ಬೆಂಗಳೂರು : ಮುಂಬರುವ ಫೆಬ್ರವರಿಯಲ್ಲಿ ರಾಜ್ಯದಲ್ಲಿ ನಡೆಯಲಿರುವ ವಿಶ್ವ ಹೂಡಿಕೆದಾರರ ಸಭೆ ದಿನಾಂಕ ಘೋಷಣೆಯ ಬಗ್ಗೆ ಹೂಡಿಕೆದಾರರನ್ನು ಸೆಳೆಯುವಲ್ಲಿ ಮುಂಚೂಣಿಯಲ್ಲಿರುವ ಗುಜರಾತ್ ಸರ್ಕಾರದ ಜೊತೆ ರಾಜ್ಯದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾತುಕತೆ ನಡೆಸಿದ್ದು, ಸದ್ಯದಲ್ಲೇ ದಿನಾಂಕ ಘೋಷಣೆ ಮಾಡಲಿದ್ದಾರೆ.
ಮೂರು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಸಚಿವ ಜಗದೀಶ್ ಶೆಟ್ಟರ್, ಆ ರಾಜ್ಯದ ಕೈಗಾರಿಕಾ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿರುವ ವಿಶೇಷ ಹೂಡಿಕೆ ವಲಯ (ಎಸ್‌ಐಆರ್)ದ ಕುರಿತು ಅಲ್ಲಿನ ಸರ್ಕಾರದೊಂದಿಗೆ ಚರ್ಚೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿರುವ ಧೋಲೇರಾ (SIR) ದೇಶದ ಮೊದಲ ವ್ಯವಸ್ಥಿತವಾಗಿ ಯೋಜನೆ ಮಾಡಿ ನಿರ್ಮಿಸಲಾಗುತ್ತಿರುವ ವಿಶೇಷ ಹೂಡಿಕೆ ವಲಯ. ದೇಶದ ಮೊದಲ ಸ್ಮಾರ್ಟ್ ಸಿಟಿ ಎನ್ನುವ ಹೆಗ್ಗಳಿಕೆಯೂ ಇದರದ್ದಾಗಿದೆ.
ಈ ವಿಶೇಷ ಹೂಡಿಕೆ ವಲಯ (ಎಸ್ ಐ ಆರ್)ದಿಂದ ಗುಜರಾತ್‌ನಲ್ಲಿ ಹೆಚ್ಚಿನ ಹೂಡಿಕೆ ಆಗುತ್ತಿದೆ. ರಾಜ್ಯ ಕೈಗಾರಿಕಾ ನೀತಿಯಲ್ಲಿ ಈಗಾಗಲೇ ಘೋಷಣೆ ಮಾಡಿರುವಂತಹ ವಿಶೇಷ ಹೂಡಿಕೆ ವಲಯ ರಚನೆಗೆ ಮಾಹಿತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಹಾಗೂ ಈ ಸಂಬಂಧ ಗುಜರಾತ್ ರಾಜ್ಯ ಹೊರತಂದಿರುವ ನೀತಿ ನಿಯಮಗಳಲ್ಲಿ ಮಾಡಲಾದಂತಹ ಬದಲಾವಣೆಯ ಬಗ್ಗೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಜೊತೆ ಚರ್ಚೆ ನಡೆಸಲಾಗಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹಿರಿಯ ಮತ್ತು ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯ ಅಧಿಕಾರಿಗಳ ತಂಡದ ಜೊತೆ ದೋಲೇರಾ, ಗಿಫ್ಟ್ ಸಿಟಿ ಸೇರಿದಂತೆ ಹಲವಾರು ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿ ಗಮನಿಸಿದ್ದೇವೆ.
ಗುಜರಾತ್ ರಾಜ್ಯದಲ್ಲಿ ಕೈಗಾರಿಕಾಭಿವೃದ್ಧಿಗೆ ಭೂ ಪ್ರದೇಶವನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ನಮ್ಮ ರಾಜ್ಯದಲ್ಲಿ ಹೊರ ತಂದಿರುವ ನೀತಿಗಳ ಬಗ್ಗೆಯೂ ತಿಳಿಸಿಕೊಡಲಾಯಿತು ಎಂದು ಶೆಟ್ಟರ್ ಮಾಹಿತಿ ನೀಡಿದರು.