಮಗಳ ಮುಂದೆ ಹೇಳಿದ್ದರು. ಜಾರಕಿಹೊಳಿ ಸಹೋದರರು ಹೇಳಿದ ಈ ಸೂತ್ರ ಏನು ಎನ್ನುವ ಬಗ್ಗೆ ಕುತೂಹಲ ಹೆಚ್ಚಿದೆ.
ನಕಲಿ ಸಿಡಿ ಬಹಿರಂಗದ ಹಿಂದೆ ನಡೆದಿರುವ ಷಡ್ಯಂತ್ರಗಳ ಕುರಿತು ಜಾರಕಿಹೊಳಿ ಸಹೋದರರು ಪ್ರತ್ಯೇಕವಾಗಿ ಮಾಧ್ಯಮಗೋಷ್ಟಿ ನಡೆಸಿ ಮಾಹಿತಿ ನೀಡಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಮಾಧ್ಯಮಗೋಷ್ಟಿ ನಡೆಸಿದ ಎರಡು ದಿನದ ನಂತರ, ರಮೇಶ್ ಜಾರಕಿಹೊಳಿ ಸಹ ಇಂದು ಮಾಧ್ಯಮಗಳ ಎದುರು ಷಡ್ಯಂತ್ರದ ಕುರಿತು ಆರೋಪಗಳನ್ನು ಮಾಡಿದ್ದಾರೆ.
ಸಹೋದರರಿಬ್ಬರೂ ಹೇಳಿದ ಕಾಮನ್ ಸೂತ್ರ 2+3+4. ಈ ಷಡ್ಯಂತ್ರದಲ್ಲಿ ಇಬ್ಬರು ಯುವತಿಯರಿದ್ದಾರೆ. ಮೂವರು ಪತ್ರಕರ್ತರಿದ್ದಾರೆ ಹಾಗು ನಾಲ್ವರು ರಾಜಕಾರಣಿಗಳಿದ್ದಾರೆ ಎಂದು ಜಾರಕಿಹೊಳಿ ಆಪ್ತರು ವಿಶ್ಲೇಷಣೆ ಮಾಡಿದ್ದಾರೆ. ಯುವತಿಗೆ 5 ಕೋಟಿ ರೂ.ಗಳನ್ನು ನೀಡಲಾಗಿದೆ ಎನ್ನುವ ಆರೋಪವನ್ನು ಜಾರಕಿಹೊಳಿ ರಮೇಶ್ ಮಾಡಿದ್ದಾರೆ. ವಿದೇಶದಲ್ಲಿ ಅಪಾರ್ಟ್ಮೆಂಟ್ ಕೊಡಿಸಿದ್ದಾರೆ. ವ್ಯವಸ್ಥಿತವಾಗಿ ಷಡ್ಯಂತ್ರ ರೂಪಿಸಿದ್ದಾರೆ ಎನ್ನುವ ಆರೋಪ ಮಾಡಿದ್ದಾರೆ.
ಓದಿ: 4 ತಿಂಗಳ ಮೊದಲೇ ಸಿಡಿ ಬಗ್ಗೆ ಗೊತ್ತಿತ್ತು, ಮಹಾನ್ ನಾಯಕನಿಂದ ಇದೆಲ್ಲಾ ನಡೆದಿದೆ: ರಮೇಶ್ ಜಾರಕಿಹೊಳಿ - VIDEO
ಸಮಯಕ್ಕೂ ಮೊದಲೇ ಮಾಧ್ಯಮಗೋಷ್ಟಿ ಆರಂಭ: ಇಂದು ಬೆಳಗ್ಗೆ 10.30 ಕ್ಕೆ ಮಾಧ್ಯಮಗೋಷ್ಟಿ ನಡೆಸುವುದಾಗಿ ರಮೇಶ್ ಜಾರಕಿಹೊಳಿ ಮಾಧ್ಯಮಗಳಿಗೆ ಆಹ್ವಾನ ಕಳಿಸಿದ್ದರು. ಆದರೆ, ಸಮಯ ಬದಲಾವಣೆಯ ಯಾವುದೇ ಸೂಚನೆ ನೀಡದೆ ಏಕಾಏಕಿ 9.45ಕ್ಕೆ ಮಾಧ್ಯಮಗೋಷ್ಟಿ ಆರಂಭಿಸಿದರು. ಯಾವುದಕ್ಕೂ ನೇರ ಉತ್ತರ ನೀಡದೆ ನಿಮಗೇ ಎಲ್ಲಾ ಗೊತ್ತಿದೆ. ನೀವೇ ಯೋಚಿಸಿ, ವಿಶ್ಲೇಷಣೆ ಮಾಡಿ ಎನ್ನುವ ಉತ್ತರ ನೀಡಿ ತರಾತುರಿಯಲ್ಲಿ ಪ್ರೆಸ್ ಕಾನ್ಫರೆನ್ಸ್ ಮುಗಿಸಿದರು.
ಸಮಯಕ್ಕೂ ಮೊದಲು ಮಾಧ್ಯಮಗೋಷ್ಟಿ ಆರಂಭಿಸಿ, ತರಾತುರಿಯಲ್ಲಿ ಯಾಕೆ ಮುಗಿಸಿದರು ಎನ್ನುವುದು ಹೊಸ ಪ್ರಶ್ನೆ ಹುಟ್ಟುವಂತೆ ಮಾಡಿದೆ.